ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಬಂಡೆ: ವಿದ್ಯಾರ್ಥಿಗಳ ದಾಖಲಾತಿ ಕುಸಿತ, 1ರಿಂದ 7ನೇ ತರಗತಿವರೆಗೆ 31 ಮಕ್ಕಳು!

Published 2 ಮಾರ್ಚ್ 2024, 6:46 IST
Last Updated 2 ಮಾರ್ಚ್ 2024, 6:46 IST
ಅಕ್ಷರ ಗಾತ್ರ

ಗುಡಿಬಂಡೆ: ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಜತೆಗೆ ನುರಿತ ಶಿಕ್ಷಕರಿದ್ದರೂ ಪೋಷಕರು ಆಂಗ್ಲ ಮಾಧ್ಯಮಕ್ಕೆ ಒತ್ತು ನೀಡುತ್ತಿದ್ದಾರೆ. ಗ್ರಾಮಾಂತರ ಕನ್ನಡ ಶಾಲೆಗಳಿಗೆ ಮಕ್ಕಳನ್ನು ದಾಖಲಿಸದೆ ಖಾಸಗಿ ಹಾಗೂ ಪಬ್ಲಿಕ್ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ.

ಗುಡಿಬಂಡೆಯಿಂದ ಬಾಗೇಪಲ್ಲಿಗೆ ಹೋಗುವ ಮುಖ್ಯ ರಸ್ತೆಯಲ್ಲಿನ ಮಾಚಹಳ್ಳಿ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಸಪಲೋಡು) ಪಕ್ಕದ ಒಂದು ಕಿ.ಮೀ ದೂರದ ಐದು ಹಳ್ಳಿಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ 1954ರಲ್ಲಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಗಿದೆ. ವಿದ್ಯಾರ್ಥಿಗಳ ಸಂಖ್ಯೆ 100ಕ್ಕೆ ತಲುಪಿ 1 ರಿಂದ 7ನೇ ತರಗತಿವರೆಗೆ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಾಡಾಗಿದೆ.

ಈಗ ಪ್ರತಿ ಗ್ರಾಮದಲ್ಲೂ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಗಿದೆ. ಜತೆಗೆ ಒಂದು ಕಿ.ಮೀ ದೂರದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾರಂಭವಾಗಿದೆ. ಇದರಿಂದ ಪಸಪಲೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರತಿ ವರ್ಷ ಕುಸಿಯುತ್ತಿದೆ.

ಶಾಲೆಯಲ್ಲಿ 1ನೇ ತರಗತಿಗೆ ಒಂದು ಮಗು, 2ನೇ ತರಗತಿಯಲ್ಲಿ 4, 3ನೇ ತರಗತಿಯಲ್ಲಿ 2, 4ನೇ ತರಗತಿಯಲ್ಲಿ 4, 5ನೇ ತರಗತಿಯಲ್ಲಿ 1, 6ನೇ ತರಗತಿಯಲ್ಲಿ 12, 7ನೇ ತರಗತಿಯಲ್ಲಿ 7 ವಿದ್ಯಾರ್ಥಿಗಳು ಸೇರಿ 31 ಮಕ್ಕಳು ಕಲಿಯುತ್ತಿದ್ದಾರೆ. ನಾಲ್ವರು ಶಿಕ್ಷಕರಿದ್ದು, ಇವರಲ್ಲಿ ಒಬ್ಬರು ಪ್ರಭಾರಿ ಮುಖ್ಯ ಶಿಕ್ಷಕರಾಗಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇರುವ ಮಾಚಹಳ್ಳಿ ಗ್ರಾಮದಲ್ಲಿ 88 ವಸತಿ ಮನೆ, 422 ಜನಸಂಖ್ಯೆ ಇದೆ. ಗ್ರಾಮದಿಂದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸುಮಾರು 15 ಮಕ್ಕಳು ಬಾಗೇಪಲ್ಲಿ, ಗುಡಿಬಂಡೆ ಖಾಸಗಿ ಹಾಗೂ ಪಬ್ಲಿಕ್ ಶಾಲೆಗಳಿಗೆ ಹೋಗುತ್ತಿದ್ದಾರೆ.

ಶಾಲಾ ಆಡಳಿತ ಪ್ರತಿವರ್ಷ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡು 1ನೇ ತರಗತಿಗೆ ವಿದ್ಯಾರ್ಥಿಗಳನ್ನು ಸೇರಿಸಿ ಎಂದು ಕೇಳಿಕೊಳ್ಳುತ್ತಿದೆ. ಆದರೂ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿಲ್ಲ.

ಈಗ ಸರ್ಕಾರ ಎಲ್‌ಕೆಜಿಯಿಂದ 12ರ ತನಕ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ಪಬ್ಲಿಕ್ ಶಾಲೆಗಳನ್ನು ಪಟ್ಟಣದ ವ್ಯಾಪ್ತಿಯಲ್ಲಿ ಪ್ರಾರಂಭಿಸಿದೆ. ಇದನ್ನು ಗ್ರಾಮಾಂತರ ಶಾಲೆಗಳಿಗೆ ವಿಸ್ತರಿಸಿದರೆ ಮಾತ್ರ ಸರ್ಕಾರಿ ಕಿರಿಯ, ಹಿರಿಯ, ಪ್ರೌಢ ಕನ್ನಡ ಮಾಧ್ಯಮ ಶಾಲೆಗಳು ಉಳಿಯಬಹುದು ಎಂದು ಮಾಚಹಳ್ಳಿ ಗ್ರಾಮದ ಎಂ.ವಿ.ಶಿವಣ್ಣ ಹೇಳುತ್ತಾರೆ.

ಮಾಚಹಳ್ಳಿ ಗ್ರಾಮದಲ್ಲಿ ಪ್ರತಿ ಮನೆಗೆ ಶೈಕ್ಷಣಿಕ ವರ್ಷದ ಆರಂಭದಲ್ಲಿ ಭೇಟಿ ನೀಡಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಅಂಗಲಾಚಿದರೂ ಪೋಷಕರು ಕೇಳುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ವಿಷಯದಲ್ಲಿ ಬೋಧನೆ ಮಾಡುತ್ತಿದ್ದರೂ ಸಹ ಪೋಷಕರು ಸರ್ಕಾರಿ ಕನ್ನಡ ಶಾಲೆಗಳತ್ತ ಗಮನಹರಿಸುತ್ತಿಲ್ಲ. ಇದರಿಂದ ಶಾಲೆಯಲ್ಲಿ ದಾಖಲಾತಿ ಕುಸಿಯುತ್ತಿದೆ ಎಂದು ಪ್ರಭಾರಿ ಮುಖ್ಯ ಶಿಕ್ಷಕ ವಿ.ಶ್ರೀರಾಮಪ್ಪ ಹೇಳಿದರು.

ಪಸಪಲೋಡು ಸರ್ಕಾರಿ ಶಾಲೆಯಲ್ಲಿ ನುರಿತ ಶಿಕ್ಷಕರಿದ್ದು ಗುಣಮಟ್ಟದ ಶಿಕ್ಷಣವಿದೆ. ಶಾಲೆಯಲ್ಲಿ 6 ಮತ್ತು 7ನೇ ತರಗತಿಯಲ್ಲಿ 19 ವಿದ್ಯಾರ್ಥಿಗಳಿದ್ದು 8ನೇ ತರಗತಿಯನ್ನು ಇದೇ ಶಾಲೆಯಲ್ಲಿ ಪ್ರಾರಂಭ ಮಾಡಬೇಕು. ಆಂಗ್ಲ ಮಾಧ್ಯಮದ ಸರ್ಕಾರಿ ಕಿತ್ತೂರು ರಾಣಿ ಚನ್ನಮ್ಮ ವಸತಿಗೆ ಆಯ್ಕೆಯಾಗಿದ್ದೇವೆ. ಆ ಶಾಲೆಗೆ ಹೋಗದೆ ಇದೇ ಶಾಲೆಯಲ್ಲಿ ಕಲಿಯುತ್ತಿದ್ದೇವೆ ಎಂದು ಶಾಲೆಯ ವಿದ್ಯಾರ್ಥಿನಿ ಗರುಡಚಾರ್ಲಹಳ್ಳಿ ಬಿಂದು, ಕೊಂಡರೆಡ್ಡಿಹಳ್ಳಿ ಧನಲಕ್ಷ್ಮಿ ತಿಳಿಸಿದರು.

6ನೇ ತರಗತಿಯಲ್ಲಿ ವಿದ್ಯಾರ್ಥಿಗಳು
6ನೇ ತರಗತಿಯಲ್ಲಿ ವಿದ್ಯಾರ್ಥಿಗಳು
ಸಂಜೆ ಎಲ್ಲಾ ವಿದ್ಯಾರ್ಥಿಗಳು ಒಂದು ಕಡೆ ಸೇರಿ ಸಮಾಲೋಚನೆಯಲ್ಲಿ ತೊಡಗಿರುವುದು.
ಸಂಜೆ ಎಲ್ಲಾ ವಿದ್ಯಾರ್ಥಿಗಳು ಒಂದು ಕಡೆ ಸೇರಿ ಸಮಾಲೋಚನೆಯಲ್ಲಿ ತೊಡಗಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT