ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೃತ್ 2.0 ಯೋಜನೆ |ಶಿಡ್ಲಘಟ್ಟಕ್ಕೆ ಶುದ್ಧ ಕುಡಿವ ನೀರು ಪೂರೈಕೆ ಯೋಜನೆಗೆ ಅಸ್ತು

₹75 ಕೋಟಿ ಬಿಡುಗಡೆ
Published 27 ಆಗಸ್ಟ್ 2024, 12:41 IST
Last Updated 27 ಆಗಸ್ಟ್ 2024, 12:41 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ದೇಶದಲ್ಲಿನ ನಗರಗಳ ಅಭಿವೃದ್ಧಿಗಾಗಿ 2021ರಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಅಟಲ್ ಮಿಷನ್ ಫಾರ್ ರಿಜುವೆನೇಶನ್ ಮತ್ತು ಅರ್ಬನ್ ಟ್ರಾನ್ಸ್‌ಫರ್ಮೇಷನ್ (ಅಮೃತ್) 2.0 ಪಂಚವಾರ್ಷಿಕ ಯೋಜನೆಯಲ್ಲಿ ಈ ಬಾರಿ ಶಿಡ್ಲಘಟ್ಟವೂ ಸೇರ್ಪಡೆಗೊಂಡಿದೆ.

ಅಮೃತ್ 2 ಯೋಜನೆಯಡಿ ರಾಮಸಮುದ್ರ ಕೆರೆಯಿಂದ ಶಿಡ್ಲಘಟ್ಟ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗೆ ಒಪ್ಪಿಗೆ ಸಿಕ್ಕಿದೆ.

ಶಾಸಕ ಬಿ.ಎನ್.ರವಿಕುಮಾರ್ ಅವರು ಶಾಸಕರಾಗುತ್ತಿದ್ದಂತೆ ನಗರದ ಅಭಿವೃದ್ಧಿಗೆ ಮತ್ತು ಜನರ ಕುಡಿಯುವ ನೀರಿನ ಅಗತ್ಯತೆಗೆ ದೂರದೃಷ್ಟಿ ಯೋಜನೆ ಬೇಕೆಂದು ‘ರಾಮಸಮುದ್ರ ಕೆರೆಯಿಂದ ಶಿಡ್ಲಘಟ್ಟ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ’ ಕುರಿತಂತೆ ಪಕ್ಷದ ವರಿಷ್ಠರು, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಗಮನಕ್ಕೆ ತಂದಿದ್ದರು.

ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಎಚ್.ಡಿ ದೇವೇಗೌಡರು ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವರಾಗಿದ್ದ ಹರ್ದೀಪ್ ಸಿಂಗ್ ಪುರಿ ಅವರಿಗೆ 2023ರ ಜುಲೈನಲ್ಲಿ ಪತ್ರ ಬರೆದು. ಶಿಡ್ಲಘಟ್ಟ ನಗರಕ್ಕೆ ಬೇಕಿರುವ ಅಗತ್ಯ ಸೌಲಭ್ಯಗಳ ಬಗ್ಗೆ ವಿವರಿಸಿ, ‘ಅಮೃತ್ 2’ ಯೋಜನೆಯಡಿ ಶಿಡ್ಲಘಟ್ಟದ ಕುಡಿಯುವ ನೀರಿನ ಯೋಜನೆಯನ್ನು ಸೇರಿಸುವಂತೆ ವಿನಂತಿಸಿದ್ದರು.

‘ಶಿಡ್ಲಘಟ್ಟ ನಗರ ವಾಣಿಜ್ಯ ನಗರವಾಗಿ ವೇಗವಾಗಿ ಬೆಳೆಯುತ್ತಿದೆ. ನಗರಸಭೆಯಾಗಿ ಮೇಲ್ದರ್ಜೆಗೇರಿರುವ ಶಿಡ್ಲಘಟ್ಟ ನಗರ ‘ದಾಬಸ್ ಪೇಟೆ- ಚಿಕ್ಕಬಳ್ಳಾಪುರ-ಶಿಡ್ಲಘಟ್ಟ-ಚಿಂತಾಮಣಿ’ ಹೆದ್ದಾರಿಯಲ್ಲಿದೆ. ನಗರಕ್ಕೆ ಅಗತ್ಯ ಕುಡಿಯುವ ನೀರಿನ ಪೂರೈಕೆಯ ಯೋಜನೆ ಅತ್ಯಗತ್ಯವಾಗಿದೆ’ ಎಂದು ಎಚ್.ಡಿ.ದೇವೇಗೌಡರು ಪತ್ರದ ಮೂಲಕ ಮನವಿ ಮಾಡಿದ್ದರು.

ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಇದಕ್ಕಾಗಿ ಒಟ್ಟು ₹87 ಕೋಟಿ ಅನುದಾನ ನೀಡಿದ್ದು ಮೊದಲನೇ ಭಾಗವಾಗಿ ಈಗಾಗಲೇ ಸುಮಾರು ₹75 ಕೋಟಿ ಬಿಡುಗಡೆಯಾಗಿರುತ್ತದೆ. ಪ್ರಸ್ತುತ ವಿವರವಾದ ಯೋಜನಾ ವರದಿ (ಡಿಪಿಆರ್) ಅಂತಿಮ ಹಂತದಲ್ಲಿದೆ.

ಸೌಕರ್ಯ ಒದಗಿಸುವುದು ಕರ್ತವ್ಯ

ಜನರ ಕುಡಿಯುವ ನೀರು ಮತ್ತು ಮೂಲ ಸೌಕರ್ಯಗಳನ್ನು ಒದಗಿಸುವುದು ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ. ಈ ಬಗ್ಗೆ ಪಕ್ಷದ ವರಿಷ್ಠರು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಗಮನಕ್ಕೆ ತಂದಾಗ ಅವರು ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದರು. ನಮ್ಮ ಈ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಸಹಕರಿಸಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಅಂದಿನ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತು ಸಂಬಂಧ ಪಟ್ಟ ಎಲ್ಲ ಅಧಿಕಾರಿಗಳಿಗೆ ನಾವು ಋಣಿಗಳು. ಬಿ.ಎನ್.ರವಿಕುಮಾರ್ ಶಾಸಕ

ಶಿಡ್ಲಘಟ್ಟಕ್ಕೆ ಶುದ್ಧ ಕುಡಿಯುವ ನೀರು ಯೋಜನೆ ಕುರಿತಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವರಾಗಿದ್ದ ಹರ್ದೀಪ್ ಸಿಂಗ್ ಪುರಿ ಅವರಿಗೆ ಬರೆದಿರುವ ಪತ್ರ

ಶಿಡ್ಲಘಟ್ಟಕ್ಕೆ ಶುದ್ಧ ಕುಡಿಯುವ ನೀರು ಯೋಜನೆ ಕುರಿತಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವರಾಗಿದ್ದ ಹರ್ದೀಪ್ ಸಿಂಗ್ ಪುರಿ ಅವರಿಗೆ ಬರೆದಿರುವ ಪತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT