ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಕಾಮಗಾರಿ ಕ್ರೆಡಿಟ್; ಜಾಲತಾಣದಲ್ಲಿ ಕಾವು

ಬಿಜೆಪಿ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಚರ್ಚೆ; ಶಾಸಕರಿಂದ 22ರಂದು ಭೂಮಿಪೂಜೆ
ಡಿ.ಎಂ.ಕುರ್ಕೆ ಪ್ರಶಾಂತ್
Published 20 ಫೆಬ್ರುವರಿ 2024, 4:29 IST
Last Updated 20 ಫೆಬ್ರುವರಿ 2024, 4:29 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಪ್ರದೀಪ್ ಈಶ್ವರ್ ನೇತೃತ್ವದಲ್ಲಿ ಫೆ.22ರಂದು ₹ 45 ಕೋಟಿ ವೆಚ್ಚದ ಅಭಿವೃದ್ಧಿಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ಹರಿದಾಡುತ್ತಿದೆ.

‘ಪ್ರದೀಪ್ ಈಶ್ವರ್ ನಿಮ್ಮೊಂದಿಗೆ’ ಫೇಸ್‌ಬುಕ್ ಖಾತೆಯಲ್ಲಿ ಸಹ ಭೂಮಿ ಪೂಜೆ ನಡೆಯುವ ಕಾಮಗಾರಿಗಳು, ವೆಚ್ಚ ಮತ್ತು ಎಲ್ಲಿಂದ ಎಲ್ಲಿಗೆ ಎನ್ನುವ ಪ್ರಕಟಣೆ  ಹೊರಡಿಸಲಾಗಿದೆ.

ಇದು ಈಗ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಕಾಮಗಾರಿಗಳಿಗೆ ಸಂಬಂಧಿಸಿದ ಕ್ರೆಡಿಟ್ ವಾರ್ ಜೋರಾಗಿದೆ. ಒಂದು ಕಡೆ ಶಾಸಕರು ಇದು ನಮ್ಮ ಆಡಳಿತದ ಅವಧಿಯ ಕೆಲಸಗಳು, ಅತಿ ಹೆಚ್ಚು ಅನುದಾನ ತಂದ ಶಾಸಕ ನಾನು ಎಂದು ಹೇಳುತ್ತಿದ್ದರೆ ಮತ್ತೊಂದು ಕಡೆ ಬಿಜೆಪಿ ಕಾರ್ಯಕರ್ತರು, ‘ಡಾ.ಕೆ.ಸುಧಾಕರ್ ಆಡಳಿತದಲ್ಲಿ ಆದ ಕೆಲಸಗಳು’ ಎನ್ನುತ್ತಿದ್ದಾರೆ.

ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರ ಅವಧಿಯಲ್ಲಿ ಟೆಂಡರ್ ಆಗಿರುವ ಕೆಲಸಗಳಿಗೆ 22ರಂದು ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಈಗಿನ ಶಾಸಕರಿಗೆ ಯಾವುದೇ ಹೊಸ ಅನುದಾನವನ್ನು ತರಲು ಆಗುವುದಿಲ್ಲ. ಮಾಜಿ ಶಾಸಕರ ಅನುದಾನವನ್ನು ತಂದು ನಮ್ಮದು ಎಂದು ಹೇಳಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಪೋಸ್ಟರ್‌ಗಳನ್ನು ಹರಿಬಿಟ್ಟಿದ್ದಾರೆ.

ಇದು ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಜಟಾಪಟಿಗೆ ವೇದಿಕೆಯಾಗುವ ಸಾಧ್ಯತೆ ಇದೆ. 

ಶಾಸಕ ಪ್ರದೀಪ್ ಈಶ್ವರ್ ಫೆ.22ರಂದು ಭೂಮಿ ಪೂಜೆ ಸಲ್ಲಿಸಲಿರುವ ಕಾಮಗಾರಿಗಳ ಪಟ್ಟಿ ಮತ್ತು ಈ ಹಿಂದೆ ಡಾ.ಕೆ.ಸುಧಾಕರ್ ಶಾಸಕರಾಗಿದ್ದ ವೇಳೆ ಅನುಮೋದನೆಗೊಂಡಿದ್ದ ಮತ್ತು ಟೆಂಡರ್ ಹಂತದಲ್ಲಿದ್ದ ಕಾಮಗಾರಿಗಳನ್ನು ಒಂದಕ್ಕೊಂದು ಜೋಡಿಸಿ ‘ಇದು ಬಿಜೆಪಿ ಅವಧಿಯಲ್ಲಿ ಆಗಿದ್ದ ಕೆಲಸ’ ಎಂದು ಚರ್ಚಿಸುತ್ತಿದ್ದಾರೆ. ಡಾ.ಕೆ.ಸುಧಾಕರ್, ಕಾಮಗಾರಿಗಳಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಗೆ ಕಳುಹಿಸಿದ್ದ ಟಿಪ್ಪಣಿಗಳನ್ನೂ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹರಿಬಿಡಲಾಗಿದೆ.

2022ರ ಅಕ್ಟೋಬರ್‌ನಲ್ಲಿ ಕೆಲವು ಕಾಮಗಾರಿಗಳನ್ನು ಕೈಗೊಳ್ಳಲು ಲೋಕೋಪಯೋಗಿ ಇಲಾಖೆ ಮುಂದಾಗಿತ್ತು. ಈ ಕಾಮಗಾರಿಗಳು ಟೆಂಡರ್ ಹಂತದಲ್ಲಿ ಇದ್ದವು. ನಂತರದ ದಿನಗಳಲ್ಲಿ ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಾಯಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಬಿಜೆಪಿ ಆಡಳಿತದಲ್ಲಿದ್ದ ಟೆಂಡರ್‌ ಪ್ರಕ್ರಿಯೆಗಳನ್ನು ರದ್ದುಗೊಳಿಸಿತು. 

‘ಸರ್ಕಾರ ಬದಲಾವಣೆಯಾದ ಕಾರಣ ಟೆಂಡರ್‌ಗಳು ರದ್ದಾದವು. ಮತ್ತೆ ಹೊಸ ಸರ್ಕಾರ ಟೆಂಡರ್ ಕರೆಯಿತು. ಈ ಹಿಂದಿನ ಶಾಸಕರು ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದರೊ ಅವುಗಳನ್ನೇ ಮುಂದುವರಿಸುವಂತೆ ಈಗಿನ ಶಾಸಕರು ಹೇಳಿದ್ದಾರೆ. ಆದ್ದರಿಂದ ಅದೇ ಕಾಮಗಾರಿಗಳನ್ನು ನಡೆಸಲಾಗುತ್ತದೆ’ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT