ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಬ್ಬಾಳಿಕೆಯಿಂದ ಬೆಳೆ ನಾಶ– ಆರೋಪ

Last Updated 13 ಜೂನ್ 2020, 15:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕೆಲ ಮುಖಂಡರ ಕುಮ್ಮಕ್ಕಿನಿಂದ ಅಧಿಕಾರಿಗಳು ರಸ್ತೆ ಮಾಡಿಸುವ ನೆಪದಲ್ಲಿ ಉದ್ದೇಶ ಪೂರ್ವಕವಾಗಿ ತಮ್ಮ ದ್ರಾಕ್ಷಿ ಬೆಳೆ, ತೆಂಗಿನ ಮರಗಳನ್ನು ನಾಶ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಲು ಹೋದರೆ ಪೊಲೀಸರು ಸ್ವೀಕರಿಸುತ್ತಿಲ್ಲ’ ಎಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಲಿಂಗಶೆಟ್ಟಿಪುರ ನಿವಾಸಿ ಎಲ್.ಸಿ.ವೆಂಕಟರವಣಪ್ಪ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾಮದ ಸರ್ವೇ ನಂಬರ್ 31 ರ ಜಮೀನು ಪಕ್ಕದಲ್ಲೇ 20 ಅಡಿಗಳ ರಸ್ತೆ ಇದೆ. ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಆದರೂ ನಮ್ಮ ಜಮೀನಿನಲ್ಲಿ ಈ ಹಿಂದೆ ರಸ್ತೆ ಇತ್ತು ಎಂದು ಹೇಳಿ ಅಧಿಕಾರಿಗಳು ಇತ್ತೀಚೆಗೆ ನಾವು ಬೆಳೆದ ದ್ರಾಕ್ಷಿ ಹಾಗೂ ತೆಂಗಿನ ಮರಗಳನ್ನು ನಾಶಪಡಿಸಿದ್ದಾರೆ’ ಎಂದು ಹೇಳಿದರು.

‘ಒಂದೊಮ್ಮೆ ಸರ್ವೇ ನಂಬರ್ 31 ರಲ್ಲಿ ನಕಾಶೆಯಂತೆ ಜಮೀನಿನಲ್ಲಿ ರಸ್ತೆ ಇದ್ದರೆ ಸ್ವಲ್ಪ ದಿನಗಳ ಕಾಲ ಅವಕಾಶ ನೀಡಿ ಫಸಲು ಕಟಾವಿನ ನಂತರ ರಸ್ತೆ ಒತ್ತುವರಿ ತೆರವುಗೊಳಿಸಬಹುದಿತ್ತು. ಆದರೆ, ತಹಶೀಲ್ದಾರ್, ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿ ಮತ್ತು ಕೆಲ ಮುಖಂಡರ ಮಾತು ಕೇಳಿ ನಮಗೆ ಯಾವುದೇ ಸೂಚನೆ ನೀಡದೇ ಏಕಾಏಕಿ ತೋಟ ನಾಶ ಮಾಡಿದ್ದಾರೆ’ ಎಂದು ಆಪಾದಿಸಿದರು.

‘ಗ್ರಾಮದ ಕೆಲ ಮುಖಂಡರಿಂದ ನಮಗೆ ಪ್ರಾಣ ಬೆದರಿಕೆ ಇದೆ. ರಕ್ಷಣೆ ನೀಡುವಂತೆ ಕೋರಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲು ಹೋದರೆ, ಪೊಲೀಸ್ ಅಧಿಕಾರಿಗಳು ನಮ್ಮ ಮೇಲೆಯೇ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಈ ವಿಚಾರ ತಹಶೀಲ್ದಾರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನ್ಯಾಯ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ಹೇಳಿದರು.

‘ಒತ್ತುವರಿ ತೆರವು ನೆಪದಲ್ಲಿ ನಾಶವಾಗಿರುವ ದ್ರಾಕ್ಷಿ ಬೆಳೆ ಬೆಳೆಯಲು ಈಗಾಗಲೇ ಬ್ಯಾಂಕ್‍ನಿಂದ ₹3 ಲಕ್ಷ ಸಾಲ ಪಡೆದಿರುವೆ. ಕೊರೊನಾ ಸಮಸ್ಯೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಹೊತ್ತಿನಲ್ಲಿಯೇ ಅಧಿಕಾರಿಗಳು ಕೈಗೆ ಬಂದ ಬೆಳೆ ಕಟಾವಿಗೂ ಅವಕಾಶ3 ಟನ್ ನಷ್ಟು ದ್ರಾಕ್ಷಿ ಫಸಲು, ಆರು ತೆಂಗಿನ ಮರಗಳನ್ನು ನಾಶಪಡಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮುಖಂಡರಾದ ಹನುಮಣ್ಣ, ಅಮರನಾಥ್, ಕೆಂ.ಎಂ.ರಾಮಚಂದ್ರಪ್ಪ, ಶ್ರೀನಿವಾಸ್, ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT