ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಹೆಚ್ಚಿದ ಕೋವಿಡ್ ಪ್ರಕರಣಗಳು, ಸೋಂಕಿತರ ಸಂಖ್ಯೆ 180ಕ್ಕೆ ಏರಿಕೆ

ಬುಧವಾರ ಒಂದೇ ದಿನ 8 ಪ್ರಕರಣಗಳು ವರದಿ
Last Updated 24 ಜೂನ್ 2020, 14:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ನಿಯಂತ್ರಣಕ್ಕೆ ಬಂದು, ಶೇ 98 ರಷ್ಟು ಸೋಂಕಿತರೆಲ್ಲ ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದ ಬೆನ್ನಲ್ಲೇ ಸಂತಸಗೊಂಡಿದ್ದ ನಾಗರಿಕರು ಕಳೆದ ಕೆಲ ದಿನಗಳಿಂದ ಏರುಮುಖವಾಗುತ್ತಿರುವ ಕೋವಿಡ್‌ ಸಂಖ್ಯೆ ನೋಡಿ ತಲ್ಲಣಗೊಂಡಿದ್ದಾರೆ.

ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ ಎಂಟು ಜನರಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 180ಕ್ಕೆ ಏರಿಕೆಯಾಗಿದೆ.

ಬುಧವಾರ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ನಾಲ್ಕು ಪ್ರಕರಣಗಳು ವರದಿಯಾಗಿವೆ. 58, 39 ಮತ್ತು 24 ಪ್ರಾಯದ ಮೂರು ಜನರು ಹಾಗೂ 53 ವರ್ಷದ ಮಹಿಳೆಯೊಬ್ಬರಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ.

ಜತೆಗೆ, ಚಿಂತಾಮಣಿ ತಾಲ್ಲೂಕಿನ 45 ವರ್ಷದ ವ್ಯಕ್ತಿ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 28, 30 ವರ್ಷದ ಇಬ್ಬರಿಗೆ ಕೋವಿಡ್ ತಗುಲಿದೆ. ಗೌರಿಬಿದನೂರಿನ 26 ವರ್ಷದ ಗೃಹಿಣಿಯೊಬ್ಬರಲ್ಲಿ ಕೋವಿಡ್ ಕಾಣಿಸಿಕೊಂಡು ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ.

ಜಿಲ್ಲೆಗೆ ಮುಂಬೈನಿಂದ ವಾಪಾಸಾದ 340 ಜನರ ಪೈಕಿ ಈವರೆಗೆ 124 ಜನರಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ. ಈವರೆಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 20, ಬಾಗೇಪಲ್ಲಿ 53, ಚಿಂತಾಮಣಿ 13, ಗೌರಿಬಿದನೂರು 85, ಶಿಡ್ಲಘಟ್ಟ 9 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ 30 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ನಿಯಂತ್ರಣಕ್ಕೆ ಬಂದಿದ್ದ ಪರಿಸ್ಥಿತಿ ಕಂಡು ಮುದಗೊಂಡು, ಕೋವಿಡ್ ಮುಕ್ತ ಜಿಲ್ಲೆ ಘೋಷಣೆಗೆ ಸಿದ್ಧತೆ ಮಾಡಿಕೊಂಡಿದ್ದ ಜಿಲ್ಲಾಡಳಿತಕ್ಕೆ ಪುನಃ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವುದು ಹೊಸ ತಲೆನೋವು ತಂದಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT