ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ| ಪಕ್ಷೇತರರು ‘ಕೈ’ ಹಿಡಿದರೆ ಕಾಂಗ್ರೆಸ್ಸಿಗರಿಗೆ ಕುತ್ತು

ಬಾಗೇಪಲ್ಲಿ ಕ್ಷೇತ್ರವೇ ನಿದರ್ಶನ; ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಅಸ್ತಿತ್ವಕ್ಕಾಗಿ ಶಿವಶಂಕರರೆಡ್ಡಿ ಗುಟುರು
ಡಿ.ಎಂ.ಕುರ್ಕೆ ಪ್ರಶಾಂತ್
Published 10 ಮಾರ್ಚ್ 2024, 6:33 IST
Last Updated 10 ಮಾರ್ಚ್ 2024, 6:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನಾನು ಶಾಕ್ ಟ್ರೀಟ್‌ಮೆಂಟ್ ಕೊಟ್ಟಿದ್ದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಚಿವರನ್ನು ಕಳುಹಿಸಿದರು. ನಾವು ಸಹ ಪಕ್ಷ ಕಟ್ಟಿದ್ದೇವೆ. ಎಲ್ಲ ವಿಚಾರಗಳನ್ನು ಇಲ್ಲಿ ಹೇಳಲು ಆಗುವುದಿಲ್ಲ’–ಇದು ಇತ್ತೀಚೆಗೆ ಮಾಜಿ ಸಚಿವ ಎನ್‌.ಎಚ್.ಶಿವಶಂಕರರೆಡ್ಡಿ ಅವರು ಚಿಕ್ಕಬಳ್ಳಾಪುರದಲ್ಲಿ ಹೇಳಿದ ಮಾತು. 

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾದ ಗೌರಿಬಿದನೂರು ಕ್ಷೇತ್ರದ ನಾಯಕ ಹಾಗೂ ಮಾಜಿ ಸಚಿವ ಎನ್‌.ಎಚ್.ಶಿವಶಂಕರ ರೆಡ್ಡಿ ಬಿಜೆಪಿ ಸೇರುತ್ತಾರೆ ಎನ್ನುವ ವದಂತಿ ಹಬ್ಬಿದ ತಕ್ಷಣ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಅವರ ಜೊತೆ ಮಾತುಕತೆ ನಡೆಸಿದರು. 

ಮುಖ್ಯಮಂತ್ರಿ ಅವರ ಜೊತೆ ನಡೆದ ಮಾತುಕತೆಗಳಲ್ಲಿ ಶಿವಶಂಕರ ರೆಡ್ಡಿ ಗೌರಿಬಿದನೂರು ಬೆಳವಣಿಗೆಗಳ ಬಗ್ಗೆ ಆಕ್ರೋಶದ ಮಾತುಗಳನ್ನಾಡಿದ್ದಾರೆ ಎನ್ನುತ್ತವೆ ಮೂಲಗಳು. ತಮ್ಮನ್ನು ಪಕ್ಷದಲ್ಲಿ ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಭಾವನೆಯೇ ಶಿವಶಂಕರ ರೆಡ್ಡಿ ಅವರ ಈ ಖಡಕ್ ಮಾತುಗಳಿಗೆ ಕಾರಣ ಎನ್ನುವುದು ಗುಟ್ಟಾಗಿಯೇನೂ ಉಳಿದಿಲ್ಲ.

ಪಕ್ಷೇತರ ಶಾಸಕರು ಕಾಂಗ್ರೆಸ್ ಸೇರಿ ರಾಜಕಾರಣ ಮಾಡಲು ಮುಂದಾದರೆ ಸ್ಥಳೀಯವಾಗಿ ಪ್ರಬಲವಾಗಿರುವ ‘ಕೈ’ನಾಯಕ ಮೂಲೆಗುಂಪಾಗುತ್ತಾರೆ. ಇದಕ್ಕೆ ಜಿಲ್ಲೆಯಲ್ಲಿ ಬಾಗೇಪಲ್ಲಿ ಕ್ಷೇತ್ರದ ರಾಜಕೀಯ ಇತಿಹಾಸವೇ ಬಹುದೊಡ್ಡ ನಿದರ್ಶನ. 

ಹಿರಿಯ ನಾಯಕ ಶಿವಶಂಕರರೆಡ್ಡಿ ಅವರಿಗೆ ಈ ಅರಿವು ಇದೆ. ಈ ಕಾರಣದಿಂದಲೇ ಅವರು ಪಕ್ಷದ ನಾಯಕರ ವಿರುದ್ಧ ಗುಟುರು ಹಾಕಿದ್ದಾರೆ. ಪಕ್ಷೇತರ ಶಾಸಕ ಕೆ.ಎಚ್.‍ಪುಟ್ಟಸ್ವಾಮಿ ಗೌಡ ಅವರು ಈಗಾಗಲೇ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಪಕ್ಷದ ರಾಜ್ಯ ನಾಯಕರಿಗೂ ಹತ್ತಿರವಾಗಿದ್ದಾರೆ. ಪಕ್ಷದಲ್ಲಿ ಅವರ ಕುಟುಂಬದ ಪ್ರಭಾವ ಸಹ ಹೆಚ್ಚುತ್ತಿದೆ.

ಈ ಎಲ್ಲವನ್ನೂ ಅರಿತಿರುವ ಶಿವಶಂಕರ ರೆಡ್ಡಿ ಅವರಿಗೆ, ‘ಸುಮ್ಮನಿದ್ದರೆ ಅಸ್ತಿತ್ವಕ್ಕೆ ಪೆಟ್ಟು’ ಎನ್ನುವುದು ಖಚಿತವಾಗಿದೆ. 

ಸುಬ್ಬಾರೆಡ್ಡಿ ಪ್ರವೇಶ ಸಂಪಂಗಿಗೆ ಪೆಟ್ಟು: 2013ರ ವಿಧಾನಸಭೆ ಚುನಾವಣೆಯಲ್ಲಿ ಬಾಗೇಪಲ್ಲಿಯಲ್ಲಿ ಪಕ್ಷೇತರ ಶಾಸಕರಾಗಿ ಗೆದ್ದ ಸುಬ್ಬಾರೆಡ್ಡಿ ನಂತರ ಕಾಂಗ್ರೆಸ್ ಸೇರಿದರು. ಸುಬ್ಬಾರೆಡ್ಡಿ ಕಾಂಗ್ರೆಸ್ ಸೇರ್ಪಡೆ ಎರಡು ಬಾರಿ ಶಾಸಕರಾಗಿದ್ದ ಎನ್.ಸಂಪಂಗಿ ಅವರ ರಾಜಕೀಯ ಅಸ್ತಿತ್ವಕ್ಕೆ ಪೆಟ್ಟು ನೀಡಿತು. 2018, 2023ರಲ್ಲಿ ‘ಕೈ’ ಟಿಕೆಟ್ ಸುಬ್ಬಾರೆಡ್ಡಿ ಪಾಲಾಯಿತು. ಸಂಪಂಗಿ ಸ್ಪರ್ಧೆಯ ಕಣದಿಂದಲೇ ದೂರವಾದರು. ಸಂಪಂಗಿ ಅವರೂ ಮೊದಲ ಬಾರಿಗೆ ಪಕ್ಷೇತರರಾಗಿ ಶಾಸಕರಾದವರು. 

2018ರಿಂದ ಟಿಕೆಟ್ ವಂಚಿತರಾಗುತ್ತಿರುವ ಸಂಪಂಗಿ ಅವರ ಹೆಸರು ಲೋಕಸಭೆ, ವಿಧಾನ ಪರಿಷತ್ ಚುನಾವಣೆ ಸೇರಿದಂತೆ ಯಾವುದೇ ಸಂದರ್ಭದಲ್ಲಿಯೂ ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪವಾಗುವುದಿಲ್ಲ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ ಅಷ್ಟೇ. ಸಂಪಂಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಮುಖವಾಗಿರುವ ಬಲಿಜ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 

ಹೀಗೆ ಗೌರಿಬಿದನೂರು ಪಕ್ಕದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಶಾಸಕ ‘ಕೈ’ಹಿಡಿದ ಕಾರಣ ಕಾಂಗ್ರೆಸ್ ನಾಯಕ ನೇಪಥ್ಯಕ್ಕೆ ಸರಿದ ನಿದರ್ಶನವಿದೆ. ಇಂತಹದ್ದೇ ಬೆಳವಣಿಗೆ ಗೌರಿಬಿದನೂರಿನಲ್ಲಿ ಭವಿಷ್ಯದಲ್ಲಿ ಆದರೆ ಚರ್ಚೆಗಳು ಇವೆ. 

ಶಿವಶಂಕರ ರೆಡ್ಡಿ ಅವರು ಮೊದಲ ಬಾರಿಗೆ ಪಕ್ಷೇತರರಾಗಿಯೇ ಶಾಸಕರಾದರು. ನಂತರ ಕಾಂಗ್ರೆಸ್ ಸೇರಿದರು ‘ಕೈ’ ಚಿಹ್ನೆಯಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದರು. ಈಗ ಪಕ್ಷೇತರರೇ ಆದ ಪುಟ್ಟಸ್ವಾಮಿಗೌಡ ಅವರಿಂದ ಸೋಲು ಅನುಭವಿಸಿದರು.  ‌ ಸುಬ್ಬಾರೆಡ್ಡಿ ಮತ್ತು ಪುಟ್ಟಸ್ವಾಮಿ ಗೌಡ ಮೂಲತಃ ಉದ್ಯಮಿಗಳು.

ಬಾಗೇಪಲ್ಲಿ ಮತ್ತು ಗೌರಿಬಿದನೂರಿನಲ್ಲಿ ಪಕ್ಷೇತರ ಶಾಸಕರ ಗೆಲುವು ಮತ್ತು ಅವರು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದಂತೆ, ‘ಕೈ’ ಹಿರಿಯ ನಾಯಕರು ಮೂಲೆಗುಂಪಾಗುವ ವಿಚಾರದಲ್ಲಿ ಎರಡೂ ಕ್ಷೇತ್ರಗಳ ನಡುವೆ ಸಾಮ್ಯತೆ ಇದೆ.

ಕೈನಲ್ಲಿ ಪ್ರಬಲವಾಗುತ್ತಿರುವ ಗೌಡರ ಕುಟುಂಬ: ಪಕ್ಷೇತರ ಶಾಸಕ ಪುಟ್ಟಸ್ವಾಮಿ ಗೌಡ ಅವರ ಕುಟುಂಬ ಕಾಂಗ್ರೆಸ್‌ನಲ್ಲಿ ಪ್ರಬಲವಾಗುತ್ತಿದೆ. ಅವರ ಅಳಿಯ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಕಿಯೋನಿಕ್ಸ್ ಅಧ್ಯಕ್ಷರಾಗಿದ್ದಾರೆ. ಈಗ ಸಹೋದರ ಸ್ಟಾರ್ ಚಂದ್ರು ಅವರಿಗೆ ಕಾಂಗ್ರೆಸ್ ಪಕ್ಷವು ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದೆ.

ಇಂತಹ ಹೊತ್ತಿನಲ್ಲಿ ಅದರಲ್ಲಿಯೂ ಲೋಕಸಭೆ ಚುನಾವಣೆಯ ಈ ಸಮಯದಲ್ಲಿ ಶಿವಶಂಕರ ರೆಡ್ಡಿ, ತಮ್ಮ ರಾಜಕೀಯ ‍ಪಟ್ಟುಗಳನ್ನು ಪ್ರದರ್ಶಿಸಲೇಬೇಕು.

ನವದೆಹಲಿಯಲ್ಲಿ ವರಿಷ್ಠರ ಭೇಟಿ ಮಾಡಿದ ಎನ್‌.ಎಚ್.ಶಿವಶಂಕರ ರೆಡ್ಡಿ 2013ರಲ್ಲಿ ಪಕ್ಷೇತರ ಶಾಸಕ ಸುಬ್ಬಾರೆಡ್ಡಿ ‘ಕೈ’ಹಿಡಿದ ಕಾರಣ ನೇಪಥ್ಯಕ್ಕೆ ಸಂಪಂಗಿ ಕಾಂಗ್ರೆಸ್‌ನಲ್ಲಿ ಪ್ರಬಲವಾಗುತ್ತಿದೆ ಪುಟ್ಟಸ್ವಾಮಿಗೌಡರ ಕುಟುಂಬ

‘ಒಕ್ಕಲಿಗರಿಗೆ ಟಿಕೆಟ್ ನೀಡಿದರೆ ಅನುಕೂಲ’ ವರಿಷ್ಠರ ಕರೆ ಹಿನ್ನೆಲೆಯಲ್ಲಿ ಶಿವಶಂಕರ ರೆಡ್ಡಿ ಅವರು ಶನಿವಾರ ನವದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದರು. ಈ ವೇಳೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಗ್ಗೆ ಚರ್ಚೆಗಳು ನಡೆದಿವೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಡಿ.ಕೆ.ಶಿವಕುಮಾರ್ ಮತ್ತಿತರರನ್ನು ಈ ವೇಳೆ ಭೇಟಿ ಮಾಡಿದ್ದಾರೆ. ವರಿಷ್ಠರ ಭೇಟಿ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎನ್‌.ಎಚ್.ಶಿವಶಂಕರ ರೆಡ್ಡಿ ‘ಸೋಮವಾರ ಇನ್ನೊಮ್ಮೆ ಸ್ಕ್ರೀನಿಂಗ್ ಸಮಿತಿ ಸಭೆ ಇದೆ. ಎಲ್ಲವನ್ನು ಪರಿಶೀಲಿಸುತ್ತೇವೆ ನಿರ್ಣಯಕೈಗೊಳ್ಳುತ್ತೇವೆ ಎಂದು ವರಿಷ್ಠರು ತಿಳಿಸಿದರು.   ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರು ಮಾಜಿ ಶಾಸಕರ ಅಭಿಪ್ರಾಯವನ್ನು ವೀಕ್ಷಕರು ಪಡೆದಿದ್ದಾರೆ. ನನಗೆ ಅನುಕೂಲಗಳು ಇವೆ. ಸ್ಥಳೀಯ ನಾಯಕ ಹಿರಿತನ ಸಮುದಾಯ ಎಲ್ಲ ದೃಷ್ಟಿಗಳಲ್ಲಿಯೂ ಸಕಾರಾತ್ಮಕವಾಗಿವೆ. ಆದರೆ ಬೇರೆಯವರಿಗೆ ಅವರದ್ದೇ ಆದ ಬೇರೆ ಬೇರೆ ದೃಷ್ಟಿಕೋನ ಇರುತ್ತದೆ’ ಎಂದರು. ‘ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕಾಗಿದೆ. ಇಲ್ಲದಿದ್ದರೆ ಕಳೆದ ಬಾರಿಯ ರೀತಿಯಲ್ಲಿಯೇ ಒಕ್ಕಲಿಗರ ಮತಧ್ರುವೀಕರಣ ಆಗುವ ಸಾಧ್ಯತೆ ಇದೆ. ಕಾಂಗ್ರೆಸ್‌ ಒಕ್ಕಲಿಗರಿಗೆ ಟಿಕೆಟ್ ನೀಡಿದರೆ ಅನುಕೂಲ ಎಂದು ಹೇಳಿದ್ದೇನೆ’ ಎಂದರು. ‘ಇನ್ನೊಂದು ಸಲ ವರದಿ ನೋಡುತ್ತೇವೆ. ಎಲ್ಲವನ್ನು ಗಮನಕ್ಕೆ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ವಿರುದ್ಧ ಪ್ರಬಲವಾಗಿರುವ ನಾಯಕರನ್ನೇ ಕಣಕ್ಕೆ ಇಳಿಸಬೇಕು ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT