ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೌರಿಬಿದನೂರು | ಬಳಕೆಯಾಗದ ಅಂಬೇಡ್ಕರ್ ಭವನ

Published 31 ಆಗಸ್ಟ್ 2023, 5:24 IST
Last Updated 31 ಆಗಸ್ಟ್ 2023, 5:24 IST
ಅಕ್ಷರ ಗಾತ್ರ

ಎ.ಎಸ್.ಜಗನ್ನಾಥ್

ಗೌರಿಬಿದನೂರು: ತಾಲ್ಲೂಕಿನ ಹೋಬಳಿ ಕೇಂದ್ರ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಶಕಗಳಿಂದಲೂ ಕೋಟ್ಯಂತರ ಅನುದಾನದಲ್ಲಿ ‌ನಿರ್ಮಾಣವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನಗಳು ಬಳಕೆಯಾಗದೆ ನಿಷ್ಕ್ರಿಯವಾಗಿದೆ.

ತಾಲ್ಲೂಕಿನ ವಿವಿಧೆಡೆಗಳಲ್ಲಿ ಕಳೆದ 2016-17ನೇ ಸಾಲಿನಿಂದ ಸಮಾಜ ಕಲ್ಯಾಣ ಇಲಾಖೆಯ ರಾಜ್ಯ ವಲಯದ ಅನುದಾನದಲ್ಲಿ ನಿರ್ಮಾಣವಾಗಿರುವ ಸುಮಾರು 25ಕ್ಕೂ ಹೆಚ್ಚು ಡಾ.ಬಿ.ಆರ್.ಅಂಬೇಡ್ಕರ್ ಭವನಗಳು ಬಳಕೆಯ ಭಾಗ್ಯ ಕಾಣದೆ ನಿಷ್ಕ್ರಿಯವಾಗಿವೆ.

ಗ್ರಾಮೀಣ ಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿರುವ ಪ್ರದೇಶಗಳಲ್ಲಿ ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಇತರೆ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತೀ ಭವನಕ್ಕೆ ₹12 ಲಕ್ಷ ಅನುದಾನದಲ್ಲಿ ಸರ್ಕಾರದ ಅನುದಾನವನ್ನು ಬಳಸಿ ಅಂಬೇಡ್ಕರ್ ಭವನಗಳನ್ನು ಪಿಆರ್‌ಇಡಿ ಮತ್ತು ನಿರ್ಮಿತಿ ಕೇಂದ್ರಗಳ ಏಜೆನ್ಸಿ ಸಹಯೋಗದೊಂದಿಗೆ ನಿರ್ಮಾಣ ಮಾಡಲಾಗಿದೆ‌.

ಇವುಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಉದ್ಘಾಟನೆ ಮಾಡಿ ಸಮಾಜ ಕಲ್ಯಾಣ ಅಧಿಕಾರಿಗಳು ಸ್ಥಳೀಯ ಗ್ರಾ.ಪಂ ಗೆ ಹಸ್ತಾಂತರ ಮಾಡಿದ್ದಾರೆ. ಆದರೆ ಸ್ಥಳೀಯ ಗ್ರಾ.ಪಂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ನಿರ್ಮಾಣವಾಗಿರುವ ಬಹುತೇಕ ಅಂಬೇಡ್ಕರ್ ಭವನಗಳು ಕಾರ್ಯ ನಿರ್ವಹಿಸದಿರುವುದು ನೋವಿನ ಸಂಗತಿ.

ಪಿಆರ್‌ಇ‌ಡಿ ಇಲಾಖೆಯಿಂದ ತಾಲ್ಲೂಕಿನ ಹುದುಗೂರು, ಹಂಪಸಂದ್ರ, ನಕ್ಕಲಹಳ್ಳಿ, ಕಾಟನಕಲ್ಲು ಗ್ರಾಮಗಳಲ್ಲಿ ತಲಾ ₹10 ಲಕ್ಷ ಅನುದಾನದಲ್ಲಿ ಹಾಗೂ ನಾಮಗೊಂಡ್ಲು, ವೆಂಕಟಾಪುರ, ವಿದುರಾಶ್ವತ್ಥ, ರಾಜಲಪ್ಪ ಗುಡಿಸಲು, ತೊಂಡೇಕುಂಟೆ, ಹೊಸೂರು ಎಡಿ ಕಾಲೋನಿ, ಚೌಳೂರು ಗೇಟ್, ಕುಡುಮಲಕುಂಟೆ, ಬೈಚಾಪುರ, ತೊಂಡೇಬಾವಿ ರೈಲ್ವೆ ನಿಲ್ದಾಣ, ಮುದುಗೆರೆ, ಆನೂಡಿ, ಸೊನಗಾನಹಳ್ಳಿ, ಹಿರೇಬಿದನೂರು, ಗಂಗಸಂದ್ರ ಸೇರಿ ಒಟ್ಟು 20 ಗ್ರಾಮಗಳಲ್ಲಿ ತಲಾ ₹12 ಲಕ್ಷ ಅನುದಾನದಲ್ಲಿ ಅಂಬೇಡ್ಕರ್ ಭವನ ‌ನಿರ್ಮಿಸಲಾಗಿದೆ.

ನಿರ್ಮಿತಿ ಕೇಂದ್ರದ ಏಜೆನ್ಸಿ ಅಡಿಯಲ್ಲಿ 2018-19ನೇ ಸಾಲಿನಲ್ಲಿ ತಲಾ ₹12 ಲಕ್ಷ ಅನುದಾನದಲ್ಲಿ ತಾಲ್ಲೂಕಿನ ಬಿ.ಬೊಮ್ಮಸಂದ್ರ, ಕಡಬೂರು, ಕಾದಲವೇಣಿ, ಕಲ್ಲಿನಾಯಕನಹಳ್ಳಿ ಸೇರಿದಂತೆ ಒಟ್ಟು 4 ಅಂಬೇಡ್ಕರ್ ಭವನಗಳು ಮತ್ತು ಗುಲಗಿಂಜನಹಳ್ಳಿಯಲ್ಲಿ ₹12 ಲಕ್ಷದಲ್ಲಿ ಡಾ.ಬಾಬು ಜಗಜೀವನರಾಮ್ ಭವನಗಳನ್ನು ನಿರ್ಮಾಣ ಮಾಡಲಾಗಿದೆ‌.

ಸಮಾಜ ಕಲ್ಯಾಣ ಇಲಾಖೆ ರಾಜ್ಯ ವಲಯದ ಅನುದಾನದಡಿಯಲ್ಲಿ ನಿರ್ಮಾಣ ಮಾಡಿ ಗ್ರಾ.ಪಂ ಗೆ ಹಸ್ತಾಂತರ ಮಾಡಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನಗಳ ನಿರ್ವಹಣೆಗೆ ಇಲಾಖೆಯಿಂದ ಮತ್ತು ಸ್ಥಳೀಯವಾಗಿ ಪ್ರತ್ಯೇಕ ಅನುದಾನದ ಕೊರತೆಯಿಂದಾಗಿ ಅವುಗಳ ಬಳಕೆ ಸಾಧ್ಯವಾಗುತ್ತಿಲ್ಲ. ಪಂಚಾಯಿತಿ ‌ವ್ಯಾಪ್ತಿಯಲ್ಲಿನ ಕುಡಿಯುವ ನೀರು, ಸ್ವಚ್ಛತೆ, ಬೀದಿದೀಪ ನಿರ್ವಹಣೆಗೆ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಅಂಬೇಡ್ಕರ್ ಭವನಗಳ ನಿರ್ವಹಣೆ ಕಷ್ಟಸಾಧ್ಯ ಎನ್ನುತ್ತಾರೆ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು.

ಅನೈತಿಕ ಚಟುವಟಿಕೆ ತಾಣ

ತಾಲ್ಲೂಕಿನ ವಿವಿಧೆಡೆಗಳಲ್ಲಿ ಸರ್ಕಾರದ ‌ಅನುದಾನದಲ್ಲಿ ನಿರ್ಮಾಣ ಮಾಡಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟನೆ ಆದಾಗಿನಿಂದಲೂ ಬಳಕೆಯಾಗದ ಕಾರಣ‌ ಇವುಗಳು ನಿತ್ಯ ಸ್ಥಳೀಯ ಯುವಕರು ಮದ್ಯ, ಮಾಂಸ ಸೇವನೆಯ ಜತೆಗೆ ಅಕ್ರಮ ಚಟುವಟಿಕೆಗಳ ತಾಣವನ್ನಾಗಿಸಿದ್ದಾರೆ. ಇದರಿಂದಾಗಿ ಜನತೆ ಈ ಭವನದತ್ತ ಸುಳಿಯದಂತಾಗಿದೆ.

ಧೂಳು ಹಿಡಿದ ಗಣಕಯಂತ್ರ

ಅಂಬೇಡ್ಕರ್ ಭವನ ನಿರ್ಮಾಣದ ಅನುದಾನದಲ್ಲಿ ಹೆಚ್ಚುವರಿಯಾಗಿದ್ದ ₹2 ಲಕ್ಷದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಿರ್ಮಿತಿ‌ ಕೇಂದ್ರದ ಸಹಯೋಗದೊಂದಿಗೆ ಅಂಬೇಡ್ಕರ್ ಭವನಕ್ಕೆ ಗಣಕಯಂತ್ರ, ಟೇಬಲ್, ಕುರ್ಚಿ ಇತರ ಪರಿಕರಗಳನ್ನು ಸ್ಥಳೀಯ ಗ್ರಾ.ಪಂ ಅಧಿಕಾರಿಗಳು ಮತ್ತು ಅಧ್ಯಕ್ಷರಿಗೆ ನೀಡಿದ್ದಾರೆ. ಆದರೆ ಪ್ರಸ್ತುತ ಅಂಬೇಡ್ಕರ್ ಭವನಗಳು ಬಳಕೆಯಾಗದ ಕಾರಣ ಗಣಕಯಂತ್ರಗಳು ಗ್ರಾ.ಪಂ ಕಾರ್ಯಾಲಯದಲ್ಲಿ ಧೂಳು ಹಿಡಿಯುತ್ತಿವೆ.

ಹೊಸೂರಿನಲ್ಲಿ ಪಾಳುಬಿದ್ದ ಅಂಬೇಡ್ಕರ್ ಸಮುದಾಯ ಭವನ

ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸುಮಾರು ₹50 ಲಕ್ಷ ಅನುದಾನದಡಿ ನಿರ್ಮಿಸಿರುವ ಬೃಹತ್ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಬಳಕೆ ಭಾಗ್ಯ ಕಾಣದೆ ಪಾಳು ಬಿದ್ದಿದೆ. ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಅವರ ಹುಟ್ಟೂರಿನಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನವು ಮದ್ಯವ್ಯಸನಿಗಳ ತಾಣವಾಗಿರುವುದು ನೋವಿನ ಸಂಗತಿ ಎನ್ನುತ್ತಾರೆ ಎಚ್.ಎನ್ ಅಭಿಮಾನಿಗಳು.

ಯಾರು ಏನಂತಾರೆ?

ನಿಷ್ಕ್ರಿಯವಾಗಿರುವ ಅಂಬೇಡ್ಕರ್ ಭವನಗಳ‌ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡುತ್ತೇವೆ. ಇಲಾಖೆಯ ಅನುದಾನದಡಿ ನಿರ್ಮಾಣ ಮಾಡಿದ ಬಳಿಕ ಅವುಗಳ ಬಳಕೆ ಮತ್ತು ನಿರ್ವಹಣೆಗೆ ಸ್ಥಳೀಯ ಗ್ರಾ.ಪಂ ಗೆ ನಿರ್ದೇಶನ ನೀಡಲಾಗಿದೆ‌. ಗಣಕಯಂತ್ರಗಳ ಬಳಕೆ ಬಗ್ಗೆ ಮಾಹಿತಿ ಪಡೆದು ಸೂಕ್ತ ಕ್ರಮ ವಹಿಸಲಾಗುವುದು – ವಿ.ಮಂಜುನಾಥ್ ಗ್ರೇಡ್ 2 ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ ಗೌರಿಬಿದನೂರು

ಸಭೆ ನಡೆಸಿ ಮುಂದಿನ ಕ್ರಮ ತಾಲ್ಲೂಕಿನಲ್ಲಿ ಒಟ್ಟು ಎಷ್ಟು ಅಂಬೇಡ್ಕರ್ ‌ಭವನಗಳು ನಿರ್ಮಾಣವಾಗಿವೆ ಅದರಲ್ಲಿ ಎಷ್ಟು ಗಣಕಯಂತ್ರಗಳನ್ನು ನೀಡಿದ್ದಾರೆ ಎಂಬುದಾಗಿ ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆಯ‌ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇವೆ. ಅವುಗಳಲ್ಲಿ ಎಷ್ಟನ್ನು ಸ್ಥಳೀಯ ಗ್ರಾ.ಪಂ ಗಳಿಗೆ ಹಸ್ತಾಂತರ ‌ಮಾಡಿದ್ದಾರೆ. ಅವುಗಳ ಬಳಕೆಗೆ ಎದುರಾಗಿರುವ ಸಮಸ್ಯೆಗಳೇನು ಎಂಬುದಾಗಿ ಸಮಾಜ ಕಲ್ಯಾಣ ಅಧಿಕಾರಿ ಮತ್ತು ಪಿಡಿಒಗಳೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ‌ಮುಂದಾಗುತ್ತೇವೆ – ಆರ್.ಹರೀಶ್ ತಾ.ಪಂ ಇಒ ಗೌರಿಬಿದನೂರು

ಕ್ರೀಯಾಯೋಜನೆಗೆ ತಕ್ಕಂತೆ ಭವನ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ನಿರ್ದಿಷ್ಟ ಕ್ರೀಯಾಯೋಜನೆಗೆ ತಕ್ಕಂತೆ ಅಂಬೇಡ್ಕರ್ ಭವನ ನಿರ್ಮಿಸಿದ ಬಳಿಕ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ. ಹೆಚ್ಚುವರಿಯಾಗಿದ್ದ ಅನುದಾನದಲ್ಲಿ ಗಣಕಯಂತ್ರ ಮತ್ತು ಅಗತ್ಯ ಪೀಠೋಪಕರಣವನ್ನು ಇಲಾಖೆ ಮೂಲಕ ಸ್ಥಳೀಯ ಗ್ರಾ.ಪಂ ಗೆ ಹಸ್ತಾಂತರ ಮಾಡಲಾಗಿದೆ. ಉಳಿದಂತೆ ಅವುಗಳ ಬಳಕೆ ಮತ್ತು ನಿರ್ವಹಣೆ ಇಲಾಖೆ ಮತ್ತು ಗ್ರಾ.ಪಂ ಜವಾಬ್ದಾರಿ – ಮುನಿಸ್ವಾಮಿಗೌಡ ಜಿಲ್ಲಾ ನಿರ್ಮಿತಿ‌ ಕೇಂದ್ರದ ಎಂಜಿನಿಯರ್

ಅಂಬೇಡ್ಕರ್ ಭವನ ಬಳಕೆಗೆ ಗ್ರಾ.ಪಂ ಸಮಾಜ ಕಲ್ಯಾಣ ಅಧಿಕಾರಿಗಳು ಆಸಕ್ತಿ ವಹಿಸಬೇಕು. ಸ್ಥಳೀಯ ಚಟುವಟಿಕೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವಂತೆ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು – ನರಸಿಂಹಮೂರ್ತಿ ಸ್ಥಳೀಯ ‌ನಿವಾಸಿ

ಕಾದಲವೇಣಿ ಗ್ರಾಮದಲ್ಲಿ ಬಳಕೆಯಾಗದೆ ನಿಷ್ಕ್ರಿಯವಾಗಿರುವ ಅಂಬೇಡ್ಕರ್ ಭವನ
ಕಾದಲವೇಣಿ ಗ್ರಾಮದಲ್ಲಿ ಬಳಕೆಯಾಗದೆ ನಿಷ್ಕ್ರಿಯವಾಗಿರುವ ಅಂಬೇಡ್ಕರ್ ಭವನ
ಹೊಸೂರಿನ ಅಂಬೇಡ್ಕರ್ ಭವನದ ಆವರಣದಲ್ಲಿ ಮದ್ಯದ ಅವಶೇಷ
ಹೊಸೂರಿನ ಅಂಬೇಡ್ಕರ್ ಭವನದ ಆವರಣದಲ್ಲಿ ಮದ್ಯದ ಅವಶೇಷ
ಕಡಬೂರಿನಲ್ಲಿ ಬಳಕೆಯಾಗದೆ ಉಳಿದಿರುವ ಅಂಬೇಡ್ಕರ್ ಭವನ
ಕಡಬೂರಿನಲ್ಲಿ ಬಳಕೆಯಾಗದೆ ಉಳಿದಿರುವ ಅಂಬೇಡ್ಕರ್ ಭವನ
ಮದ್ಯ ವ್ಯಸನಿಗಳ ತಾಣವಾದ ಹೊಸೂರಿನ ಅಂಬೇಡ್ಕರ್ ಭವನ
ಮದ್ಯ ವ್ಯಸನಿಗಳ ತಾಣವಾದ ಹೊಸೂರಿನ ಅಂಬೇಡ್ಕರ್ ಭವನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT