ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಪ್ರಾರ್ಥನೆ, ಶುಭಾಶಯ ವಿನಿಮಯ ಮಾಡಿಕೊಂಡ ಮುಸ್ಲಿಂ ಬಾಂಧವರು

Published 22 ಏಪ್ರಿಲ್ 2023, 14:29 IST
Last Updated 22 ಏಪ್ರಿಲ್ 2023, 14:29 IST
ಅಕ್ಷರ ಗಾತ್ರ

ಚೇಳೂರು: ಮುಸ್ಲಿಂ ಸಮುದಾಯದ ಹಬ್ಬ ಈದ್‌ ಉಲ್‌ ಫಿತ್ರ್‌ ಪಟ್ಟಣದಲ್ಲಿ ಸಂಭ್ರಮ ಮತ್ತು ಸಡಗರದಿಂದ ನಡೆಯಿತು.

ತಾಲ್ಲೂಕಿನ ನಾನಾ ಕಡೆ ಸಾಮೂಹಿಕ ಪ್ರಾರ್ಥನೆ, ಶುಭಾಶಯ ವಿನಿಮಯ ಮಾಡಿಕೊಂಡರು. ಶನಿವಾರ ಮುಂಜಾನೆಯೆ ಇಲ್ಲಿನ ಗೆರಿಗಿರೆಡ್ಡಿಪಾಳ್ಯ ಗ್ರಾಮದ ಹೊರವಲಯದಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ಸಮುದಾಯದ ಧಾರ್ಮಿಕ ಮುಖಂಡರು ಸ್ನೇಹ, ಭ್ರಾತೃತ್ವ, ಸಹಬಾಳ್ವೆ ಕುರಿತು ಪ್ರವಚನ ನೀಡಿದರು.

ಈದ್‌ ಉಲ್‌ ಫಿತ್ರ್‌ ಹಬ್ಬವನ್ನು ಉಪವಾಸದ ಹಬ್ಬವೆಂದೇ ಕರೆಸಿಕೊಳ್ಳುವ ಈ ಆಚರಣೆ ಒಂದು ಮಾಸದಲ್ಲಿ 29 ದಿನ ಉಪವಾಸ ಆಚರಣೆ ಮಾಡಿದ ಮುಸ್ಲಿಂ ಸಮುದಾಯದವರು ಇಂದು ಕಡೆ ದಿನದ ಉಪವಾಸ ಆಚರಿಸಿದರು. ಎಲ್ಲೆಡೆ ಬಡವರು ಶ್ರೀಮಂತರೆನ್ನದೆ ಹಬ್ಬದಲ್ಲಿ ಭಾಗವಹಿಸಿ ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿ ಕಂಡುಬಂತು.

ಈದ್ಗಾದಲ್ಲಿ ಪ್ರಾರ್ಥನೆಯ ಮುಗಿದ ನಂತರ ಮನೆಗೆ ತೆರಳುವ ಮುನ್ನ ಸಮುದಾಯದ ಉಳ್ಳವರು ಬಡವರಿಗೆ ತಮ್ಮ ದುಡಿಮೆಯ ಇಂತಿಷ್ಟು ಅಂಶವನ್ನು ದಾನವಾಗಿ ನೀಡಿದರು. ಕೆಲವರು ಗೋಧಿ, ಅಕ್ಕಿ, ರಾಗಿ ನೀಡಿದರೆ ಇನ್ನು ಹೆಚ್ಚು ಸ್ಥಿತಿವಂತರು ಗೋಡಂಬಿ, ದ್ರಾಕ್ಷಿ, ಅಂಜೂರ ಸೇರಿದಂತೆ ಇನ್ನಿತರ ವಸ್ತುಗಳನ್ನು ಕೊಡುಗೆಯಾಗಿ ನೀಡುವುದು ಕಂಡುಬಂತು. ಪ್ರಾರ್ಥನೆಗೆ ತೆರಳುವಾಗ ಒಂದು ಹಾದಿಯಲ್ಲಿ ತೆರಳಿದರೆ ಬರುವಾಗ ತಮ್ಮ ಹಿರಿಯರ ಸಮಾಧಿಗಳಿಗೆ ನಮಸ್ಕರಿಸಿ ಮತ್ತೊಂದು ಹಾದಿಯಲ್ಲಿ ಮನೆಗೆ ತೆರಳಿದರು.

ವಿಶೇಷ ತಿಂಡಿ: ಸಂಜೆ ಉಪವಾಸ ಬಿಡುವ ಸಮಯದಲ್ಲಿ ವಿಶೇಷ ತಿಂಡಿ ತಿನಿಸುಗಳ ಮಾರಾಟ ನಡೆಯುತ್ತಿದೆ. ಮೀನು, ಕೋಳಿ, ಮೊಟ್ಟೆ, ಕುರಿ ಮಾಂಸದಿಂದ ತಯಾರಿಸಿದ ಬಗೆ ಬಗೆಯ ತಿಂಡಿಗಳು, ಸಮೋಸ ಕೊಳ್ಳುವವರ ಮನತಣಿಸಿವೆ. ಚಿಂತಾಮಣಿ ರಸ್ತೆಯಲ್ಲಿರುವ ಜಾಮೀಯಾ ಮಸೀದಿ ಅಕ್ಕಪಕ್ಕದ ಈ ಅಂಗಡಿಗಳದ್ದೇ ಪಾರುಪತ್ಯ. ಇದಲ್ಲದೆ ಒಂದು ವಾರದಿಂದ ಪಟ್ಟಣದ ಬಟ್ಟೆ ಅಂಗಡಿಯಲ್ಲಿ ಹೊಸ ಬಟ್ಟೆಗಳ ಖರೀದಿಯೂ ಅಬ್ಬರದಿಂದ ಸಾಗಿತ್ತು.

ಮೆರವಣಿಗೆಯಲ್ಲಿ ಜಾಮೀಯಾ ಮಸೀದಿ ಅಧ್ಯಕ್ಷ ಎಂ.ಎಸ್.ಅಬ್ದುಲ್ ಲತೀಫ್, ನೂರ್ ಅಹಮದ್, ಯಾಕುಬ್ ಹೈದರ್ ವಲಿ ಸಾಬ್, ಇಂತಿಯಾಜ್, ಜಿಲಾನ್ ಕಲಿಂ ಉಲ್ಲಾ, ಬಾಷಾ, ನವಾಜ್, ಬುಲೆಟ್ ಬಾಬು, ನಯಾಜ್, ಮದೀನಾ ಮಸೀದಿ ಅಧ್ಯಕ್ಷ ಅಲೀಂ ಬಾಷಾ, ಚಾಂದ್ ಬಾಷಾ, ಮೆಹಬೂಬ್ ಬಾಷ, ಬಾಬಾಜಾನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT