ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ಜರಿ ಲಾಭಕ್ಕಾಗಿ ಡಾರ್ಪರ್ ಕುರಿ: ಇದರ ಬೆಲೆ ₹ 3 ಲಕ್ಷ!

ಹೈನುಗಾರಿಕೆಯೊಂದಿಗೆ ರೇಷ್ಮೆ ಕೃಷಿ
Last Updated 17 ಜುಲೈ 2019, 15:07 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ರುಚಿಕರ ಮಾಂಸ, ವಿರಳ ಉಣ್ಣೆ ಮತ್ತು ಶುಷ್ಕ ಪ್ರದೇಶಕ್ಕೆ ಹೊಂದಿಕೊಂಡು ಶೀಘ್ರವಾಗಿ ಬೆಳೆಯವ ಡಾರ್ಪರ್ ಕುರಿ ತಳಿಯನ್ನು ನಮ್ಮಲ್ಲೂ ಸುಲಭವಾಗಿ ಸಾಕಬಹುದು. ಗಿಡ್ಡ ಕಾಲು, ಉದ್ದನೆಯ ಶರೀರ, ಬಿಳಿಯ ಬಣ್ಣದ ದೇಹ, ಕೊಂಬಿಲ್ಲದ ಈ ಕುರಿಗಳು ನಮ್ಮ ವಾತಾವರಣಕ್ಕೂ ಹೊಂದಿಕೊಂಡು ಬೆಳೆಯುತ್ತವೆ. ಇದರಿಂದ ನಾವೂ ಲಾಭ ಮಾಡಿಕೊಳ್ಳಬಹುದು ಎಂಬುದನ್ನು ಶಿಡ್ಲಘಟ್ಟ ತಾಲ್ಲೂಕಿನ ಲಕ್ಕಹಳ್ಳಿಯ ಎಂ.ಕಾಂತರಾಜು ತೋರಿಸಿಕೊಟ್ಟಿದ್ದಾರೆ.

ಸದ್ಯ ಕೇವಲ ಡಾರ್ಪರ್ ಕುರಿ ತಳಿ ವರ್ಧನೆಗಷ್ಟೇ ಗಮನ ಹರಿಸಿರುವ ರೈತ ಎಂ.ಕಾಂತರಾಜು ಅವರ ಬಳಿ 25 ಡಾರ್ಪರ್ ಕುರಿಗಳಿವೆ. ಅದರಲ್ಲಿ 10 ಗಂಡು ಮತ್ತು 15 ಹೆಣ್ಣು ಕುರಿಗಳಿವೆ. ವರ್ಷಕ್ಕೊಮ್ಮೆ ಟಗರನ್ನು ಬದಲಿಸುತ್ತಾ ಕಳೆದ ಮೂರು ವರ್ಷಗಳಿಂದ ಹಂತಹಂತವಾಗಿ ಕುರಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ. 50 ಕುರಿಗಳನ್ನು ಹೊಂದುವ ಗುರಿ ಕಾಂತರಾಜು ಅವರದ್ದು.

ಕಳೆದ ಮೂರು ವರ್ಷಗಳಿಂದ ಡಾರ್ಪರ್ ಕುರಿ ತಳಿ ಬೆಳೆಸುತ್ತಿರುವ ಅವರು ಎರಡೂವರೆ ತಿಂಗಳಿನ ಹಿಂದೆ ಕನಕಪುರ ತಾಲ್ಲೂಕಿನ ಸಿದ್ದಾರ್ಥ ಫಾರಂ ನಿಂದ 43 ಕೆ.ಜಿಯ ಬಿಳಿ ಡಾರ್ಪರ್ ತಳಿಯ ಆರು ತಿಂಗಳ ಮರಿಯನ್ನು ₹ 1.4 ಲಕ್ಷ ಕೊಟ್ಟು ತಂದಿದ್ದಾರೆ. ಕೇವಲ ಎರಡೂವರೆ ತಿಂಗಳ ಅವಧಿಯಲ್ಲಿ ಅದರ ತೂಕ 25 ಕೆ.ಜಿಯಷ್ಟು ಹೆಚ್ಚಳವಾಗಿದೆ.

‘ಶುಷ್ಕ ವಾತಾವರಣ, ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಸೇರಿದಂತೆ, ಬರ– ಕ್ಷಾಮಕ್ಕೂ ಹೊಂದಿಕೊಳ್ಳುವ ಸಾಮರ್ಥ್ಯ ಈ ಕುರಿಗಳಿಗಿದೆ. ಅಡ್ಡಾಡಿ ಮೇಯಿಸುವುದರ ಜೊತೆಗೆ ಕೊಟ್ಟಿಗೆ ಪದ್ಧತಿಗೂ ಇವು ಹೊಂದಿಕೊಳ್ಳುತ್ತದೆ. ಈ ತಳಿ ಕುರಿಯ ಚರ್ಮಕ್ಕೂ ಭಾರಿ ಬೇಡಿಕೆ ಇದೆ. ಕುರಿ ಸಾಕಾಣಿಕೆಯಿಂದ ಸಿಗುವ ಒಟ್ಟು ಆದಾಯದ ಇಪ್ಪತ್ತರಷ್ಟು ಆದಾಯ ಕೇಪ್ ಗ್ಲೋವರ್ಸ್ ಎಂದು ಕರೆಯಲ್ಪಡುವ ಇದರ ಚರ್ಮದಿಂದಲೇ ಸಿಗುತ್ತದೆ. ಇದು ಮಾಂಸ ಉತ್ಪಾದನೆಗೆ ಹೇಳಿ ಮಾಡಿಸಿದ ತಳಿ’ ಎನ್ನುತ್ತಾರೆ ರೈತ ಕಾಂತರಾಜು.

‘ಈ ತಳಿಯ ಒಂದು ದೊಡ್ಡ ಕುರಿಗೆ ಅಂದಾಜು ಬೆಲೆ ₹ 3 ಲಕ್ಷ! ಆದರೆ ಈ ಕುರಿ ಸಾಕಾಣಿಕೆ ಮಾಡಬಯಸುವವರು ಟಗರು ಮರಿಯನ್ನು ಮಾತ್ರ ತಂದು ತಮ್ಮ ಸ್ಥಳಿಯ ಕುರಿಗಳಿಗೆ ಕ್ರಾಸ್ ಮಾಡಿಸಿ ಅಭಿವೃದ್ಧಿಪಡಿಸುವುದು ಅತ್ಯಂತ ಲಾಭದಾಯಕ. ನಮ್ಮ ಸುತ್ತಮುತ್ತ ಸಿಗುವ ಸ್ಥಳೀಯ ತಳಿಯ ಕುರಿಗಳನ್ನೇ ತಂದು ಕ್ರಾಸ್ ಮಾಡಿಸಬೇಕು. ಮೂರುವರೆ ನಾಲ್ಕು ತಿಂಗಳ ಒಂದು ಟಗರು ಮರಿ ಸುಮಾರು 40 ಕೆ.ಜಿ ತೂಗುತ್ತವೆ’ ಎಂದು ಅವರು ತಮ್ಮ ಅನುಭವವನ್ನು ಬಿಚ್ಚಿಟ್ಟರು.

‘ಡಾರ್ಪರ್ ತಳಿಯ ಟಗರು ತಂದು ನಮ್ಮ ಲೋಕಲ್ ಕುರಿಗೆ ಕ್ರಾಸ್ ಮಾಡಿಸಿರುತ್ತೇವೆ. ಆದ್ದರಿಂದ ನಮಗೆ ಸಾಕಣೆಯಲ್ಲಿ ಅಧಿಕ ವೆಚ್ಚ ಆಗಿರುವುದಿಲ್ಲ, ಆದರೆ ಡಾರ್ಪರ್ ಗುಣ ಹೊತ್ತು ಬರುವ ಮರಿ ಅತಿ ಕಡಿಮೆ ಸಮಯದಲ್ಲಿ ಅಧಿಕ ತೂಕದೊಂದಿಗೆ ಬೆಳೆದು ನಮಗೆ ಆದಾಯ ತಂದುಕೊಡಲಿದೆ. ಮೊದಲು ರಾಂಬೊಲೆಟ್ ತಳಿಯ ಕುರಿಗಳನ್ನು ಸಾಕುತ್ತಿದ್ದೆ. ಅವಕ್ಕೆ ರೋಗಗಳು ಹೆಚ್ಚು. ಡಾರ್ಪರ್ ತಳಿಗೆ ಕಾಯಿಲೆಗಳು ಕಡಿಮೆ, ಖರ್ಚು ಕಡಿಮೆ. ಕೊಬ್ಬಿನಾಂಶ ಕಡಿಮೆಯಿರುವ ಇದರ ಮಾಂಸಕ್ಕೆ ಬೇಡಿಕೆ ಹೆಚ್ಚು ಎನ್ನುತ್ತಾರೆ ಕಾಂತರಾಜು.

ರೈತ ಎಂ.ಕಾಂತರಾಜು ರೇಷ್ಮೆ ಕೃಷಿಕರೂ ಹೌದು. ಸುಮಾರು 500 ಕೆ.ಜಿ ರೇಷ್ಮೆ ಗೂಡನ್ನು ಬೆಳೆಯುತ್ತಾರೆ. ಅದರಲ್ಲಿನ ಸೊಪ್ಪು ಇತ್ಯಾದಿ ತ್ಯಾಜ್ಯವನ್ನು ಕುರಿ ಮೇವಾಗಿ ಬಳಸುತ್ತಾರೆ. ಐದು ಎಕರೆ ತೋಟದ ಬದುವಿನಲ್ಲಿ ಬೆಳೆಸಿರುವ ಬೇವಿನ ಮರಗಳ ಸೊಪ್ಪು ಕೂಡ ಕುರಿಗಳಿಗೆ ಮೇವಾಗಿದೆ. ಇದಲ್ಲದೆ ಹುರುಳಿ, ಹೊಟ್ಟು, ಒಣಹುಲ್ಲನ್ನು ಸಹ ಕುರಿಗಳಿಗೆ ಆಹಾರವಾಗಿ ಕೊಡುತ್ತಾರೆ. ಇವರ ಬಳಿ ಕುರಿಗಳ ಜೊತೆ ಜಮನಾಪಾರಿ ಮೇಕೆಗಳಿವೆ. ಮುರ್ರ ಜಾತಿಯ ಐದು ಎಮ್ಮೆ ಮತ್ತು ಮೂರು ಕರುಗಳಿವೆ. ಎರಡು ಹಳ್ಳಿಕಾರ್ ನಾಟಿ ಹಸುಗಳಿವೆ ಮತ್ತು ಹೈಬ್ರೀಡ್ ತಳಿಯ ನಾಲ್ಕು ಹಸುಗಳನ್ನು ಸಾಕಿದ್ದಾರೆ.

ಡಾರ್ಪರ್ ತಳಿ ಕುರಿತು...
ಡೋರ್ಸೆಟ್ ಹಾರ್ನ್ ಮತ್ತು ಬ್ಲಾಕ್ ಹೆಡ್ ಪರ್ಸಿಯನ್ ತಳಿಯಿಂದ ಸಂಕರಣ ಮಾಡಿ ಪಡೆದ ತಳಿಯೇ ಡಾರ್ಪರ್. ಅತ್ಯಂತ ಕಡಿಮೆ ಉಣ್ಣೆ, ಅತಿ ಹೆಚ್ಚು ಮಾಂಸ ಹೊಂದಿರುವ ಡಾರ್ಪರ್ ಪ್ರಪಂಚದ ಯಾವುದೇ ಭಾಗದಲ್ಲಾದರೂ ಬದುಕಿ ಬಾಳುವ ಸಾಮರ್ಥ್ಯ ಹೊಂದಿದೆ. ಕಾಳಜಿಯಿಂದ ಸಾಕಿದರೆ ಭಾರಿ ಲಾಭದಾಯಕ ಈ ಡಾರ್ಪರ್ ಕುರಿ ಸಾಕಾಣಿಕೆ. ಡೋರ್ಸೆಟ್ ಮತ್ತು ಪರ್ಸಿಯನ್ ಈ ಶಬ್ಧಗಳ ಮೊದಲ ಮೂರು ಮೂರು ಅಕ್ಷರಗಳಿಂದ ಡಾರ್ಪರ್ ಎಂದು ಹೆಸರಿಸಲಾಗಿದೆ. ದಕ್ಷಿಣ ಆಫ್ರಿಕಾದ ಎರಡನೇ ಅತಿ ದೊಡ್ಡ ಕುರಿ ತಳಿಯಾಗಿರುವ ಡಾರ್ಪರ್ ಈಗ ಪ್ರಪಂಚದಾದ್ಯಂತ ಹರಡಿದೆ. ಆಸ್ಟ್ರೇಲಿಯಾದ ಪ್ರಸಿದ್ಧ ಬಿಳಿ ಕುರಿ ಕೂಡ ಡಾರ್ಪರ್ ತಳಿಯಿಂದ ಸಂವರ್ಧನೆಗೊಂಡಿರುವುದಾಗಿದೆ.

ಕಾಂತರಾಜು ಅವರ ಮೊಬೈಲ್ ಸಂಖ್ಯೆ: 9449309129

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT