ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ಪತ್ರ ಹಂಚಲು ಮಾ.31ರ ಗಡುವು

ತಾ.ಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಾಕೀತು
Last Updated 23 ಫೆಬ್ರುವರಿ 2021, 4:29 IST
ಅಕ್ಷರ ಗಾತ್ರ

ಬಾಗೇಪಲ್ಲಿ: ‘ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳ ಅರ್ಹ ನಿವೇಶನರಹಿತರಿಗೆ ನಿವೇಶನ ಪತ್ರಗಳನ್ನು ಮುಂದಿನ ಮಾ.31 ರೊಳಗೆ ಹಂಚಬೇಕು’ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಂಚಾಯಿತಿಗಳ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿದರೂ, ನಿವೇಶನ ಹಕ್ಕು ಪತ್ರ ಹಂಚಿಸುವಲ್ಲಿ ಗ್ರಾಮ ಪಂಚಾಯಿತಿಯ ಕೆಲ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ನನಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಪೂರ್ಣ ನಂಬಿಕೆ ಇಲ್ಲ. ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಕಂದಾಯ ಇಲಾಖೆಯ ಅಧಿಕಾರಿಗಳ ಸೇರಿ, ನಿವೇಶನ ಪತ್ರಗಳನ್ನು ಮಾರ್ಚ್ 31 ರೊಳಗೆ ನಿವೇಶನ ಪತ್ರಗಳನ್ನು ವಿತರಣೆ ಮಾಡಿಸಬೇಕು’ ಎಂದು ತಹಶೀಲ್ದಾರ್ ಡಿ.ವಿ.ದಿವಾಕರ್ ಅವರಿಗೆ ಸುಬ್ಬಾರೆಡ್ಡಿ ತಿಳಿಸಿದರು.

ತಾಲ್ಲೂಕಿನ ಕಾಶಾಪುರ, ಗೆರಿಗೆರೆಡ್ಡಿಪಾಳ್ಯ ಸೇರಿದಂತೆ ಅಲೆಮಾರಿ, ಅರೆಅಲೆಮಾರಿ ಸಮುದಾಯದವರು ಇದ್ದಾರೆ. ಗುಡಿಸಲು ಮನೆಗಳಲ್ಲಿ ವಾಸವಾಗಿದ್ದಾರೆ. ಕೆಲವರಿಗೆ ನಿವೇಶನ ಮನೆ ಇಲ್ಲ. ಅಧಿಕಾರಿಗಳ ತಂಡ ಭೇಟಿ ನೀಡಿ, ಸರ್ವೆ ಮಾಡಿ, ನಿವೇಶನ ರಹಿತರ ಪಟ್ಟಿಯಲ್ಲಿ ಈ ಸಮುದಾಯದವರನ್ನು ಸೇರಿಸಬೇಕು. ಸರ್ಕಾರಿ ಜಾಗದಲ್ಲಿ ಅನಧಿಕೃತ ಮನೆ ನಿರ್ಮಿಸಿಕೊಂಡಿರುವವರು, ಕೂಡಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿಕೊಂಡರೆ, ಪೂರ್ಣವಾಗಿ ನಿವೇಶನ ಮಾಡಿಸುವುದಾಗಿ ತಿಳಿಸಿದರು.

ಲೋಕೋಪಯೋಗಿ ಇಲಾಖೆಯಲ್ಲಿ ₹50 ಕೋಟಿ ಹಣ ಇದ್ದರೂ, ಕನಿಷ್ಠ ಗುಂಡಿಗಳಿಗೆ ಜಲ್ಲಿ, ಮಣ್ಣು ತುಂಬಲು ಆಗಿಲ್ಲ. ಗಡಿದಂ ನ ಸೇತುವೆ ಮೇಲೆ, ಗೂಳೂರು ರಸ್ತೆ ಸೇರಿದಂತೆ ಕೆಲ ಕಡೆ ರಸ್ತೆಗಳಲ್ಲಿ ಬೃಹತ್ ಗುಂಡಿಗಳು ನಿರ್ಮಾಣ ಆಗಿದೆ. ಕನಿಷ್ಠ ಗುಂಡಿಯಾದರೂ ಮುಚ್ಚಿ, ಪ್ರಯಾಣಿಕರ ಸುಗಮ ರಸ್ತೆ ಮಾಡಿಸಿ. ಕಳಪೆ ಕಾಮಗಾರಿಗಳು ಮಾಡುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಲೋಕೊಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೆ.ಎಸ್. ರಾಮಲಿಂಗಾರೆಡ್ಡಿಗೆ ಸೂಚಿಸಿದರು.

ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, ರಸ್ತೆ ಮೇಲಿನ ಗುಂಡಿಗಳು ಮುಚ್ಚಲು ಅವಕಾಶ ಇಲ್ಲ. ಪೂರ್ಣ ರಸ್ತೆ ಕಾಮಗಾರಿಗಳು ಮಾಡಲು ಅವಕಾಶ ಇದೆ. ಗುಂಡಿಗಳು ಮುಚ್ಚಿಸಲು ಹಿರಿಯ ಅಧಿಕಾರಿಗಳಿಂದ ಆದೇಶ ಬೇಕಾಗಿದೆ. ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಮಾಡಲಾಗುವುದು ಎಂದು ತಿಳಿಸಿದರು.

‘ತಾಲ್ಲೂಕಿನ ಆಚಗಾನಪಲ್ಲಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮವಾಗಿ ಶೇಖರಣೆ ಮಾಡಿರುವ ಅಕ್ಕಿಮೂಟೆಗಳನ್ನು ದಾಳಿ ಮಾಡಿ ಉಪವಿಭಾಗಾಧಿಕಾರಿ ವಶಪಡಿಸಿಕೊಂಡಿದ್ದಾರೆ. ಆದರೆ ಇಲ್ಲಿನ ಆಹಾರ ಸರಬರಾಜಿನ ಅಧಿಕಾರಿಗಳು ಕಚೇರಿಯಲ್ಲಿಯೇ ಇರುತ್ತಾರೆ. ಕನಿಷ್ಠ ತಿಂಗಳಿಗೊಂದು ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ಮಾಡಿ, ತೂಕ, ಪಡಿತರ ಹಂಚಿಕೆ ಸೇರಿದಂತೆ ಸರ್ಕಾರಿ ಸೌಲಭ್ಯಗಳು ಜನರಿಗೆ ತಲುಪುತ್ತಿದೆ. ಇದು ಕೂಡಲೇ ಆರಂಭವಾಗಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ, ನರೇಗಾ, ಶಿಕ್ಷಣ, ಕೃಷಿ, ಬೆಸ್ಕಾಂ, ಶಿಶು ಕಲ್ಯಾಣ, ಸಮಾಜ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿಯನ್ನು ಸಭೆಯಲ್ಲಿ ಮಂಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನರಸಿಂಹಪ್ಪ, ತಹಶೀಲ್ದಾರ್ ಡಿ.ವಿ.ದಿವಾಕರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಚ್.ಎನ್.ಮಂಜುನಾಥಸ್ವಾಮಿ, ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಉಪಾಧ್ಯಕ್ಷೆ ಸರಸ್ವತಮ್ಮ ಶಿವರಾಮರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT