ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಡ್ಲಘಟ್ಟ: ಲೋಕಾಯುಕ್ತ ಬಲೆಗೆ ಬಿದ್ದ ತಾ.ಪಂ ಇಒ

Published 30 ಏಪ್ರಿಲ್ 2024, 14:32 IST
Last Updated 30 ಏಪ್ರಿಲ್ 2024, 14:32 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಭೂ ಪರಿವರ್ತಿತ ಜಮೀನಿನ ನಕ್ಷೆ ಮಂಜೂರಾತಿಗೆ ಅನುಮೋದನೆ ನೀಡಲು ₹ 1.5 ಲಕ್ಷ  ಲಂಚ ಪಡೆಯುತ್ತಿದ್ದಾಗ ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ ಅವರನ್ನು ಮಂಗಳವಾರ ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ತಾಲ್ಲೂಕಿನ ಜಂಗಮಕೋಟೆ ಹೋಬಳಿ ಘಟ್ಟಮಾರನಹಳ್ಳಿಯ ನಂಜೇಗೌಡ ಅವರು ತಮ್ಮ 39 ಗುಂಟೆ ಪರಿವರ್ತಿತ ಜಮೀನಿನ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದು ಇಒ ಅವರು ₹ 2 ಲಕ್ಷ ಬೇಡಿಕೆಯಿಟ್ಟಿದ್ದರಂತೆ. ಈ ಪೈಕಿ ₹ 1.5 ಲಕ್ಷ ಅನ್ನು ಇಒ ಅವರ ಕಚೇರಿಯಲ್ಲೇ ಮುನಿರಾಜ ಅವರಿಗೆ ನೀಡುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಎಸ್‌.ಐ ಮೋಹನ್ ನೇತೃತ್ವದ ಲೋಕಾಯುಕ್ತ ಪೊಲೀಸರ ತಂಡವು ದಾಳಿ ನಡೆಸಿದ್ದು ಲಂಚದ ಹಣ ₹ 1.5 ಲಕ್ಷ  ಸಮೇತ ಇಒ ಅವರನ್ನು ವಶಕ್ಕೆ ಪಡೆದಿದ್ದಾರೆ.

ನಂತರ ಇಒ ಅವರ ಕೋಲಾರದ ಮನೆಗೂ ತೆರಳಿರುವ ಲೋಕಾಯುಕ್ತ ಪೊಲೀಸರು ಮನೆಯಲ್ಲಿಯೂ ತೀವ್ರ ಶೋಧ ನಡೆಸಿದ್ದಾರೆ. ನಂಜೇಗೌಡ ಅವರ ಭೂ ಪರಿವರ್ತಿತ ಜಮೀನಿನ ನಕ್ಷೆ ಅನುಮೋದನೆಗೆ ಸಂಬಂಧಿಸಿದ ಅರ್ಜಿಯಲ್ಲದೆ ಇತರೆ ದಾಖಲೆಗಳನ್ನು ತಡಕಾಡಿದ್ದಾರೆ. ನಂತರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುನಿರಾಜ ಅವರ ಆರೋಗ್ಯ ತಪಾಸಣೆ ನಡೆಸಲಾಯಿತು.

ಲೋಕಾಯುಕ್ತ ಡಿವೈಎಸ್ಪಿ ವೀರೇಂದ್ರ ಕುಮಾರ್, ಶಿವಪ್ರಸಾದ್, ಎಸ್‌ಐ ಮೋಹನ್, ಸಿಬ್ಬಂದಿ ಸಂತೋಷ್, ಸತೀಶ್, ನಾಗರಾಜ್, ಲಿಂಗರಾಜ, ಗುರು, ಚೌಡರೆಡ್ಡಿ, ಪ್ರಕಾಶ್ ಹಾಜರಿದ್ದು ಹೆಚ್ಚಿನ ವಿವರ ಕಲೆಹಾಕುವ, ದಾಖಲೆಗಳನ್ನು ಸಂಗ್ರಹಿಸುವ ಕೆಲಸ ಮುಂದುವರೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT