ಗುರುವಾರ , ಜನವರಿ 27, 2022
21 °C
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜುಲೈ, ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ವ್ಯಾಪಕ ಮಳೆ

ಬೆಳೆ, ಮನೆಗೆ ಹಾನಿ; ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ₹ 47 ಕೋಟಿ ಪಾವತಿ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಸುರಿದ ಮಳೆಯಿಂದ ಭಾರಿ ಪ್ರಮಾಣದ ಬೆಳೆ ಹಾನಿಯಾಗಿದೆ. ಈ ಹಾನಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 74,190 ಮಂದಿ ಪರಿಹಾರ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು ಇವರಲ್ಲಿ 66,297 ಮಂದಿಗೆ ಪರಿಹಾರ ವಿತರಿಸಲಾಗಿದೆ. ಇದರ ಒಟ್ಟು ಮೊತ್ತ ₹ 35.75 ಕೋಟಿ ಬಿಡುಗಡೆಯಾಗಿದೆ. 

ಜಿಲ್ಲೆಯಾದ್ಯಂತ ಬೆಳೆ ಹಾನಿಗೆ ಒಳಗಾದ ರೈತರ ಬೆಳೆಗಳನ್ನು 4 ಹಂತಗಳಲ್ಲಿ ಪರಿಹಾರ್ ಪೋರ್ಟಲ್‌ನಲ್ಲಿ ದಾಖಲಿಸಲಾಗಿತ್ತು. ಡಿ.4 ರವರೆಗೆ 16,917 ರೈತರಿಗೆ ₹ 8 ಕೋಟಿ ಪರಿಹಾರ ಹಣ ಬಿಡುಗಡೆ ಆಗಿತ್ತು. ನಂತರ ಡಿ.29ರವರೆಗೆ ₹ 35.75 ಕೋಟಿ ಬಿಡುಗಡೆ ಆಗಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪರಿಹಾರದ ಹಣವನ್ನು ನೇರ ವರ್ಗಾವಣೆ ಮಾಡಲಾಗಿದೆ.

2021ರ ಜುಲೈ, ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆ ಆಗಿತ್ತು. ನಾಲ್ಕು ದಶಕಗಳಲ್ಲಿಯೇ ಅತಿ ಗರಿಷ್ಠ ಪ್ರಮಾಣದ ಮಳೆ ಈ ತಿಂಗಳುಗಳಲ್ಲಿ ಸಂಭವಿಸಿತ್ತು. 90 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿತು. 

ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಹಾನಿ ವಿವರ ಸಂಗ್ರಹಿಸಿದ್ದರು. ಜಂಟಿ ಸಮೀಕ್ಷೆಯಿಂದ ಸ್ವೀಕೃತ ಬೆಳೆ ಹಾನಿ ವಿವರವನ್ನು ಪರಿಹಾರ ಪೋರ್ಟಲ್‌ನಲ್ಲಿ ನಮೂದಿಸಲಾಯಿತು. ಪೋರ್ಟಲ್‌ನಲ್ಲಿ ಮಾಹಿತಿ ಹಾಗೂ ದತ್ತಾಂಶ ನಮೂದು ಪ್ರಕ್ರಿಯೆ ಡಿ.7ಕ್ಕೆ ಪೂರ್ಣಗೊಂಡಿತು. 

1961 ಮನೆಗಳಿಗೆ ಅನುಮೋದನೆ: ಜಿಲ್ಲೆಯಲ್ಲಿ ಭಾರಿ ಮಳೆಗೆ ಹೇರಳ ಸಂಖ್ಯೆಯ ಮನೆಗಳಿಗೆ ಹಾನಿಯಾಗಿದೆ. 1,972 ಮನೆಗಳಿಗೆ ಹಾನಿಯಾಗಿದೆ ಎಂದು ಆಯಾ ತಹಶೀಲ್ದಾರರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಇವುಗಳಲ್ಲಿ 1,961 ಮನೆಗಳಿಗೆ ಜಿಲ್ಲಾಧಿಕಾರಿ ಅನುಮೋದನೆ ಕೊಟ್ಟಿದ್ದರು. ಮನೆಗಳ ಹಾನಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಒಟ್ಟು ₹ 14.72 ಕೋಟಿ ಬಿಡುಗಡೆ ಮಾಡಬೇಕಾಗಿದ್ದು ₹ 12.28 ಕೋಟಿಯನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದ್ದಾರೆ. ಶೇ 83ರಷ್ಟು ಹಣವನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದ್ದಾರೆ.

2020 ಮತ್ತು 2019ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ಮನೆಗಳಿಗೆ ಹಾನಿ ಸಂಭವಿಸಿರಲಿಲ್ಲ. ಆದರೆ 2021ರಲ್ಲಿ ಸುರಿದ ಮಳೆ ಸಾವಿರಾರು ಮನೆಗಳಿಗೆ ಹಾನಿ ಮಾಡಿದೆ.

ಮೂಲಸೌಕರ್ಯಕ್ಕೆ ಹಾನಿ: ಮಳೆ ಬೆಳೆಗಷ್ಟೇ ಹಾನಿ ಮಾಡಿಲ್ಲ. ಜಿಲ್ಲೆಯಲ್ಲಿ ಮೂಲಸೌಕರ್ಯಗಳಿಗೂ ಹೆಚ್ಚಿನ ಹಾನಿಯನ್ನು ಮಾಡಿದೆ. ಒಟ್ಟು ₹ 185.75 ಲಕ್ಷ ಮೊತ್ತದ ಹಾನಿ ಸಂಭವಿಸಿದೆ.

***

ಅಂಕಿ ಅಂಶ

1,972 
ಮಳೆಯಿಂದ ಹಾನಿಗೆ ಒಳಗಾಗಿರುವ ಮನೆಗಳ ಸಂಖ್ಯೆ

₹ 35.75 ಕೋಟಿ
ಬಿಡುಗಡೆಯಾಗಿರುವ ಬೆಳೆ ಪರಿಹಾರದ ಹಣ

₹ 185.75 ಲಕ್ಷ
ಪ್ರವಾಹದಿಂದ ಮೂಲಸೌಕರ್ಯಕ್ಕಾದ ಹಾನಿಯ ಮೊತ್ತ 

₹ 843.14 ಲಕ್ಷ
ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿರುವ ಅನುದಾನ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.