ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಸಾನ್ ರೈಲು ಸೇವೆಗೆ ಸಂಸದ ಎಸ್.ಮುನಿಸ್ವಾಮಿ ಚಾಲನೆ

ದೊಡ್ಡನೆತ್ತ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಸಾನೆ
Last Updated 20 ಜೂನ್ 2021, 3:18 IST
ಅಕ್ಷರ ಗಾತ್ರ

ಚಿಂತಾಮಣಿ: ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ರೈತರು ಮತ್ತು ವ್ಯಾಪಾರಿಗಳ ಹಲವಾರು ವರ್ಷಗಳ ಬೇಡಿಕೆ ಕನಸಾಗಿದ್ದು, 250 ಟನ್ ಮಾವಿನ ಹಣ್ಣನ್ನು ಹೊತ್ತ ನೈರುತ್ಯ ರೈಲ್ವೆ ವಲಯದ ಹಾಗೂ ಕರ್ನಾಟಕದ ಮೊಟ್ಟ ಮೊದಲು ಕಿಸಾನ್ ರೈಲು ತಾಲ್ಲೂಕಿನ ದೊಡ್ಡನೆತ್ತ ರೈಲ್ವೆ ನಿಲ್ದಾಣದಿಂದ ಶನಿವಾರ ನವದೆಹಲಿಯ ಆದರ್ಶ ನಗರಕ್ಕೆ ಹೊರಟಿತು.

ದೊಡ್ಡನೆತ್ತ ರೈಲ್ವೆ ನಿಲ್ದಾಣದಲ್ಲಿ ಸಂಸದ ಎಸ್.ಮುನಿಸ್ವಾಮಿ, ಶಾಸಕ ಎಂ.ಕೃಷ್ಣಾರೆಡ್ಡಿ, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಸಿರುನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಎರಡು ಜಿಲ್ಲೆಗಳ ರೈತರು ಟೊಮೆಟೊ, ಮಾವು, ತರಕಾರಿಯನ್ನು ಅಧಿಕವಾಗಿ ಬೆಳೆಯುತ್ತಾರೆ. ಹಣ್ಣು, ತರಕಾರಿಗೆ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದರೆ ರೈತರು ದೆಹಲಿ ಹಾಗೂಸುತ್ತಮುತ್ತಲ ರಾಜ್ಯಗಳಿಗೆ ಸಾಗಾಣಿಕೆ ಮಾಡಲು ತೊಂದರೆಯಾಗಿತ್ತು. ಕಿಸಾನ್ ರೈಲನ್ನು ಓಡಿಸುವಂತೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸಿ ಒತ್ತಾಯ ಮಾಡುತ್ತಿದ್ದರು. ಆ ಮನವಿ ಶನಿವಾರ ಈಡೇರಿದೆ.

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ರೈತರ ಅನುಕೂಲಕ್ಕಾಗಿ ಕಿಸಾನ್ ರೈಲಿನ ಸಂಚಾರವನ್ನು ಆರಂಭಿಸುವಂತೆ ರೈಲ್ವೆ ಸಚಿವ ಪಿಯೂಷ್ ಘೋಯಲ್ ಅವರಿಗೆ ಮಾಡಿದ್ದ ಮನವಿಗೆ ಸ್ಪಂದಿಸಿ ನೈರುತ್ಯ ರೈಲ್ವೆ ವಲಯ ಹಾಗೂ ಕರ್ನಾಟಕದಮೊಟ್ಟಮೊದಲ ಕಿಸಾನ್ ರೈಲು ಆರಂಭಿಸಿದ್ದಾರೆ. ರೈತರು ಹಣ್ಣು ಮತ್ತು ತರಕಾರಿಗಳನ್ನು ಉತ್ತರ ಭಾರತದ ರಾಜ್ಯಗಳಿಗೆ ಸಾಗಾಣಿಕೆಗೆ ರಸ್ತೆ ಮಾರ್ಗವಾಗಿ ಕೆ.ಜಿ.ಗೆ ₹7ರಿಂದ ₹8 ಖರ್ಚು ಬರುತ್ತದೆ. ರೈಲಿನ ಮೂಲಕ ಸಾಗಾಣಿಕೆ ಮಾಡಲು ಕೆ.ಜಿ.ಗೆ ₹2ರಿಂದ ₹3 ಬರುತ್ತದೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕೃಷಿ ಉತ್ಪಾದಕ ಕಂಪನಿಗಳು ಬೇರೆ ಬೇರೆ ಕಡೆಯಿಂದ ಬೇಡಿಕೆಗಳನ್ನು ಪಡೆದು ಪೂರೈಸಬೇಕು. ಬೇಡಿಕೆಯಂತೆ ಎಷ್ಟು ರೈಲು ಬೇಕಾದರೂ ಒದಗಿಸುವುದಾಗಿ ತಿಳಿಸಿದ್ದಾರೆ. ಕೇಂದ್ರ ಕೃಷಿ ಮಂತ್ರಿ ಶೇ 50ರಷ್ಟು ಸಬ್ಸಿಡಿ ನೀಡಿರುವುದರಿಂದ ಕೆ.ಜಿಗೆ ₹2.82 ಮಾತ್ರ ಖರ್ಚು ಬರುತ್ತದೆ. ಬೇರೆ ಬೇರೆ ರಾಜ್ಯಗಳಿಂದ ಬೇಡಿಕೆಗಳನ್ನು ರೈತರು ನೇರವಾಗಿ ಪೂರೈಸುವ ಮೂಲಕ ದಳ್ಳಾಳಿಗಳ ಹಿಡಿತದಿಂದ ಮುಕ್ತರಾಗಬೇಕುಎಂದರು.

ಲಾಕ್‌ಡೌನ್‌ನಿಂದ ಮಾವಿನ ಹಣ್ಣು ಹಾಗೂ ಟೊಮೆಟೊ ಮತ್ತಿತರ ತರಕಾರಿ ಬೆಳೆದ ರೈತರಿಗೆ ನಷ್ಟವಾಗಿದೆ. 1.55 ಸಾವಿರ ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದೆ. ಎಲ್ಲ ಜನಪ್ರತಿನಿಧಿಗಳು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಾವಿನ ಹಣ್ಣು ಮತ್ತು ಟೊಮೆಟೊಗೆ ಸಹಾಯಧನ ನೀಡಲು ಒತ್ತಾಯಿಸಲಾಗುವುದು. ಸಾಗಾಟಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿರುವಂತೆ ರಾಜ್ಯ ಸರ್ಕಾರ ಸಹಾಯಧನ ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್ ವರ್ಮ, ಹೆಚ್ಚುವರಿ ವ್ಯವಸ್ಥಾಪ ಕುಸುಮಾಹರಿಪ್ರಿಯಾ, ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಎಂ.ಕೃಷ್ಣಾರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT