ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಪ್ಪಂದಿರ ದಿನ: ಬದುಕಲು ಕಲಿಸಿದ ಅಪ್ಪ

Last Updated 20 ಜೂನ್ 2021, 3:14 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ಕೊರೊನಾ ಎರಡನೇ ಅಲೆಯ ರೂಪದಲ್ಲಿ ಯಮದೂತ ಬಂದು ನಮ್ಮ ತಂದೆಯನ್ನು ದೇವರ ಬಳಿಗೆ ಕರೆದೊಯ್ದುಬಿಟ್ಟ. ಈಗ ನಾವು ಯಾರನ್ನು ಅಪ್ಪ ಎಂದು ಕರೆಯೋದು?’ ಎನ್ನುತ್ತಾರೆ ಹಂಡಿಗನಾಳದ ನವೀನ್ ಕುಮಾರ್ ಮತ್ತು ನಿತಿನ್ ಕುಮಾರ್.

ಹಂಡಿಗನಾಳ ಗ್ರಾಮದ ರಾಮಾಂಜಿನಪ್ಪ ಒಂದೂವರೆ ತಿಂಗಳ ಹಿಂದೆ ಕೋವಿಡ್‌ನಿಂದ ನಿಧನರಾದರು. ತಂದೆಯಂದಿರ ದಿನಕ್ಕಾಗಿ ‘ಪ್ರಜಾವಾಣಿ’ ಅವರ ಮಕ್ಕಳನ್ನು ಮಾತನಾಡಿದಾಗ ತಮ್ಮ ಪ್ರೀತಿಯ ತಂದೆಯೊಂದಿಗಿನ ನೆನಪುಗಳನ್ನು ಅವರು ಬಿಚ್ಚಿಟ್ಟರು.

‘ನಮ್ಮಪ್ಪ ಸುಮಾರು ಹನ್ನೊಂದು ವರ್ಷಗಳಿಂದ ಶಿಡ್ಲಘಟ್ಟದಲ್ಲಿ ಬಾಡಿಗೆ ಕಟ್ಟಡದಲ್ಲಿ ಸಲೂನ್ ಇಟ್ಟುಕೊಂಡಿದ್ದರು. ನಮ್ಮಿಬ್ಬರಿಗೂ ಓದಿ ವಿದ್ಯಾವಂತರಾಗುವಂತೆ ಹೇಳುತ್ತಿದ್ದರು. ನಾನು ಹೆಚ್ಚಿಗೆ ಓದಲಿಲ್ಲ. ನನ್ನ ತಮ್ಮ ಐಟಿಐ ಓದಿದ. ಇಬ್ಬರಿಗೂ ಸಲೂನ್ ನಲ್ಲಿ ಕಟಿಂಗ್, ಶೇವಿಂಗ್ ಮಾಡುವುದನ್ನು ಕಲಿಸಿಕೊಟ್ಟರು. ಅದರಿಂದ ನಾವೀಗ ಸ್ವತಂತ್ರವಾಗಿ ಬದುಕಲು ಸಹಾಯವಾಗಿದೆ. ಶಾಲೆಯಲ್ಲಿ ಕಲಿಯದ ಬದುಕಿಗೆ ಬೇಕಾದ ಅತ್ಯಗತ್ಯ ವಿದ್ಯೆಯನ್ನು ಕಲಿಸಿಕೊಟ್ಟ ಗುರು ನಮ್ಮಪ್ಪ’ ಎನ್ನುತ್ತಾರೆ ನವೀನ್ ಕುಮಾರ್.

‘ಕದಿರುಣ್ಣಿಮೆಗೆ ನಮ್ಮನ್ನೆಲ್ಲಾ ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದರು. ಹೊಸ ಬಟ್ಟೆ ಕೊಡಿಸುತ್ತಿದ್ದರು. ದುಡಿದು ಬದುಕಬೇಕು ಮಗಾ, ಯಾರೊಡವೆಯೂ ನಮಗೆ ಬೇಡ. ತಿನ್ನುವ ಊಟ ನಮ್ಮ ದುಡಿಮೆಯದಾಗಿರಲಿ. ಬೇರೆಯವರಿಗೆ ತೊಂದರೆ ಕೊಟ್ಟು ಸಂಪಾದಿಸಿದ ಹಣದಲ್ಲಿ ತಿಂದರೆ ಅದು ಮೈಗತ್ತುವುದಿಲ್ಲ ಎನ್ನುತ್ತಿದ್ದರು. ಅವರು ಕೊಡಿಸಿದ ಬಜಾಜ್ ಸ್ಕೂಟರ್, ಕಷ್ಟಪಟ್ಟು ಕಟ್ಟಿದ್ದ ಮನೆ ಮತ್ತು ಬದುಕಲು ಕಲಿಸಿದ ವಿದ್ಯೆಯೇ ನಮಗೆ ನಮ್ಮಪ್ಪ ಕೊಟ್ಟ ದೊಡ್ಡ ಆಸ್ತಿ’ ಎಂದು
ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT