ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ: 5 ರೊಳಗಿನ ಸ್ಥಾನಕ್ಕೆ ತಾಕೀತು

Last Updated 9 ಜನವರಿ 2021, 3:32 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸ್ವಚ್ಛತೆ, ಸುರಕ್ಷತೆ, ವಸತಿ ಮೊದಲಾದ ಯೋಜನೆಗಳ ಮೂಲಕ ಚಿಕ್ಕಬಳ್ಳಾಪುರವನ್ನು ಅತ್ಯುತ್ತಮ ನಗರವಾಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ನಗರಸಭೆಯ ಸದಸ್ಯರಿಗೆ ಕಿವಿಮಾತು ಹೇಳಿದರು.

ನಗರಸಭೆಯಲ್ಲಿ ಶುಕ್ರವಾರ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಗರದಲ್ಲಿ ಸ್ವಚ್ಛತೆಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಹೆಣ್ಣು ಮಧ್ಯರಾತ್ರಿಯಲ್ಲೂ
ನಿರ್ಭೀತಿಯಿಂದ ಓಡಾಡುವಂತಾಗಬೇಕು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಈ ನಿಟ್ಟಿನಲ್ಲಿ ಹೆಚ್ಚು ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸುವುದು ಮೊದಲಾದ ಕ್ರಮಗಳಿಂದ ನಗರವನ್ನು ಸುರಕ್ಷಿತವಾಗಿಸಬೇಕು. ಈ ಎಲ್ಲ ಕ್ರಮಗಳ ಮೂಲಕ ಚಿಕ್ಕಬಳ್ಳಾಪುರವನ್ನು ಅತ್ಯುತ್ತಮ ನಗರವಾಗಿಸಬೇಕು ಎಂದರು.

ಕಸ ವಿಲೇವಾರಿಗೆ ಘಟಕ ನಿರ್ಮಿಸಲಾಗಿದ್ದು, 15 ವರ್ಷಗಳಿಂದ ವಿಲೇವಾರಿ ಮಾಡಿದ ಕಸ ಇಲ್ಲಿದೆ. ಅದನ್ನು ಕೂಡ ವೈಜ್ಞಾನಿಕವಾಗಿ ಸಂಸ್ಕರಿಸಲು ಕ್ರಮ ವಹಿಸಲಾಗಿದೆ. ನಗರಸಭೆಯ ಸದಸ್ಯರು ಎಲ್ಲರೂ ಸ್ಥಳ ಪರಿಶೀಲನೆ ಮಾಡಿ ಉದ್ಯಾನದ ರೀತಿಯಲ್ಲಿ ಕಸ ಘಟಕವನ್ನು ಅಭಿವೃದ್ಧಿಪಡಿಸಬೇಕು. ಕಸ ಘಟಕದಲ್ಲಿರುವ ಕಸವನ್ನು ಗೊಬ್ಬರವಾಗಿಸಿ ರೈತರಿಗೆ ನೀಡುವಂತಾಗಬೇಕು. ಹಸಿ ಕಸವನ್ನು ಮನೆಯವರೇ ಲಭ್ಯವಿರುವ ಜಾಗದಲ್ಲಿ ಗೊಬ್ಬರ ಮಾಡಬೇಕು. ಇಂತಹಕ್ರಮಗಳಿಗೆ ಒತ್ತು ನೀಡಬೇಕು ಎಂದರು.

ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಬಹಳ ಬಡಜನರಿಗೆ ನಿವೇಶನ, ಮನೆ ಇಲ್ಲ. ನಗರದ ನೂರಾರು ಎಕರೆಯಲ್ಲಿ ವಸತಿ ಯೋಜನೆ ರೂಪಿಸಲು ಕ್ರಮ ವಹಿಸಲಾಗಿದೆ. ಇಲ್ಲಿ ಲೇ ಔಟ್ ಕೂಡ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನಗರಸಭೆಯ ಸದಸ್ಯರು ಪಾರದರ್ಶಕವಾಗಿ ಫಲಾನುಭವಿಗಳನ್ನು ಆರಿಸಬೇಕು. ನಂತರ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ, ಕಾಲಮಿತಿ ಹಾಕಿಕೊಂಡು ಕೆಲಸ ಮಾಡಬೇಕು. ಒಂದು ವರ್ಷದೊಳಗೆ, ಅಂದರೆ ಡಿ.22 ರೊಳಗೆ 5,000 ಮನೆಗಳನ್ನು ನಿರ್ಮಿಸಬೇಕು.ಈ ಗುರಿಯನ್ನು ಇರಿಸಿಕೊಂಡು ಕಾರ್ಯನಿರ್ವಹಿಸಿ ಎಂದರು.

ನಗರಸಭೆಯೇ ಸಂಪನ್ಮೂಲವನ್ನು ಕ್ರೋಢೀಕರಿಸಿ ಯೋಜನೆ ಅನುಷ್ಠಾನಗೊಳಿಸಬೇಕು. ಸಮರ್ಪಕವಾಗಿ ಕಂದಾಯ ಸಂಗ್ರಹಿಸಬೇಕು. ಸ್ವಚ್ಛತಾ ಅಭಿಯಾನದಲ್ಲಿ ನಗರ ಐದರೊಳಗಿನ ಸ್ಥಾನಕ್ಕೆ ಬರಬೇಕು. ನಂತರ ಪ್ರಥಮ ಸ್ಥಾನದಲ್ಲಿ ಬರುವಂತಾಗಬೇಕು. ಈ ವರ್ಷ ಹಾಗೂ ಮುಂದಿನ ವರ್ಷ ಸರ್ಕಾರದಿಂದ ಅನುದಾನ ತರಲಾಗುವುದು. ಇದನ್ನುಬಳಸಿ ಬಾಕಿ ಉಳಿದ ಕಾಮಗಾರಿಗಳನ್ನು ಮುಗಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT