ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ | ದೀಪಾವಳಿ: ವ್ಯಾಪಾರ ವಹಿವಾಟು ಜೋರು

Published 12 ನವೆಂಬರ್ 2023, 11:43 IST
Last Updated 12 ನವೆಂಬರ್ 2023, 11:43 IST
ಅಕ್ಷರ ಗಾತ್ರ

ಬಾಗೇಪಲ್ಲಿ: ದೀಪಾವಳಿ ಹಬ್ಬದ ಪ್ರಯುಕ್ತ ಪಟ್ಟಣದ ಮುಖ್ಯರಸ್ತೆಯಲ್ಲಿ ಭಾನುವಾರ ಬೆಳಿಗ್ಗಿನಿಂದ ಸಂಜೆವರೆಗೂ ಜನರು ಅಗತ್ಯವಾದ ವಸ್ತುಗಳನ್ನು ಖರೀದಿ ಮಾಡಿದರು.

ಬಸ್ ನಿಲ್ದಾಣದಿಂದ ಡಾ.ಎಚ್.ಎನ್.ವೃತ್ತದ ಮುಖ್ಯರಸ್ತೆಯಲ್ಲಿ ದೀಪಾವಳಿ ಹಬ್ಬಕ್ಕೆ ದಿನಸಿ ಹಾಗೂ ಇತರೆ ವಸ್ತುಗಳನ್ನು ಖರೀದಿ ಮಾಡಲು ಜನರ ದಟ್ಟಣೆ ಹೆಚ್ಚಾಗಿತ್ತು. ಡಾ.ಎಚ್.ಎನ್.ವೃತ್ತ, ನೇತಾಜಿ ವೃತ್ತ ಸೇರಿದಂತೆ ಸಂತೆಮೈದಾನ, ಕುಂಬಾರಪೇಟೆ, ಭಜನಾ ಮಂದಿರ ರಸ್ತೆಗಳಲ್ಲಿ ದಿನಸಿ, ತರಕಾರಿ, ಹಣ್ಣು, ಹೂವು, ಎಲೆ, ಅಡಿಕೆ ವ್ಯಾಪಾರ ಜೋರಾಗಿ ನಡೆಯಿತು.

ದೀಪಾವಳಿ ಹಬ್ಬಕ್ಕೆ ಮುಖ್ಯವಾಗಿ ನೋಮುದಾರ, ಗೆಜ್ಜೆಗಳು, ಕಾಯಿ, ಮೊರಗಳು, ಎಲೆ, ಅಡಿಕೆ, ಹೂವು, ಹಣ್ಣುಗಳು ಮುಖ್ಯವಾದವು. ಕಜ್ಜಾಯ ಮಾಡಲು ಬೆಲ್ಲ, ಹಿಟ್ಟು, ಎಣ್ಣೆ ಸೇರಿದಂತೆ ದಿನಸಿ ವಸ್ತುಗಳ ಏರಿಕೆ ಆಗಿದೆ. ಬೆಲ್ಲ ₹60 ರಿಂದ ₹80, ಅಚ್ಚುಬೆಲ್ಲ ₹100, ಕಡಲೆಕಾಯಿ ಎಣ್ಣೆ ₹120 ಇದೆ. ವಿವಿಧ ಬೀದಿಗಳಲ್ಲಿ ಬಣ್ಣ ಬಣ್ಣದ ನೋಮುದಾರ, ಗೆಜ್ಜೆಗಳು, ಕಾಯಿ, ಅರಿಶಿಣ ಕೊಂಬುಗಳನ್ನು ಮಹಿಳೆಯರು, ಹೆಣ್ಣುಮಕ್ಕಳು ಹಾಗೂ ಜನರು ಖರೀದಿ ಮಾಡಿದರು. ನೋಮುದಾರಗಳು ₹5 ರಿಂದ ₹10ಕ್ಕೆ ಮಾರಾಟ ಇತ್ತು. ತಳ್ಳುವ ಬಂಡಿಗಳಲ್ಲಿ ಅಲಂಕೃತ ದೀಪ ಮಾರಾಟಗಾರರು, ಚಿಕ್ಕದಾದ ದೀಪಗಳು ಡಜನ್‌ಗೆ ₹50 ರಿಂದ ₹70ಕ್ಕೆ ಮಾರಾಟ ಮಾಡಿದರು.

ಉಳಿದಂತೆ ಹಬ್ಬಕ್ಕೆ ಹೂವುಗಳ ದರ ಹೆಚ್ಚಾಗಿದೆ. ಬಟನ್ ರೋಜಾ ₹200, ಚೆಂಡು ಹೂವುಗಳು ₹50, ಮಲ್ಲಿಗೆ ₹40 ರಿಂದ ₹60, ಕನಕಾಂಬರ ₹60, ಬಾಳೆಹಣ್ಣು ₹50ಕ್ಕೆ ಮಾರಾಟವಾಯಿತು.

ಪಟ್ಟಣದ ಮಿನಿ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಹಸಿರು ಪಟಾಕಿಗಳ ಮಾರಾಟಕ್ಕೆ ತಾಲ್ಲೂಕು ಆಡಳಿತ, ಪೊಲೀಸ್, ಪುರಸಭೆ, ಅಗ್ನಿಶಾಮಕ ದಳದ ಅಧಿಕಾರಿಗಳು ಅನುಮತಿ ನೀಡಿದ್ದರು. ಪಟಾಕಿಗಳ ಅಂಗಡಿಗಳು ಬೆರಳೆಣಿಕೆಯಷ್ಟು ಇದೆ. ಜನರು ಅಗತ್ಯಕ್ಕೆ ಬೇಕಾದ ಪಟಾಕಿ ಖರೀದಿ ಮಾಡಿದರು.

ದೀಪಾವಳಿ ಹಬ್ಬಕ್ಕೆ ಎಲ್ಲಾ ವಸ್ತುಗಳ ದರ ಏರಿಕೆ ಆಗಿದೆ. ಕಡಿಮೆ ವ್ಯಾಪಾರ ವಹಿವಾಟು ಆಗಿದೆ. ವಸ್ತುಗಳ ಮೇಲೆ ಹಾಕಿದ ಬಂಡವಾಳ, ಲಾಭ ಇಲ್ಲ ಎಂದು ದೀಪದ ವ್ಯಾಪಾರಿ ನಂಜುಂಡ ತಿಳಿಸಿದರು.

ದೀಪಾವಳಿ ಹಬ್ಬದ ಪ್ರಯುಕ್ತ ದಿನಸಿ, ತರಕಾರಿಗಳು, ಹೂವು, ಹಣ್ಣುಗಳ ಅಗತ್ಯ ವಸ್ತುಗಳ ದರಗಳು ಹೆಚ್ಚಾಗಿವೆ. ಆದರೂ ಸಂಪ್ರದಾಯವಾಗಿ ಹಬ್ಬ ಆಚರಿಸಲು ಅಗತ್ಯ ಪೂರ್ವಸಿದ್ಧತೆ ಮಾಡಲಾಗಿದೆ. ಕೇದಾರೇಶ್ವರ ಸ್ವಾಮಿಯ ವ್ರತದ ನಂತರ ನೋಮುದಾರಗಳಿಗೆ ಪೂಜಿಸುತ್ತೇವೆ ಎಂದು ಮಹಿಳೆ ಶಾಂತಮ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT