ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರುನ ಮಂಚೇನಹಳ್ಳಿಯಲ್ಲಿ ಕಾಂಗ್ರೆಸ್‌ ಸಭೆ: ಬಿಜೆಪಿಗೆ ತಿರುಗೇಟು

Last Updated 12 ಆಗಸ್ಟ್ 2021, 5:10 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ಮಂಚೇನಹಳ್ಳಿಯಲ್ಲಿ ಸ್ಥಳೀಯ ‌ಕಾಂಗ್ರೆಸ್ ಮುಖಂಡರು ಸಭೆ ನಡೆಸಿ ಇತ್ತೀಚೆಗೆ ಗ್ರಾ.ಪಂ. ಚುನಾವಣೆಯಲ್ಲಿ ವಿಜೇತರಾದ ಸದಸ್ಯರ ಕಾರ್ಯವೈಖರಿ ವಿರುದ್ಧ ಹೇಳಿಕೆ ಕೊಡುತ್ತಿರುವ ಬಿಜೆಪಿ ನಾಯಕರಿಗೆ ಪ್ರತ್ಯುತ್ತರ ನೀಡಿದರು.

ತಾ.ಪಂ.ಮಾಜಿ ಸದಸ್ಯ ಜೆ. ಮೋಹನ್ ಕುಮಾರ್, ಜಿ.ಪಂ.ಮಾಜಿ ಸದಸ್ಯ ಪಿ.ಎನ್. ಪ್ರಕಾಶ್ ವಿರುದ್ಧ ಸ್ಥಳೀಯ ಬಿಜೆಪಿ ಮುಖಂಡರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ‌. ಸಚಿವರಿಂದ ಮೆಚ್ಚುಗೆ ಪಡೆಯಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ‌ ಎಂದು ಮುಖಂಡರು ದೂರಿದರು.

ಸ್ಥಳೀಯ ಗ್ರಾ.ಪಂ.ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಗೆಲ್ಲಲು ಪ್ರಕಾಶ್ ಕಾರಣರಾಗಿದ್ದಾರೆ‌. ಆರೋಗ್ಯ ಸಚಿವರು ಈ ಭಾಗದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನತೆ ನೋಡಿದ್ದಾರೆ. ಅಧಿಕಾರ ನೀಡಿದ ಪಕ್ಷವನ್ನೇ ತೊರೆದಿರುವ ಸಚಿವರೇ ಪ್ರಕಾಶ್ ಅವರ ಬೆನ್ನಿಗೆ ಚೂರಿ ಹಾಕುವ ಕಾರ್ಯ ಮಾಡಿದ್ದಾರೆ. ನಾವು ಆರಂಭದಿಂದಲೂ ಕಾಂಗ್ರೆಸ್‌ನಲ್ಲಿದ್ದು, ಅದರ ಏಳಿಗೆಗೆ ಶ್ರಮಿಸುತ್ತಿದ್ದೇವೆ. ಯಾರಿಂದಲೂ ಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ ಎಂದು ಹೇಳಿದರು.

ಮುಖಂಡ ಖಲಂದರ್ ಪಾಷಾ ಮಾತನಾಡಿ, ‘ಈ ಭಾಗದ ಮತದಾರದಿಂದ ಮತ ಪಡೆದು ಶಾಸಕರಾಗಿ, ಸಚಿವರಾಗಿರುವ ನಾಯಕರು ಕನಿಷ್ಠ ಈ ಭಾಗದ ರಸ್ತೆ ದುರಸ್ತಿ ಮಾಡಲು ಸಾಧ್ಯವಾಗಿಲ್ಲ. ರಸ್ತೆ ಕಾಮಗಾರಿಯ ಜವಾಬ್ದಾರಿ ಹೊತ್ತಿದ್ದ ಗುತ್ತಿಗೆದಾರನ ಮೇಲೆ ನೆಪ ಹೇಳುತ್ತಿದ್ದರು. ಮಂಚೇನಹಳ್ಳಿಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಸದಸ್ಯರನ್ನು ಹಣಕ್ಕೆ ಕೊಳ್ಳಲು ಸಾಧ್ಯವಾಗದೆ ಅಧಿಕಾರ ಕೈತಪ್ಪಿದ ಕಾರಣ ಹತಾಶರಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ’ ಎಂದು ಹೇಳಿದರು.

ಗ್ರಾ‌.ಪಂ. ಸದಸ್ಯರಾದ ಪ್ರಿಯಾಂಕ ಮಾತನಾಡಿ, ಇತ್ತೀಚೆಗೆ ಗ್ರಾ.ಪಂ.ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಹೆಚ್ಚಿನ ಸದಸ್ಯರು ಜಯಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ಈ ಪರಿಸ್ಥಿತಿಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಬಿಜೆಪಿ ಮುಖಂಡರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮುಖಂಡ ಬಾಬು ನಾಯ್ಡು ಮಾತನಾಡಿ, ಮಂಚೇನಹಳ್ಳಿಯು ಕಾಂಗ್ರೆಸ್ ಭದ್ರಕೋಟೆಯಾಗಿದೆ. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಲಾಯನ ಮಾಡಿ ಅಧಿಕಾರವಿದೆ ಎಂದು ಸುಖಾಸುಮ್ಮನೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ಅಧ್ಯಕ್ಷರಾದ ಖಮರುನ್ನಿಸ್ಸಾ ಖಲಂದರ್, ಉಪಾಧ್ಯಕ್ಷ ನರಸಿಂಹರೆಡ್ಡಿ, ಸದಸ್ಯರಾದ ನರಸಪ್ಪ, ಅಜಿತ್ ಕುಮಾರ್ ಜೈನ್, ಸುರೇಶ್ ಕುಮಾರ, ಫರಿದಾ ಇಮ್ರಾನ್, ರಾಮಾಂಜಿನಪ್ಪ, ಸತ್ಯನಾರಾಯಣ, ಅಜಯ್ ಮಿಂಡೋಜಾ, ಗೀತಾ, ಮುಖಂಡರಾದ ಮಸ್ತಾನ್ ಸಾಬ್, ಸುಬ್ರಮಣ್ಯ, ಲಕ್ಷ್ಮಣ ರೆಡ್ಡಿ, ಮಧುಸೂದನ ರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT