ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಮುಚ್ಚಿದ ಕ್ಲಿನಿಕ್‌ಗಳು: ಚಿಕಿತ್ಸೆಗೆ ಜನರ ಅಲೆದಾಟ

ಸರ್ಕಾರಿ ಆಸ್ಪತ್ರೆಗಳಲ್ಲೂ ಸಾಮಾನ್ಯ ಕಾಯಿಲೆಗಳಿಗೆ ಸಿಗದ ಉಪಚಾರ, ಮೆಡಿಕಲ್‌ ಶಾಪ್‌ ಮಾತ್ರೆಗಳ ಮೊರೆ ಹೋದ ಜನರು
Last Updated 31 ಮಾರ್ಚ್ 2020, 6:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೊರೊನಾ ಭೀತಿ ಹೆಚ್ಚುತ್ತಿದ್ದಂತೆ ಜಿಲ್ಲೆಯಾದ್ಯಂತ ಖಾಸಗಿ ವೈದ್ಯರು ನಡೆಸುತ್ತಿದ್ದ ಕ್ಲಿನಿಕ್‌ಗಳು ಬಾಗಿಲು ಮುಚ್ಚಿದ್ದು, ಗ್ರಾಮೀಣ ಪ್ರದೇಶದ ಜನರು ಚಿಕಿತ್ಸೆಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೊರೊನಾ ಸಾಂಕ್ರಾಮಿಕ ಸೋಂಕಿನ ಭೀತಿಯ ಜತೆಗೆ ಲಾಕ್‌ಡೌನ್ ಪರಿಣಾಮ ಗ್ರಾಮೀಣ ಭಾಗಗಳಲ್ಲಿ ಭೇಟಿ ನೀಡುತ್ತಿದ್ದ ಖಾಸಗಿ ವೈದ್ಯರ ಪೈಕಿ ಬಹುಪಾಲು ಜನರು ಇದೀಗ ಮನೆ ಬಿಟ್ಟು ಹೊರಗೆ ಹೆಜ್ಜೆ ಇಡುತ್ತಿಲ್ಲ. ಇನ್ನು ನಗರ ಪ್ರದೇಶಗಳಲ್ಲಿ ಕೆಲವೇ ಕೆಲ ದೊಡ್ಡ ಆಸ್ಪತ್ರೆಗಳನ್ನು ಹೊರತುಪಡಿಸಿದರೆ ಖಾಸಗಿ ವೈದ್ಯರ ಸಣ್ಣಪುಟ್ಟ ಕ್ಲಿನಿಕ್‌ಗಳೆಲ್ಲ ಬಾಗಿಲು ಮುಚ್ಚಿವೆ.

ಹೀಗಾಗಿ, ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಜನರು ಅಲೆದಾಟ ನಡೆಸಿ, ನಗರ, ಪಟ್ಟಣಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳನ್ನು ಅರಸಿಕೊಂಡು ಆಸ್ಪತ್ರೆಗಳತ್ತ ಬರುತ್ತಿದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೂಡ ಗಂಭೀರ ಸ್ವರೂಪದ ರೋಗಿಗಳು, ವೈದ್ಯಕೀಯ ತುರ್ತು ಇರುವವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ.

ಇದರಿಂದಾಗಿ ಜ್ವರ, ಕೆಮ್ಮು, ಶಿತ, ದಮ್ಮು, ತಲೆ ನೋವು, ಸಣ್ಣಪುಟ್ಟ ಗಾಯಗಳಿಂದ ನರಳುವವರು ಸಕಾಲಕ್ಕೆ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಅದರಲ್ಲೂ ರಕ್ತದೊತ್ತಡ, ಮಧುಮೇಹ, ಮೂಲವ್ಯಾಧಿಯಂತಹ ಕಾಯಿಲೆಯಿಂದ ಬಳಲುತ್ತ ಖಾಸಗಿ ವೈದ್ಯರ ಬಳಿ ನಿಯಮಿತ ತಪಾಸಣೆ ಮಾಡಿಸಿಕೊಳ್ಳುತ್ತಿದ್ದವರೆಲ್ಲ ಚಿಂತೆಗೆ ಒಳಗಾಗಿದ್ದಾರೆ.

ಇನ್ನೊಂದೆಡೆ, ನಗರ, ಪಟ್ಟಣಗಳಲ್ಲಿ ಬಾಗಿಲು ತೆರೆದ ಕೆಲವೇ ಖಾಸಗಿ ಆಸ್ಪತ್ರೆಗಳು ಸಹ ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿವೆ. ಆಸ್ಪತ್ರೆಗೆ ದಾಖಲಾದ ಒಳ ರೋಗಿಗಳು ಹಾಗೂ ತುರ್ತು ಚಿಕಿತ್ಸೆಗಾಗಿ ಬಂದವರಿಗಷ್ಟೇ ವೈದ್ಯಕೀಯ ಸೇವೆ ಒದಗಿಸುತ್ತಿವೆ.

ಇಂತಹ ಆಸ್ಪತ್ರೆಗಳಲ್ಲಿ ಕೂಡ ಕೆಮ್ಮು, ಜ್ವರದಿಂದ ಬಳಲುವವರು ಹೋದರೆ ವೈದ್ಯರು ಕೊರೊನಾ ಸೋಂಕಿನ ಭೀತಿಗೆ ಅನಾರೋಗ್ಯ ಪೀಡಿತರನ್ನು ಆಸ್ಪತ್ರೆ ಒಳಗೆ ಕೂಡ ಪ್ರವೇಶಿಸಲು ಬಿಡದೆ ಅಸ್ಪೃಶ್ಯರ ರೀತಿ ವಿಚಾರಿಸಿ, ಸರ್ಕಾರಿ ಆಸ್ಪತ್ರೆಯತ್ತ ಕಳುಹಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಜಿಲ್ಲೆಯಲ್ಲಿ ಕೋವಿಡ್‌ 19 ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಬೆನ್ನಲ್ಲೇ ಸರ್ಕಾರಿ ವೈದ್ಯರಿಗೆ ಸೋಂಕು ನಿಯಂತ್ರಣದ ಹೊಣೆಗಾರಿಕೆ ಕೆಲಸದ ಒತ್ತಡವನ್ನು ಹೆಚ್ಚಿಸಿದ್ದು, ಪರಿಣಾಮ, ಸರ್ಕಾರಿ ಆಸ್ಪತ್ರೆಗಳಲ್ಲೂ ಸಕಾಲಕ್ಕೆ ಚಿಕಿತ್ಸೆ ಪಡೆಯಲು ವೈದ್ಯರು ದೊರಕದೆ ಇರುವುದರಿಂದ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರತೆಗೆ ತಳ್ಳಿದೆ.

ಸದ್ಯ ಅನಾರೋಗ್ಯದಿಂದ ಬಳಲುವವರು ಮನೆಯಿಂದ ಹೊರಗೆ ಹೋಗಿ ಸಂಕಷ್ಟಕ್ಕೆ ಸಿಲುಕುವುದರಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಅನಿವಾರ್ಯವಾಗಿ ಸ್ಥಳೀಯ ಔಷಧಿ ಮಳಿಗೆಗಳಲ್ಲಿ ದೊರೆಯುವ ಮಾತ್ರೆಗಳನ್ನು ಸೇವಿಸಿ ತಾತ್ಕಾಲಿಕ ಉಪಶಮನದ ಮಾರ್ಗ ಕಂಡುಕೊಳ್ಳುತ್ತಿದ್ದಾರೆ.

ಆದರೆ, ತಿಂಗಳಿಗೊಮ್ಮೆ ರಕ್ತ ಪರೀಕ್ಷೆ ಮಾಡಿಸಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ತಿಳಿದುಕೊಂಡು, ಅದರಂತೆ ನಿತ್ಯವೂ ಮಾತ್ರೆ ತೆಗೆದುಕೊಳ್ಳುತ್ತಿದ್ದ ಮಧುಮೇಹಿಗಳ ಸಂಕಟ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

‘ನನಗೆ ಬಿ.ಪಿ, ಶುಗರ್ ಎರಡು ಇದೆ. ಹದಿನೈದು ದಿನಕ್ಕೊಮ್ಮೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಹೋಗಿ ತಪಾಸಣೆ ಮಾಡಿಕೊಡಿಸಿಕೊಳ್ಳುತ್ತಿದ್ದೆ. ವೈದ್ಯರ ಸಲಹೆ ಮೆರೆಗೆ ಆಹಾರ ಕ್ರಮ, ಮಾತ್ರೆಗಳನ್ನು ಬದಲಾಯಿಸುತ್ತಿದ್ದೆ. ಇತ್ತೀಚೆಗೆ ಮನೆಯಿಂದ ಹೊರಗೆ ಹೆಜ್ಜೆ ಇಡಲು ಆಗುತ್ತಿಲ್ಲ. ವೈದ್ಯರಿಗೆ ಕರೆ ಮಾಡಿ ವಿಚಾರಿಸಿದರೆ ಅವರೂ ಕ್ಲಿನಿಕ್‌ ಮುಚ್ಚಿದ್ದಾರೆ. ಏನು ಮಾಡಬೇಕೋ ತೋಚುತ್ತಿಲ್ಲ’ ಎಂದು ನಗರದ ಕೆಳಗಿನತೋಟದ ನಿವಾಸಿ ಶಿವಾನಂದ್ ತಿಳಿಸಿದರು.

‘ಮೊನ್ನೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಚಿಕ್ಕಬಳ್ಳಾಪುರಕ್ಕೆ ಹೋದರೆ ಒಂದೇ ಒಂದು ಕ್ಲಿನಿಕ್ ತೆರೆದಿರಲಿಲ್ಲ. ಕೊನೆಗೆ ಜಿಲ್ಲಾ ಆಸ್ಪತ್ರೆಗೆ ಹೋದರೆ ಅಲ್ಲೂ ವೈದ್ಯರು ಬೇರೆ ಬೇರೆ ನೆವ ಹೇಳಿ ಕಾಯಿಸಿದರು. ಕೊನೆಗೆ ಸಾಕಾಗಿ ಮೆಡಿಕಲ್‌ ಶಾಪ್‌ವೊಂದರಲ್ಲಿ ಗುಳಿಗೆ ತೆಗೆದುಕೊಂಡು ಬಂದು ಸೇವಿಸಿದೆ’ ಎಂದು ಮಂಚನಬಲೆ ನಿವಾಸಿ ಪ್ರದೀಪ್‌ ಹೇಳಿದರು.

ಮಾರ್ಚ್‌ 22ರ ಜನತಾ ಕರ್ಫ್ಯೂ ಬೆನ್ನಲ್ಲೇ ಘೋಷಣೆಯಾಗಿರುವ ಲಾಕ್‌ಡೌನ್ ಜನಜೀವನವನ್ನು ಸಂಪೂರ್ಣ ಕಟ್ಟಿ ಹಾಕಿದ್ದು, ಲಾಕ್‌ಡೌನ್‌ ಕೊನೆಗೊಳ್ಳುವ ಏಪ್ರಿಲ್ 14ರ ವರೆಗೆ ಹೇಗಪ್ಪಾ ಅನಾರೋಗ್ಯಗಳನ್ನು ಸಹಿಸಿಕೊಳ್ಳುವುದು ಎಂದು ಜನರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT