ಭಾನುವಾರ, ಏಪ್ರಿಲ್ 2, 2023
33 °C
ಜಾತ್ರೆಯಲ್ಲಿ ಸಹಸ್ರಾರು ಸಂಖ್ಯೆ ಭಕ್ತರ ಭಾಗಿ

ಚಿಕ್ಕಬಳ್ಳಾಪುರ | ಚಿತ್ರಾವತಿ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಗರದ ಹೊರವಲಯದ ಚಿತ್ರಾವತಿಯ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ  ಶುಕ್ರವಾರ ಸಡಗರ ಸಂಭ್ರಮದಿಂದ ನಡೆಯಿತು. ಸಹಸ್ರಾರು ಸಂಖ್ಯೆಯ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. 

ಸಚಿವ ಡಾ.ಕೆ.ಸುಧಾಕರ್, ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇವರ ಉತ್ಸವ ಮೂರ್ತಿಯನ್ನು ಹೆಗಲಮೇಲೆ ಹೊತ್ತರು. ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವಕುಮಾರ್, ಡಿವೈಎಸ್‌ಪಿ ವಾಸುದೇವ್, ತಾಲ್ಲೂಕು ಪಂಚಾಯಿತಿ
ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್ ಮತ್ತಿತರರ ಗಣ್ಯರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ರಥೋತ್ಸವ ಮತ್ತು ಜಾತ್ರೆ ಪ್ರಯುಕ್ತ ಬೆಳಿಗ್ಗೆಯಿಂದಲೇ ಭಕ್ತರು ಸುಬ್ರಹ್ಮಣ್ಯೇಶ್ವರ ಸ್ವಾಮಿ ದರ್ಶನಕ್ಕೆ ಸಾಲು ಗಟ್ಟಿದ್ದರು. ಭಕ್ತರ ನಿಯಂತ್ರಣಕ್ಕಾಗಿ ದೇಗುಲದ ಪ್ರವೇಶದಲ್ಲಿಯೇ ಪೊಲೀಸರು ಬಂದೋಬಸ್ತ್ ನಡೆಸಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೂ ದೊಡ್ಡ ಪ್ರಮಾಣದಲ್ಲಿ ಭಕ್ತರು ದೇಗುಲದ ಆವರಣದಲ್ಲಿ ಕಂಡು ಬಂದರು. ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ದೇಗುಲದ ಬಳಿಯಿರುವ ಹುತ್ತಕ್ಕೆ ಪೂಜೆ ಸಲ್ಲಿಸಿದರು. 

ದೇವಸ್ಥಾನದಲ್ಲಿ ಬೆಳಿಗ್ಗೆ ರುದ್ರಾಭಿಷೇಕ, ಅಂಕುರಾರ್ಪಣೆ, ಪಾರ್ವಾಟೋತ್ಸವ. ವಸಂತೋತ್ಸವ, ಉಯಾಲೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ರಥೋತ್ಸವದ ಅಂಗವಾಗಿ ಭಕ್ತರು, ನಾಗರಿಕರು ಪ್ರಸಾದದ ವ್ಯವಸ್ಥೆ ಮಾಡಿದ್ದರು. ಪುಳಿಯೊಗರೆ, ಮೊಸರನ್ನ ಸೇರಿದಂತೆ ವಿವಿಧ ಆಹಾರ ನೀಡಲಾಯಿತು. 

ಜಾತ್ರೆಯ ಬಯಲಿನಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಮಕ್ಕಳ ಆಟಿಕೆಗಳು, ಬುರುಗು, ಬತ್ತಾಸ್, ಐಸ್‌ಕ್ರೀಂ, ಸಿಹಿ ತಿನಿಸುಗಳ ಅಂಗಡಿಗಳು ಸಾಲು ಸಾಲಾಗಿದ್ದವು. ಇಲ್ಲಿನ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು. 

ಜಾನುವಾರು ಜಾತ್ರೆಗೆ ತಡೆ: ಚಿತ್ರಾವತಿ ಜಾತ್ರೆಯಲ್ಲಿ ಜಾನುವಾರುಗಳ ಸಂತೆಗೆ ತನ್ನದೇ ಆದ ಮಹತ್ವವಿದೆ. ಜಿಲ್ಲೆಯ ವಿವಿಧ ಭಾಗಗಳ ರೈತರು ಇಲ್ಲಿಗೆ ರಾಸುಗಳನ್ನು ಕರೆ ತರುತ್ತಾರೆ. ಆದರೆ ಚರ್ಮಗಂಟು ರೋಗದ ಕಾರಣದಿಂದ ಜಿಲ್ಲಾಡಳಿತ ಜಾನುವಾರು ಸಂತೆಗಳ ಮೇಲೆ ನಿರ್ಬಂಧ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಜಾನುವಾರು ಸಂತೆ ನಡೆಯಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು