ಶನಿವಾರ, ಜೂನ್ 19, 2021
28 °C
ದಿನಕ್ಕೊಂದು ವಾರ್ಡ್‌ಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸುವ ಜತೆಗೆ ಸಾರ್ವಜನಿಕರ ಅಹವಾಲು ಆಲಿಸಲು ನಿರ್ಧಾರ

ಚಿಕ್ಕಬಳ್ಳಾಪುರ: ನಗರ ಪ್ರದಕ್ಷಿಣೆ ಆರಂಭಿಸಿದ ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಗರದ ಸ್ವಚ್ಛತೆ ಅರಿಯುವ ನಿಟ್ಟಿನಲ್ಲಿ ನಗರ ಪ್ರದಕ್ಷಿಣೆ ಆರಂಭಿಸಿದ ಜಿಲ್ಲಾಧಿಕಾರಿ ಆರ್.ಲತಾ ಅವರು ಬುಧವಾರ 19ನೇ ವಾರ್ಡ್ ಹಾಗೂ ಬಜಾರ್ ರಸ್ತೆಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಾರ್ಡ್ ನಂಬರ್ 19ರ ಎಲ್ಲಾ ರಸ್ತೆಗಳು, ಚರಂಡಿಗಳು, ಮನೆ-ಮನೆ ಕಸ ಸಂಗ್ರಹಣೆ, ಹಸಿ ಮತ್ತು ಒಣ ಕಸ ವಿಂಗಡನೆ, ಹೋಟೆಲ್‌ಗಳ ಶುಚಿತ್ವ, ಎಲ್ಲಾ ಅಂಗಡಿಗಳ ಮುಂದೆ ಕೊರೊನಾ ಅರಿವು ಮೂಡಿಸುವ ಬ್ಯಾನರ್ ಅಳವಡಿಸಿರುವ ಬಗ್ಗೆ ಪರಿಶೀಲನೆ ನಡೆಸಲಾಯಿತು’ ಎಂದು ಹೇಳಿದರು.

‘ಪ್ರತಿಯೊಂದು ವಾರ್ಡ್‍ನಲ್ಲೂ ಕೋವಿಡ್-19 ತಡೆಯಲು ಕಾರ್ಯಪಡೆ ನೇಮಿಸಿದಂತೆ, ಸ್ವಚ್ಚತೆಯನ್ನು ಕಾಪಾಡಲು ಕ್ಯಾಪ್ಟನ್‍ಗಳನ್ನು ನೇಮಿಸುವ ಮೂಲಕ ನಗರದಲ್ಲಿ ಕಸ ಸುರಿಯುವುದನ್ನು ಸಂಪೂರ್ಣವಾಗಿ ತಡೆಯಲು ಉದ್ದೇಶಿಸಲಾಗಿದೆ‘ ಎಂದು ತಿಳಿಸಿದರು.

‘ನಗರದ ಸಾರ್ವಜನಿಕರಿಗೆ ಕಸ ವಿಲೇವಾರಿಯ ಬಗ್ಗೆ ಅರಿವು ಮೂಡಿಸಿ, ಮನೆಗಳಿಂದಲೇ ಒಣ ಮತ್ತು ಹಸಿ ಕಸವನ್ನು ವಿಂಗಡಿಸಿ ಪಡೆದು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಚರಂಡಿ ಮತ್ತು ರಸ್ತೆಗಳು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆಯು ಕಡಿಮೆ ಮಾಡಲು ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಪ್ರತಿದಿನ ವಾರ್ಡ್‍ಗಳ ಭೇಟಿ ಮಾಡಿ ಪರಿಶೀಲನೆ ಮಾಡಲಾಗುತ್ತದೆ. ಇದರಿಂದ ನಗರವನ್ನು ಸ್ವಚ್ಚವಾಗಿಡಲು ಹಾಗೂ ಕೊರೊನಾದಂತಹ ಮಹಾಮಾರಿ ಹರಡುವುದು ತಡೆಯಲು ಸಹಕಾರಿಯಾಗುತ್ತದೆ. ಕೊರೊನಾ ಸೋಂಕಿತರ ಮನೆಗಳಿಗೆ ಭೇಟಿ ನೀಡಿ, ಅವರ ಕುಂದುಕೊರತೆಗಳನ್ನು ಆಲಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದರು. 

‘ಜಿಲ್ಲೆಯಾದ್ಯಂತ ಗೌರಿ ಮತ್ತು ಗಣೇಶ ಚತುರ್ಥಿಯ ಆಚರಣೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ. ಜಿಲ್ಲೆಯಲ್ಲಿ ಪಿಒಪಿಯಿಂದ ಮಾಡಿರುವ ವಿಗ್ರಹಗಳನ್ನು ನಿಷೇಧಿಸಲಾಗಿದೆ. ಮಣ್ಣು ಅಥವಾ ಅರಿಶಿಣದಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಪೂಜಿಸುವ ಮೂಲಕ ಸಾರ್ವಜನಿಕರ ಪರಿಸರ ಮಾಲಿನ್ಯ ತಡೆಗಟ್ಟಲು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು’ ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಲೋಹಿತ್, ವಾರ್ಡ್ ಸದಸ್ಯರು, ಕಿರಿಯ ಅಭಿಯಂತರರು, ಆರೋಗ್ಯ ನಿರೀಕ್ಷಕರು, ನೋಡಲ್ ಅಧಿಕಾರಿಗಳು, ಸ್ವಚ್ಛತಾ ಕ್ಯಾಪ್ಟನ್‌ಗಳು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು