ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ: ಕತ್ತಲೆಯಲ್ಲಿ ಕೈವಾರದ ನಾಡಕಚೇರಿ

ಸರ್ಕಾರಿ ಕಟ್ಟಡ ಸಮರ್ಪಕ ಬಳಕೆ ಯಾವಾಗ?
Published : 19 ಆಗಸ್ಟ್ 2024, 7:03 IST
Last Updated : 19 ಆಗಸ್ಟ್ 2024, 7:03 IST
ಫಾಲೋ ಮಾಡಿ
Comments

ಚಿಂತಾಮಣಿ: ಸರ್ಕಾರಿ ಕಚೇರಿಗಳ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಇರುವ ಆಸಕ್ತಿ ಬಳಕೆ ಮಾಡಿಕೊಳ್ಳಲು ಹಾಗೂ ನಿರ್ವಹಣೆ ಮಾಡಲು ಇರುವುದಿಲ್ಲ. ಲಕ್ಷಾಂತರ ರೂಪಾಯಿ ಖರ್ಚುಮಾಡಿ ಕಟ್ಟಿರುವ ಕಟ್ಟಡಗಳು ಬಳಕೆ ಮಾಡಿಕೊಳ್ಳದೆ ಹಾಳಾಗುತ್ತವೆ. ಸಾರ್ವಜನಿಕರ ತೆರಿಗೆ ಹಣ ನೀರು ಪಾಲಾಗುತ್ತಿದೆ.

ತಾಲ್ಲೂಕಿನಲ್ಲಿ ಕೈವಾರ ದೊಡ್ಡ ಹೋಬಳಿಯಾಗಿದ್ದು, ಕೈವಾರ, ಮಸ್ತೇನಹಳ್ಳಿ, ತಳಗವಾರ, ಸಂತೇಕಲ್ಲಹಳ್ಳಿ, ಹಿರೇಕಟ್ಟಿಗೇನಹಳ್ಳಿ, ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿದೆ. ಗ್ರಾಮೀಣ ಜನರು ವಿಶೇಷವಾಗಿ ರೈತರು ಜಮೀನುಗಳ ವ್ಯವಹಾರ ಮತ್ತಿತರ ಕೆಲಸ ಕಾರ್ಯಗಳಿಗಾಗಿ ತಾಲ್ಲೂಕು ಕೇಂದ್ರಕ್ಕೆ ಅಲೆದಾಡಲು ತೊಂದರೆ ಆಗುತ್ತದೆ. ಹೋಬಳಿ ಕೇಂದ್ರಗಳಲ್ಲೇ ಅವರ ದಾಖಲೆ ಲಭಿಸಬೇಕು ಎನ್ನುವ ಚಿಂತನೆಯಿಂದ ಸರ್ಕಾರ ಹೋಬಳಿ ಕೇಂದ್ರಗಳಲ್ಲಿ ನಾಡಕಚೇರಿ  ಸ್ಥಾಪಿಸಿದೆ.

ತಾಲ್ಲೂಕಿನಲ್ಲಿ ಮತ್ತು ಜಿಲ್ಲೆಯಲ್ಲೇ ಪ್ರಥಮವಾಗಿ ಕೈವಾರದಲ್ಲಿ 1986ರಲ್ಲಿ ನಾಡಕಚೇರಿಯನ್ನು ತೆರೆಯಲಾಗಿದೆ. ನಾಡಕಚೇರಿ ಆರಂಭಿಸಿ ಸುಮಾರು 38 ವರ್ಷಗಳಾದರೂ ಇದುವರೆಗೂ ಕಟ್ಟಡದ ಭಾಗ್ಯ ದೊರೆತಿಲ್ಲ. ಕಚೇರಿಗೆ ನಾಮಫಲವೂ ಇಲ್ಲ. ಹಂದಿ ಗೂಡಿನಂತಿರುವ ಒಂದು ಸಣ್ಣ ಕಟ್ಟಡದಲ್ಲಿ ನಾಡಕಚೇರಿ ಕಾರ್ಯನಿರ್ವಹಿಸುತ್ತದೆ. ಗೂಡಿನಂತಿರುವ ಕಚೇರಿಯಲ್ಲಿ ಮೂರು ಸಣ್ಣ ಕೊಠಡಿಗಳಿವೆ. ಗಾಳಿ, ಬೆಳಕು ಮರೀಚಿಕೆಯಾಗಿದೆ.

ಬೆಳಗ್ಗೆಯಿಂದ ಸಂಜೆಯವರೆಗೂ ಲೈಟ್ ಹಾಕಿರಲೇಬೇಕು. ಇಲ್ಲದಿದ್ದರೆ ಕೆಲಸ ಮಾಡಲು ಸಾಧ್ಯವಿಲ್ಲ. ಒಂದು ಕೊಠಡಿಯಲ್ಲಿ ಉಪ ತಹಶೀಲ್ದಾರ್, ಒಂದು ದಾಖಲೆಗಳ ಕೊಠಡಿ, ಇನ್ನೊಂದು ಕಂಪ್ಯೂಟರ್ ಆಪರೇಟರ್ ಕೊಠಡಿಯಾಗಿದ್ದು ಕನಕನ ಕಿಂಡಿಯಂತಿದೆ. ಗೋಡೆಗಳ ಪ್ಲಾಸ್ಟಿಂಗ್, ನೆಲಹಾಸು ಕಿತ್ತು ಬಂದಿದೆ. ಮಳೆ ಬಂದರೆ ಸೋರುತ್ತದೆ. ಜತೆಗೆ ರಸ್ತೆ ನೀರು ಒಳನುಗ್ಗುತ್ತದೆ. ಪ್ರತಿಯೊಂದು ಕೊಠಡಿಯಲ್ಲೂ ಒಬ್ಬರು ಒಳಗಡೆ ಹೋದರೆ ಒಬ್ಬರು ಈಚೆಗೆ ಬರಬೇಕು. ಇದು ಕೈವಾರ ನಾಡಕಚೇರಿಯ ದು:ಸ್ಥಿತಿ.

ಕೈವಾರದಿಂದ ಹುಲುಗುಮ್ಮನಹಳ್ಳಿಗೆ ಹೋಗುವ ರಸ್ತೆಯಲ್ಲಿ ₹20 ಲಕ್ಷ ವೆಚ್ಚದಲ್ಲಿ ನೂತನ ನಾಡಕಚೇರಿಯನ್ನು ನಿರ್ಮಿಸಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ 2-3 ವರ್ಷಗಳಿಂದ ಹೊಸ ಕಟ್ಟಡ ಕುಡುಕರ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕಟ್ಟಡದ ಸುತ್ತಲೂ ಗಿಡಗಳು ಬೆಳೆದುಕೊಂಡಿವೆ. ರಸ್ತೆಗೆ ಸ್ವಲ್ಪ ದೂರದಲ್ಲಿ ಮರೆಯಾಗಿರುವುದರಿಂದ ಹಗಲು-ರಾತ್ರಿ ಕುಡುಕರ ಪಾರ್ಟಿಗಳು ನಡೆಯುತ್ತವೆ. ಅನೈತಿಕ ಚಟುವಟಿಕೆಗಳಿಗೆ ಮೀಸಲಾಗಿದೆ ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

ನೂತನ ಕಟ್ಟಡದ ಸ್ಥಳವೂ ಸಹ ನಾಡಕಚೇರಿಗೆ ಯೋಗ್ಯವಾದ ಸ್ಥಳವಲ್ಲ. ಕಚೇರಿ ಸುತ್ತಲೂ ಕಾಂಪೌಂಡ್ ಇಲ್ಲ. ರಸ್ತೆಯಿಂದ ದೂರವಿದ್ದು ಸುತ್ತಲೂ ಮರಗಿಡಗಳಿವೆ. ಜನಸಂದಣಿ ಪ್ರದೇಶವಲ್ಲ. ನಾಡಕಚೇರಿಗೆ ಕಾವಲುಗಾರ ಇರುವುದಿಲ್ಲ. ಹೀಗಾಗಿ ದಾಖಲೆಗಳ ರಕ್ಷಣೆ ಕಷ್ಟಸಾಧ್ಯ ಎಂಬ ಮಾತುಗಳು ಅಧಿಕಾರಿ ವಲಯದಲ್ಲಿ ಕೇಳಿಬರುತ್ತಿವೆ.

ಸ್ಥಳ ಗುರುತಿಸಿ, ಪ್ರಸ್ತಾವ ಸಲ್ಲಿಸುವಾಗ ಸಂಬಂಧಪಟ್ಟ ಅಧಿಕಾರಿಗಳು ಯೋಚಿಸಬೇಕಾಗಿತ್ತು. ಕಟ್ಟಡ ಕಾಮಗಾರಿ ಪೂರ್ಣವಾಗಿ ಮುಕ್ತಾಯವಾಗಿದ್ದು ಈಗ ಚಿಂತಿಸಿ ಪ್ರಯೋಜನವೇನು? ಕಾಂಪೌಂಡ್ ಮತ್ತಿತರ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಸಿಕೊಂಡು ಆದಷ್ಟು ಶೀಘ್ರವಾಗಿ ನಾಡಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಸರ್ಕಾರಿ ವ್ಯವಸ್ಥೆಯಲ್ಲಿ ನೂತನ ಕಟ್ಟಡಗಳು ಮಂಜೂರಾಗಿ ಅನುದಾನ ಬಿಡುಗಡೆಯಾಗುವವರೆಗೂ ಬೆನ್ನು ಬೀಳುತ್ತಾರೆ. ಅನುದಾನ ಬಿಡುಗಡೆಯಾಗಿ, ಬಿಲ್ಲುಗಳು ಪಾಸಾಗಿ ವಿವಿಧ ಹಂತಗಳಲ್ಲಿ ಅವರವರ ಕಮಿಷನ್ ಅವರಿಗೆ ಸೇರಿದ ನಂತರ ಕಟ್ಟಡಗಳ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ. ಕೈವಾರದ ನೂತನ ನಾಡಕಚೇರಿ ಕಟ್ಟಡದ ಪರಿಸ್ಥಿತಿಯೂ ಅದೇ ಆಗಿದೆ. ಕಟ್ಟಡ ಬಳಕೆಯಾಗುತ್ತಿದೆಯೇ? ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾಗಿರುವ ಕಟ್ಟಡ ಸದುಪಯೋಗ ಆಗುತ್ತಿದೆಯೇ ಎನ್ನುವ ಚಿಂತನೆ ಮಾಡುವುದಿಲ್ಲ ಎಂದು ಮಾಹಿತಿ ಹಕ್ಕಿನ ಕಾರ್ಯಕರ್ತರು ಟೀಕಿಸುತ್ತಾರೆ.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನಾಡಕಚೇರಿಯಲ್ಲಿ ಕುಡಿಯುವ ನೀರು, ಶೌಚಾಲಯ, ಕೆಲಸ-ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ಕುಳಿತುಕೊಳ್ಳಲು ಸ್ಥಳವಿಲ್ಲ. ವೃದ್ಧರು, ಅಂಗವಿಕಲರು, ಮಹಿಳೆಯರು ಕಚೇರಿ ಮುಂಭಾಗದ ಕಿರಿದಾದ ರಸ್ತೆಯಲ್ಲಿ ಬಿಸಿಲು-ಮಳೆಯಲ್ಲಿ ನಿಲ್ಲಬೇಕಾಗಿದೆ. ಅದೇ ರಸ್ತೆಯಲ್ಲಿ ವಾಹನಗಳ ಸಂಚಾರವೂ ಇದೆ. ತಾಲ್ಲೂಕಿನ ಎಲ್ಲ ಕಡೆ ಸೌಲಭ್ಯಗಳನ್ನು ಒದಗಿಸುವ ಹಾಗೂ ಮೇಲ್ವಿಚಾರಣೆ ವಹಿಸಬೇಕಾಗಿರುವ ಕಂದಾಯ ಇಲಾಖೆ ಅಧಿಕಾರಿಗಳು ತಮ್ಮ ಕಚೇರಿಗಳಲ್ಲೇ ಕನಿಷ್ಠ ಸೌಲಭ್ಯ ಕಲ್ಪಿಸಿಲ್ಲ ಎಂದು ಹಿರಿಯ ನಾಗರಿಕ ನಾರಾಯಣಪ್ಪ ಆರೋಪಿಸುತ್ತಾರೆ.

ತಾಲ್ಲೂಕಿಗೆ ಕಂದಾಯ ಇಲಾಖೆಯೇ ಸರ್ಕಾರ, ತಾಲ್ಲೂಕು ದಂಡಾಧಿಕಾರಿ ತಹಶೀಲ್ದಾರ್ ಮುಖ್ಯಮಂತ್ರಿಯಂತೆ ಕರ್ತವ್ಯ ನಿರ್ವಹಿಸಬೇಕು. ತಾಲ್ಲೂಕಿನಲ್ಲಿ ಯಾವುದೇ ಘಟನೆ ನಡೆದರೂ ತಹಶೀಲ್ದಾರ್ ಜವಾಬ್ದಾರಿ ವಹಿಸಿಕೊಂಡು ಪರಿಶೀಲನೆ ನಡೆಸಬೇಕು. ದೀಪದ ಕೆಳಗೆ ಕತ್ತಲು ಎನ್ನುವಂತೆ ಆಗಿದೆ. ನಾಡಕಚೇರಿ, ತಾಲ್ಲೂಕು ಕಚೇರಿಗಳಲ್ಲಿ ಕೆಲಸ, ಕಾರ್ಯಗಳಿಗಾಗಿ ಬರುವ ಜನರಿಗೆ ಕುಡಿಯುವ ನೀರು, ಶೌಚಾಲಯದಂತಹ ಕನಿಷ್ಠ ಸೌಲಭ್ಯ ಒದಗಿಸುತ್ತಿಲ್ಲ ಎಂದು ದೂರುತ್ತಾರೆ ಕಾರ್ಮಿಕ ರಮೇಶ್.

ಸಾರ್ವಜನಿಕರ ತೆರಿಗೆಯಲ್ಲಿ ₹20 ಲಕ್ಷದ ಕಟ್ಟಡ ಕಟ್ಟಿ ಹಾಳುಬಿಟ್ಟಿದ್ದಾರೆ. ಕಟ್ಟಡದ ಬಗ್ಗೆ ಮಾಹಿತಿಯನ್ನು ಪಡೆಯಲು ತಾಲ್ಲೂಕು ಕಚೇರಿಗೆ ಹಲವಾರು ಬಾರಿ ಅಲೆದರೂ ನಮ್ಮಲ್ಲಿ ಯಾವುದೇ ದಾಖಲೆಗಳಿಲ್ಲ ಎನ್ನುತ್ತಾರೆ. ಸಂಬಂಧಪಟ್ಟ ಕೇಸ್ ವರ್ಕರ್, ಶಿರಸ್ತೆದಾರ್, ತಹಶೀಲ್ದಾರ್ ಅವರನ್ನು ಭೇಟಿ ಮಾಡಿದರೂ ನಮ್ಮಲ್ಲಿ ಮಾಹಿತಿ ಇಲ್ಲ ಎಂದು ನುಣಚಿಕೊಳ್ಳುತ್ತಾರೆ. ನಾಡಕಚೇರಿ ಎಂದು ನಾಮಫಲಕವಿದೆ. ಕಟ್ಟಡ ಪೂರ್ಣಗೊಂಡು 2-3 ವರ್ಷಗಳಿಂದ ಹಾಳಾಗುತ್ತಿದೆ. ನಮ್ಮ ಇಲಾಖೆಯ ಕಟ್ಟಡ ಎನ್ನುವ ಪರಿಜ್ಞಾನವೂ ಅವರಿಗೆ ಇಲ್ಲ ಎಂದು ರೈತ ಮುಖಂಡರು ಆರೋಪಿಸುತ್ತಾರೆ.

ನೂತನ ಕಟ್ಟಡವನ್ನು ಗುತ್ತಿಗೆದಾರರು ನಮಗೆ ಹಸ್ತಾಂತರಿಸಿಲ್ಲ. ಹೀಗಾಗಿ ನಮ್ಮಲ್ಲಿ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ

-ಸುದರ್ಶನ ಯಾದವ್ ಚಿಂತಾಮಣಿ‌ ತಹಶೀಲ್ದಾರ್

ಸಾರ್ವಜನಿಕರ ಹಣ ಪೋಲು

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸರ್ಕಾರಿ ಹಣ ಹಾಗೂ ಸರ್ಕಾರಿ ಆಸ್ತಿಗಳನ್ನು ತಮ್ಮ ಸ್ವಂತದ ರೀತಿ ನೋಡಿಕೊಳ್ಳಬೇಕು. ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕಟ್ಟಡ ನಿರ್ಮಾಣವಾಗಿದೆ. ನಿರ್ಮಾಣವಾಗಿರುವ ಕಟ್ಟಡವನ್ನು ಬಳಕೆ ಮಾಡದೆ ಸಾರ್ವಜನಿಕರ ಹಣ ಪೋಲಾಗುತ್ತಿದೆ

-ಮುನಿಯಪ್ಪ ರೈತ ವೈಜಕೂರು

ಜಾಣ ಕುರುಡುತನ ಅಧಿಕಾರಿಗಳು ಕಣ್ಣುಬಿಟ್ಟು ನೋಡುವಷ್ಟರಲ್ಲಿ ಕಟ್ಟಡ ಹಾಳಾಗಿರುತ್ತದೆ. ಮತ್ತೊಮ್ಮೆ ರಿಪೇರಿ ದುರಸ್ತಿಗಾಗಿ ಪ್ರಸ್ತಾವ ಸಲ್ಲಿಸುತ್ತಾರೆ. ಅದರಲ್ಲಿಯೂ ಮತ್ತೆ ಕಮಿಷನ್ ಪಡೆಯಬಹುದು ಎನ್ನುವುದು ಅವರಿಗೆ ಕರಗತವಾಗಿರುತ್ತದೆ. ಅದಕ್ಕೆ ಗೊತ್ತಿದ್ದರೂ ಕಂಡೂ ಕಾಣದಂತೆ ಜಾಣ ಕುರುಡುತನ ತೋರುತ್ತಿದ್ದಾರೆ.

-ಮರಿಯಪ್ಪ ರಾಚಾಪುರ

ನಿರ್ಲಕ್ಷ್ಯದಿಂದ ಹಣ ವ್ಯರ್ಥ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಹಣ ವ್ಯರ್ಥವಾಗುತ್ತದೆ. ಇದೇ ರೀತಿ ಶಿಕ್ಷಣ ಇಲಾಖೆ ಪ್ರೌಢಶಾಲೆಗಾಗಿ ಬನಹಳ್ಳಿ ಬಳಿ ಸುಮಾರು ₹20 ಲಕ್ಷ ವೆಚ್ಚದಲ್ಲಿ ಕೊಠಡಿಗಳನ್ನು ಕಟ್ಟಿ ಬಳಕೆ ಮಾಡದೆ ಹಾಳುಬಿಟ್ಟಿದ್ದರು. ಸಂಪೂರ್ಣ ಹಾಳಾಗುವ ಹಂತದಲ್ಲಿದ್ದ ಕಟ್ಟಡದಲ್ಲಿ ಪೊಲೀಸ್ ಹೊರಠಾಣೆ ಕರ್ತವ್ಯ ನಿರ್ವಹಿಸುತ್ತಿದೆ. ನಾಡಕಚೇರಿ ಕಟ್ಟಡವನ್ನು ಶೀಘ್ರವಾಗಿ ಸದುಪಯೋಗ ಪಡಿಸಿಕೊಳ್ಳಬೇಕು.

-ರಮೇಶ್ ನಾಗರಿಕ ಕೈವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT