ಶುಕ್ರವಾರ, ಡಿಸೆಂಬರ್ 4, 2020
24 °C
ಗೌರಿಬಿದನೂರು: 14 ನಿರ್ದೇಶಕರ ಸ್ಥಾನಗಳಲ್ಲೂ ಕೈ ಪಾಳಯದ ಬೆಂಬಲಿಗರ ಗೆಲುವು

ಗೌರಿಬಿದನೂರು ಟಿಎಪಿಸಿಎಂಎಸ್ ಕಾಂಗ್ರೆಸ್ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 14 ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ.

‘ಎ’ ವರ್ಗದಲ್ಲಿ 6 ಮಂದಿ ನಿರ್ದೇಶಕರು ಹಾಗೂ ‘ಬಿ’ ವರ್ಗದಲ್ಲಿ 8 ಮಂದಿ ನಿರ್ದೇಶಕರ ಸ್ಥಾನಗಳು ಸೇರಿದಂತೆ ಎರಡೂ ವರ್ಗದಿಂದ 14 ಸ್ಥಾನಗಳಿಗೆ ಚುನಾವಣೆ ನಡೆಯಿತು. ಇದರಲ್ಲಿ ಕಾಂಗ್ರೆಸ್ ಬೆಂಬಲಿತದಿಂದ 14 ಸ್ಥಾನಗಳಿಗೆ ಹಾಗೂ ಪುಟ್ಟಸ್ವಾಮಿಗೌಡರ ಬಣದಿಂದ 14 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿ ಚುನಾವಣಾ ಅಖಾಡದಲ್ಲಿ ಸ್ಪರ್ಧಿಸಿದ್ದರು.

‘ಎ’ ವರ್ಗವು ತಾಲ್ಲೂಕಿನ ವಿವಿಧೆಡೆಗಳಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘದ 28 ಮಂದಿ ಅಧ್ಯಕ್ಷರನ್ನೊಳಗೊಂಡಿತ್ತು. ಅವರು ತಲಾ 6 ಮತ ನೀಡುವ ಮೂಲಕ ನಿರ್ದೇಶಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಒಳಗೊಂಡಿತ್ತು. ಇದರಂತೆಯೇ ತಾಲ್ಲೂಕಿನಲ್ಲಿನ ವಿವಿಧ ವ್ಯವಸಾಯೋತ್ವನ್ನ ಸಹಕಾರ ಸಂಘದಲ್ಲಿನ 482 ಮಂದಿ ಷೇರುದಾರರು ಮತದಾನದ ಹಕ್ಕನ್ನು ಒಳಗೊಂಡಿದ್ದರು. ಇವರಲ್ಲಿ 465 ಮಂದಿ ಹಕ್ಕು ಚಲಾಯಿಸಿದ್ದಾರೆ.

‘ಎ’ ವರ್ಗದಿಂದ ಕೆ.ಆರ್. ನರಸಿಂಹರೆಡ್ಡಿ, ಹನುಮಂತರೆಡ್ಡಿ, ಆರ್.ಕೆ. ನಂಜಪ್ಪ, ಜಿ.ರಾಮರೆಡ್ಡಿ, ವೆಂಕಟಶಿವಾರೆಡ್ಡಿ, ಜಿ. ಸಿದ್ದಪ್ಪ ಆಯ್ಕೆಯಾಗಿದ್ದಾರೆ.

‘ಬಿ’ ವರ್ಗದಿಂದ ಎಚ್. ನಾಗಭೂಷಣರೆಡ್ಡಿ, ಎನ್.ಎಸ್. ರವಿಚಂದ್ರರೆಡ್ಡಿ, ಕೆ.ಬಿ. ಪ್ರಮೀಳಾ ಬಾಲಾಜಿ, ಬಿ. ನಸೀಮಾ, ಸಿ.ಎ. ರಮೇಶ್, ಕೆ.ಎಚ್. ಸತೀಶ್ ಕುಮಾರ್, ಜೆ.ವಿ. ಈಶ್ವರಪ್ಪ,  ರಮೇಶ್ ನಾಯಕ್ ಆಯ್ಕೆಯಾಗಿದ್ದಾರೆ.

 ಚುನಾವಣೆಯನ್ನು ಕಾಂಗ್ರೆಸ್ ಮತ್ತು ಪುಟ್ಟಸ್ವಾಮಿಗೌಡ ಬಣದ ಕಾರ್ಯಕರ್ತರು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಕಳೆದ ಒಂದು ವಾರದಿಂದ ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿ ಸುತ್ತಿ ಮತದಾರರ ಮನೆ ಬಾಗಿಲಿಗೆ ತೆರಳಿ ಪ್ರಚಾರ ಕಾರ್ಯ ಮಾಡಿದ್ದರು. ಇದಲ್ಲದೆ ಕೆಲವು ನಿರ್ಣಾಯಕ ಮತಗಳನ್ನು ಒಲಿಸಿಕೊಳ್ಳುವ ಉದ್ದೇಶದಿಂದ ರೆಸಾರ್ಟ್ ರಾಜಕಾರಣಕ್ಕೂ‌ ಮುಂದಾಗಿದ್ದರು. ಆದರೆ ಈ ಚುನಾವಣೆಯಲ್ಲಿ ಗೌಡರ ಬಣದ ಕಾರ್ಯಕರ್ತರ ತಂತ್ರ ಫಲಿಸದೆ ಲೆಕ್ಕಾಚಾರ ತಲೆಕೆಳಗಾಗಿದೆ. 

ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ, ‘ಎಲ್ಲಾ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಪಕ್ಷವು ಸ್ಪಷ್ಟ ಬಹುಮತ ಹೊಂದಿದೆ. ಇದರಿಂದ ತಾಲ್ಲೂಕಿನಲ್ಲಿ ಪಕ್ಷವು ಸದೃಢವಾಗಿದೆ ಎಂಬುದು ತಿಳಿಯುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಇತ್ತೀಚೆಗೆ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ದೊರೆತಿದ್ದು, ಇದೀಗ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿಯೂ ಜನತೆ ನಮ್ಮ ಕೈ ಹಿಡಿದು ಅಭಿವೃದ್ಧಿಯನ್ನು ಮೆಚ್ಚಿದ್ದಾರೆ. ಮುಂಬರುವ ಸ್ಥಳೀಯ ಚುನಾವಣೆಗಳಿಗೆ ಕಾರ್ಯಕರ್ತರು ಅಣಿಯಾಗಬೇಕಿದೆ. ಯಾವುದೇ ಬಣದ ರಾಜಕಾರಣಕ್ಕೆ ತಾಲ್ಲೂಕಿನಲ್ಲಿ ನೆಲೆಯಿಲ್ಲ. ಪ್ರಾಮಾಣಿಕವಾಗಿ ಮಾಡುವ ಅಭಿವೃದ್ಧಿ ಕಾರ್ಯಗಳು ಮತ್ತು ಜನಸೇವೆಗೆ ಮನ್ನಣೆ ದೊರೆತಿದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.