ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿಗೆ ಹರಿದ ಭಕ್ತರಹಳ್ಳಿ-ಅರಸೀಕೆರೆ ನೀರು

Published 23 ಸೆಪ್ಟೆಂಬರ್ 2023, 7:26 IST
Last Updated 23 ಸೆಪ್ಟೆಂಬರ್ 2023, 7:26 IST
ಅಕ್ಷರ ಗಾತ್ರ

ಚಿಂತಾಮಣಿ: ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ ₹10.95 ಕೋಟಿ ವೆಚ್ಚದಲ್ಲಿ ರೂಪಿಸಿ, ಕುಂಟುತ್ತಾ ಸಾಗುತ್ತಿದ್ದ ಭಕ್ತರಹಳ್ಳಿ-ಅರಸೀಕೆರೆ ಯೋಜನೆಯು ಕೊನೆಗೂ ಮುಕ್ತಾಯವಾಗಿದ್ದು ಕಳೆದ ಒಂದು ವಾರದಿಂದ ಸದ್ದು-ಗದ್ದಲವಿಲ್ಲದೆ ನಗರಕ್ಕೆ ನೀರು ಹರಿಸಲಾಗುತ್ತಿದೆ.

ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಹಾಗೂ ಪ್ರಮುಖ ವಾಣಿಜ್ಯ ಕೇಂದ್ರ ಚಿಂತಾಮಣಿ ನೀರಿನ ಸಮಸ್ಯೆಯಿಂದ ಬಳಲುತ್ತಿತ್ತು. 7-8 ವರ್ಷದಗಳ ಹಿಂದೆ ಜಿಲ್ಲೆಯಲ್ಲಿ ಉತ್ತಮ ನೀರು ಸರಬರಾಜಿಗೆ ಹೆಸರುವಾಸಿಯಾಗಿದ್ದ ನಗರ ಕಳೆದ 3-4 ವರ್ಷಗಳಿಂದ ಹಿಂದೆಂದೂ ಕಾಣದಂತಹ ನೀರಿನ ಬರ ಅನುಭವಿಸಿತು.

ನಗರಕ್ಕೆ ನೀರು ಸರಬರಾಜು ಮಾಡಲು ರೂಪಿಸಿದ್ದ ಭಕ್ತರಹಳ್ಳಿ– ಅರಸೀಕೆರೆ ಯೋಜನೆ ಕಳೆದ 7-8 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು ನೀರಿನ ಕೊರತೆಗೆ ಕಾರಣವಾಗಿತ್ತು.

ಪ್ರಸ್ತುತ ಯೋಜನೆ ಮುಕ್ತಾಯಗೊಂಡಿದ್ದು ನಗರಕ್ಕೆ ನೀರು ಹರಿದಿರುವುದು ನಾಗರಿಕರಿಗೆ ನೆಮ್ಮದಿ ತಂದಿದೆ. ಯೋಜನೆಯ ಉದ್ಘಾಟನೆ ಹೆಸರಿನಲ್ಲಿ ಮತ್ತೆ ತಡವಾಗಲು ಅವಕಾಶ ನೀಡದೆ ಶೀಘ್ರವಾಗಿ ನೀರನ್ನು ನಾಗರಿಕರಿಗೆ ಪೂರೈಕೆ ಮಾಡುವಂತೆ ಕ್ಷೇತ್ರದ ಶಾಸಕ ಹಾಗೂ ಸಚಿವ ಡಾ.ಎಂ.ಸಿ.ಸುಧಾಕರ್ ಸೂಚನೆ ನೀಡಿದ್ದರು ಎಂದು ಪೌರಾಯುಕ್ತ ಜಿ.ಎನ್.ಚಲಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

2011ರ ಜನಗಣತಿಯಂತೆ ನಗರದ ಜನಸಂಖ್ಯೆಯು 76,068. ನಗರಕ್ಕೆ ನೈಸರ್ಗಿಕವಾಗಿ ನೀರು ಸರಬರಾಜು ಮಾಡುತ್ತಿದ್ದ ಕನಂಪಲ್ಲಿ ಕೆರೆ ಮತ್ತು ಕೊಳವೆ ಬಾವಿಗಳು ನೀರಿನ ಮೂಲವಾಗಿದ್ದವು. 2-3 ವರ್ಷಗಳ ಹಿಂದೆ ಬಹುತೇಕ ಕೊಳವೆ ಬಾವಿಗಳು ಬತ್ತಿಹೋಗಿದ್ದವು. ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಪ್ರತಿನಿತ್ಯ ಸುಮಾರು ₹2 ಲಕ್ಷ ಖರ್ಚು ಮಾಡಿದರೂ ತಿಂಗಳಿಗೊಮ್ಮೆ ಅಲ್ಪ-ಸ್ವಲ್ಪ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ನಾಗರಿಕರಿಂದ ಸದಾ ಪ್ರತಿಭಟನೆ ನಡೆಯುತ್ತಿದ್ದವು.

ನೀರು ಪೂರೈಕೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಈ ಯೋಜನೆ ರೂಪಿಸಲಾಗಿತ್ತು. ನಗರದಿಂದ 14 ಕಿ.ಮೀ ದೂರದಲ್ಲಿರುವ ಭಕ್ತರಹಳ್ಳಿ ಅರಸೀಕೆರೆಯ ನೀರಿನ ಸಾಮರ್ಥ್ಯ 35.07 ಎಸಿಎಫ್‌ಟಿ ಆಗಿದೆ. ಜಾರಿಯಲ್ಲಿರುವ ಎತ್ತಿನಹೊಳೆ ಯೋಜನೆ ಮೂಲದಿಂದ ಕೆರೆಗೆ ನೀರು ತುಂಬಿಸಲು ಗುರಿ ಹೊಂದಲಾಗಿದೆ. ಕೆರೆಯಿಂದ ನಗರಕ್ಕೆ ಪ್ರತಿನಿತ್ಯ 3 ಎಂಎಲ್‌ಡಿ ಹಾಗೂ ಮಾರ್ಗಮಧ್ಯದ 5 ಗಳ್ಳಿಗಳಿಗೆ 0.50 ಎಂಎಲ್‌ಡಿ ನೀರು ಸರಬರಾಜು ಮಾಡುವ ಯೋಜನೆ ಆಗಿದೆ.

₹16.30 ಕೋಟಿಗೆ ಯೋಜನಾ ವರದಿ ಸಿದ್ಧಪಡಿಸಿ ಮೇ 2016ರಲ್ಲಿ ಸಲ್ಲಿಸಲಾಗಿತ್ತು. ಆದರೆ ಹಣದ ಕೊರತೆಯಿಂದ ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಆಗಸ್ಟ್ 2018ರಲ್ಲಿ ತಿಳಿಸಲಾಗಿತ್ತು. ನಂತರ ನಗರೋತ್ಥಾನ 3ರ ಯೋಜನೆಯಡಿ ₹12.15 ಕೋಟಿ ಯೋಜನೆಯ ಅಂದಾಜುಪಟ್ಟಿ ಸಲ್ಲಿಸಲಾಗಿತ್ತು. ಸರ್ಕಾರ ₹10.95 ಕೋಟಿಗೆ ಮೇ 2019ರಲ್ಲಿ ಯೋಜನೆಗೆ ಅನುಮೋದನೆ ನೀಡಿತ್ತು.

₹7.68 ಕೋಟಿ ವೆಚ್ಚದ ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಮೂಲಕ ಹೈದರಾಬಾದಿನ ಅಯ್ಯಪ್ಪ ಕನ್ಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಿ ಪೂರ್ಣಗೊಳಿಸಲು 11 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಕಾಮಗಾರಿ ಆರಂಭವಾದ ಕೂಡಲೇ ಅಚ್ಚುಕಟ್ಟುದಾರರ ರೈತರು ಯೋಜನೆಯ ಬಗ್ಗೆ ತಗಾದೆ ತೆಗೆದರು. ಅಚ್ಚುಕಟ್ಟು ಪ್ರದೇಶದ ಗ್ರಾಮಗಳಿಗೆ ನೀರು ನೀಡಬೇಕು. ನೀರು ಶುದ್ಧೀಕರಣ ಘಟಕವನ್ನು ಕೆರೆಯ ಬಳಿಯೇ ಸ್ಥಾಪಿಸಬೇಕು. ವ್ಯರ್ಥವಾಗುವ ನೀರು ಜಾನುವಾರುಗಳಿಗೆ ಹಾಗೂ ಕೃಷಿಗೆ ಅನುಕೂಲವಾಗುತ್ತದೆ ಎಂದು ಪ್ರತಿಭಟನೆಗೆ ಇಳಿದರು.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸದಿದ್ದುದರಿಂದ ನ್ಯಾಯಾಲಯದ ಮೆಟ್ಟಲು ತಲುಪಿದ್ದು ಕಾಮಗಾರಿಗೆ ತಡೆಯಾಜ್ಞೆ ತಂದಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು.

ಎಲ್ಲ ಅಡೆತಡೆಗಳು ಬಗೆಹರಿದು ಕಾಮಗಾರಿ ಮುಕ್ತಾಯವಾಗಿದ್ದು ಒಂದು ವಾರದಿಂದ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ನಗರದ ಅಗ್ರಹಾರ ಪಂಪ್ ಹೌಸ್ ಮತ್ತು ಫಿಲ್ಟರ್ ಬೆಡ್ ಪಂಪ್ ಹೌಸ್‌ಗೆ ನೀರನ್ನು ಹರಿಸಲಾಗುತ್ತಿದೆ. ಅಲ್ಲಿ ಶುದ್ಧೀಕರಿಸಿ ಮನೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ನೀರಿನ ಗುಣಮಟ್ಟ ಹಾಗೂ ಕುಡಿಯಲು ಯೋಗ್ಯವೇ ಎಂಬ ಬಗ್ಗೆ ಪರೀಕ್ಷೆ ಮಾಡಿಸಲಾಗಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು.

ಜಿ.ಎನ್.ಚಲಪತಿ
ಜಿ.ಎನ್.ಚಲಪತಿ
ಸಿ.ಎ.ರಮೇಶ್
ಸಿ.ಎ.ರಮೇಶ್

ನಿರ್ವಹಣೆ ಕೊರತೆ ಪ್ರಸ್ತುತ ಕೆರೆಯಲ್ಲಿ 1.5 ವರ್ಷಕ್ಕೆ ಆಗುವಷ್ಟು ನೀರಿದೆ. ಪ್ರತಿನಿತ್ಯ ನಗರಕ್ಕೆ 3 ಎಂಎಲ್‌ಡಿ ನೀರನ್ನು ಹರಿಸಲಾಗುತ್ತಿದೆ. ವಾರಕ್ಕೊಮ್ಮೆ ಪೂರೈಕೆ ಮಾಡುತ್ತಿದ್ದುದನ್ನು 5-6 ದಿನಗಳಿಗೆ ಇಳಿಸಲಾಗುತ್ತಿದೆ. ನಿರ್ವಹಣೆ ಕೊರತೆಯಿದೆ. ಮುಂದಿನ ದಿನಗಳಲ್ಲಿ 4 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವ ಗುರಿ ಇದೆ. ನಗರದ ಕಾಲೋನಿಗಳಿಗೆ ದಿನ ಬಿಟ್ಟು ದಿನ ಅಥವಾ 2 ದಿನಗಳಿಗೊಮ್ಮೆ ನೀರು ಪೂರೈಸುವ ಯೋಜನೆಯನ್ನು ಜಾರಿಗೆ ತರಲಾಗುವುದು. ಜಿ.ಎನ್.ಚಲಪತಿ ಪೌರಾಯುಕ್ತ ಕೆರೆಯ ಆಳ ಹೆಚ್ಚಿಸಬೇಕು ಯೋಜನೆಯ ಮೂಲ ಅಂದಾಜು ವೆಚ್ಚ ₹16.30 ಕೋಟಿಯಾಗಿದ್ದು ಕೆರೆಯ ಹೂಳನ್ನು ತೆಗೆದು ಆಳವನ್ನು ಹೆಚ್ಚಿಸಿ ನೀರಿನ ಸಂಗ್ರಹ ಅಧಿಕಗೊಳಿಸುವುದು ಸೇರಿತ್ತು. ಹಣದ ಲಭ್ಯತೆ ಕಡಿಮೆಯಾದ ಕಾರಣ ಅಂದಾಜು ಪಟ್ಟಿಯಲ್ಲಿದ್ದ ಕೆರೆಯ ಆಳವನ್ನು ಹೆಚ್ಚಿಸುವ ಕಾಮಗಾರಿಯನ್ನು ಕೈಬಿಡಲಾಗಿದೆ. ಮತ್ತೆ ಅನುದಾನಕ್ಕೆ ಬೇಡಿಕೆ ಸಲ್ಲಿಸಿ ಕೆರೆಯ ಆಳವನ್ನು ಹೆಚ್ಚಿಸಬೇಕು. ಎತ್ತಿನಹೊಳೆ ಕಾಮಗಾರಿಯ ನೀರು ಹರಿದಾಗ ಅಧಿಕ ನೀರಿನ ಸಂಗ್ರಹಣೆ ಮಾಡಿಕೊಳ್ಳಬಹುದು. ಸಿ.ಎ.ರಮೇಶ್ ರಾಜೀವನಗರ ಬಡಾವಣೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT