ಶನಿವಾರ, ಆಗಸ್ಟ್ 13, 2022
24 °C
ನಗರದ ವಿವಿಧ ವಾರ್ಡ್‌ಗಳಲ್ಲಿನ ಅಭಿವೃದ್ಧಿ ‌ಕಾರ್ಯ; ಜೀವ ಕಳೆದುಕೊಳ್ಳುತ್ತಿವೆ ಗಿಡಗಳು

ನಗರೋತ್ಥಾನ ಕಾಮಗಾರಿಗೆ ಗಿಡಗಳು ಬಲಿ

ಎ.ಎಸ್. ಜಗನ್ನಾಥ್ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ನಗರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿ ‌ಕಾರ್ಯಗಳು ಆರಂಭವಾಗಿವೆ. ಈ ಕಾಮಗಾರಿ ಈ ಹಿಂದೆ ಅರಣ್ಯ ಇಲಾಖೆ ನೆಟ್ಟು ಪೋಷಿಸಿದ್ದ ಗಿಡಗಳಿಗೆ ಕಂಟಕವಾಗಿದೆ.

ನಗರದ ವಿವಿಧ ವಾರ್ಡ್‌ಗಳಲ್ಲಿನ ಅಭಿವೃದ್ಧಿ ‌ಕಾರ್ಯಗಳಿಗೆ ನಗರೋತ್ಥಾನ ಯೋಜನೆಯಡಿ ಸುಮಾರು ₹7 ಕೋಟಿ ವೆಚ್ಚದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಶಾಸಕರು ಭೂಮಿ‌ಪೂಜೆ ಮಾಡಿ ಚಾಲನೆ ನೀಡಿದ್ದರು.

ನಗರೋತ್ಥಾನದ ಕಾಮಗಾರಿಗಳ ಜವಾಬ್ದಾರಿಯನ್ನು ನೆರೆಯ ಆಂಧ್ರದ ಸಾಯಿ ಕನ್ಟ್ರಕ್ಷನ್ಸ್‌ ವಹಿಸಿಕೊಂಡಿದೆ. ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆ ಒಂದೆರಡು ವರ್ಷಗಳ ಹಿಂದೆ ನೆಟ್ಟಿದ್ದ ಗಿಡಗಳನ್ನು ಏಕಾಏಕಿ ಜೆಸಿಬಿ ಮೂಲಕ ಕಿತ್ತು ಪಕ್ಕದಲ್ಲಿ ನೆಟ್ಟು ಚರಂಡಿ‌ ಕಾಮಗಾರಿ ಮಾಡಲಾಗುತ್ತಿದೆ. ಇದರಿಂದ ರಸ್ತೆ‌ಬದಿಯಲ್ಲಿ‌ ಬೆಳೆದಿದ್ದ ಗಿಡಗಳು ಜೀವ ಕಳೆದುಕೊಳ್ಳುತ್ತಿವೆ.

ಅಲ್ಲದೆ ವಾರ್ಡ್‌ ನಿವಾಸಿಗಳು ಮತ್ತು ಪರಿಸರ ಪ್ರೇಮಿಗಳು ನೆಟ್ಟು ಪೋಷಿಸುತ್ತಿದ್ದ ಗಿಡಗಳನ್ನು ಕಿತ್ತು ಮತ್ತೊಂದೆಡೆ ನೆಡಲಾಗಿದೆ. ಗುತ್ತಿಗೆದಾರರು ಕಾಮಗಾರಿ ಆರಂಭ ಕ್ಕೂ‌ ಮುನ್ನ ಯಾವುದೇ ಮುನ್ಸೂಚನೆ ನೀಡದೆ ಗಿಡ ಕಿತ್ತಿರುವುದು  ಸ್ಥಳೀಯರಲ್ಲಿ ಅಸಮಾಧಾನ ಮೂಡಿದೆ. ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಗಮನಹರಿಸಬೇಕು ಎಂದು ನಾಗರಿಕರು ಒತ್ತಾಯಿಸುತ್ತಾರೆ.

ಈ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನಿಸಿದರೆ, ‘ನಾವು ಚರಂಡಿ ಕಾಮಗಾರಿ ಮಾಡಲು‌ ಬಂದಿದ್ದೇವೆ. ಅಧಿಕಾರಿಗಳು ನೀಡಿದ ಕ್ರಿಯಾ ಯೋಜನೆಯಂತೆ ರಸ್ತೆಯ ಎರಡೂ ಬದಿಯಲ್ಲಿನ ಗಿಡಗಳನ್ನು ತೆರವುಗೊಳಿಸಿ ಚರಂಡಿ ಕಾಮಗಾರಿ ಮಾಡಿ ನಮ್ಮ ಜವಾಬ್ದಾರಿ ಮುಗಿಸುತ್ತೇವೆ’ ಎನ್ನುವರು.

ಗುಣಮಟ್ಟ ಕಾಪಾಡಿ: ವಿವಿಧ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಚರಂಡಿ, ಸಿಮೆಂಟ್ ರಸ್ತೆ ಕಾಮಗಾರಿಗಳು ಸಿದ್ಧ ವಸ್ತುಗಳಿಂದ ನಿರ್ಮಾಣವಾಗುತ್ತಿವೆ. ಗುಣಮಟ್ಟ ಕಾಪಾಡುವುದು ಅತ್ಯವಶ್ಯಕ. ಆದ್ದರಿಂದ ಅಧಿಕಾರಿಗಳು ಪ್ರತಿ ಕಾಮಗಾರಿಗಳ ಬಗ್ಗೆ ಪರಿಶೀಲಿಸಬೇಕು ಎಂಬುದು ನಾಗರಿಕರ ಒತ್ತಾಸೆಯಾಗಿದೆ.

***

ಅವೈಜ್ಞಾನಿಕವಾಗಿ ಗಿಡ ನೆಡಲಾಗಿದೆ

‘ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ, ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಅವಶ್ಯಕವಾಗಿವೆ. ಈ ಹಿಂದೆ ರಸ್ತೆ ಬದಿಯಲ್ಲಿ ಅವೈಜ್ಞಾನಿಕವಾಗಿ ನೆಟ್ಟಿರುವ ಗಿಡಗಳು ಕಾಮಗಾರಿಗೆ ತೊಂದರೆಯಾಗುತ್ತಿವೆ. ಆದ್ದರಿಂದ ಅವುಗಳನ್ನು ತೆರವುಗೊಳಿಸಿ ಬೇರೆಡೆ ನೆಡುವ ವ್ಯವಸ್ಥೆ ಮಾಡುತ್ತೇವೆ.

ಜಿ.ಎನ್.ಚಲಪತಿ, ನಗರಸಭೆ ಆಯುಕ್ತ 

***

ಗಿಡಗಳನ್ನು ತೆರವುಗೊಳಿ ಸುವಂತಿಲ್ಲ. ಹಾಗೇನಾದರೂ ಮಾಡಬೇಕಾದರೆ ಇಲಾಖೆಯ ಗಮನಕ್ಕೆ ತರಬೇಕು. ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ

ಮಂಜುನಾಥ್, ವಲಯ ಅರಣ್ಯ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು