ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿಯಲ್ಲಿ ಸೋಲು ಗೆಲುವಿನ ತರ್ಕ

ಸಚಿವ ಡಾ.ಎಂ.ಸಿ.ಸುಧಾಕರ್‌ಗೆ ಪ್ರತಿಷ್ಠೆ; ಕೃಷ್ಣಾರೆಡ್ಡಿಗೆ ಅಸ್ತಿತ್ವದ ಹೋರಾಟ
ಎಂ.ರಾಮಕೃಷ್ಣಪ್ಪ
Published 28 ಏಪ್ರಿಲ್ 2024, 6:20 IST
Last Updated 28 ಏಪ್ರಿಲ್ 2024, 6:20 IST
ಅಕ್ಷರ ಗಾತ್ರ

ಚಿಂತಾಮಣಿ: ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರುವ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ಸೋಲು ಗೆಲುವಿನ ಚರ್ಚೆ ಜೋರಾಗಿದೆ.

ಸುಮಾರು ಒಂದು ತಿಂಗಳಿನಿಂದ ಅಭ್ಯರ್ಥಿಗಳು, ರಾಜಕೀಯ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಬಿರುಬೇಸಿಗೆಯಲ್ಲಿ ಮನೆ-ಮನೆ, ಹಳ್ಳಿ-ಹಳ್ಳಿ, ರಸ್ತೆ-ರಸ್ತೆ ಸುತ್ತಾಡಿ ಮತದಾರರ ಮನ ಗೆಲ್ಲುವ ಪ್ರಯತ್ನ ನಡೆಸಿದ್ದರು.

ಹಗಲು-ರಾತ್ರಿ ಎನ್ನದೆ ಮತದಾರರ ಮನೆ ಬಾಗಿಲಿಗೆ ತೆರಳಿ ಕೈಮುಗಿಯುತ್ತಿದ್ದರು. ಶುಕ್ರವಾರ ಮತದಾನ ಮುಕ್ತಾಯವಾಗಿದ್ದರಿಂದ ಶನಿವಾರ ವಿಶ್ರಾಂತಿ ಪಡೆಯುತ್ತಿದ್ದಾರೆ.

ಚುನಾವಣೆಯ ಮರು ದಿನ ಎಲ್ಲ ಕಡೆ ಮತದಾನ ಮತ್ತು ಗೆಲುವಿನ ಲೆಕ್ಕಾಚಾರದ ಚರ್ಚೆಗಳು ಸಾಮಾನ್ಯವಾಗಿದ್ದವು. ಅಂಗಡಿ, ಬಸ್ ನಿಲ್ದಾಣ, ಹೋಟೆಲ್ ಸೇರಿದಂತೆ ಎಲ್ಲಿ ನಾಲ್ಕು ಜನರು ಸೇರಿದರೂ ಮತದಾನದ ಬಗ್ಗೆಯೇ ಚರ್ಚೆ, ಸಂವಾದ, ವಾಗ್ವಾದದ ದೃಶ್ಯಗಳು ಸಾಮಾನ್ಯವಾಗಿವೆ. ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದರು.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಮತ್ತು ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬು ನಡುವೆ ನೇರ ಹಣಾಹಣಿ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಎಂ.ಸಿ.ಸುಧಾಕರ್ ಮತ್ತು ಜೆಡಿಎಸ್ ನಾಯಕ ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗೆ ಹೆಚ್ಚು ಮತಕೊಡಿಸಬೇಕು ಎನ್ನುವ ಜಿದ್ದಿಗೆ ಬಿದ್ದು ಪ್ರಚಾರ ನಡೆಸಿದ್ದರು.

ನಿಮ್ಮ ಬೂತ್, ನಿಮ್ಮ ಊರು, ಹೋಬಳಿಯಲ್ಲಿ ಮತದಾನ ಹೇಗೆ ಆಗಿದೆ? ಯಾರಿಗೆ ಲೀಡ್ ಬರಬಹುದು. ಮೂಲ ಬಿಜೆಪಿ ಮತದಾರರು ಮತ್ತು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಬೆಂಬಲಿಗರು ಯಾರಿಗೆ ಮತದಾನ ಮಾಡಿರಬಹುದು. ಎಲ್ಲೆಲ್ಲಿ ಒಳೇಟುಗಳು ಬಿದ್ದಿರಬಹುದು ಎಂಬ ಪ್ರಶ್ನೆಗಳ ಸುರಿಮಳೆ ಮುಖಂಡರಿಗೆ ಎದುರಾಗುತ್ತಿತ್ತು.

7 ಬಾರಿ ಕೋಲಾರ ಸಂಸದರಾಗಿದ್ದ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಪ್ರಚಾರಕ್ಕೆ ಕರೆಯದೆ ಮೂಲೆಗುಂಪು ಮಾಡಲಾಗಿದೆ ಎಂದು ಕೆ.ಎಚ್. ಮುನಿಯಪ್ಪ ಬೆಂಬಲಿಗರು ಬಹಿರಂಗವಾಗಿಯೇ ಈಗಲೂ ಅಸಮಾಧಾ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಅವರ ಬೆಂಬಲಿಗರು ಯಾರಿಗೆ ಮತ ಹಾಕಿರುತ್ತಾರೆ ಎಂಬ ಚರ್ಚೆ ಜೋರಾಗಿದೆ.

ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಎಚ್.ಬೆಂಬಲಿಗರ ಸಂಖ್ಯೆ ಕ್ಷೀಣಿಸಿದೆ. ಅವರೆಲ್ಲ ಈಗಾಗಲೇ ಜೆಡಿಎಸ್‌ ಸೇರಿದ್ದಾರೆ. ಕೆಲವರು ಡಾ.ಎಂ.ಸಿ.ಸುಧಾಕರ್ ಕಡೆಗೆ ವಾಲಿದ್ದಾರೆ. ಮೈತ್ರಿಯ ಕಾರಣದಿಂದ ಬಿಜೆಪಿಯ ಸ್ಥಳೀಯ ಮುಖಂಡರು ಮನಸ್ಸು ಪೂರ್ವಕವಾಗಿ ಜೆಡಿಎಸ್ ಅಭ್ಯರ್ಥಿಗೆ ಮತ ಚಲಾಯಿಸಿದರೇ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕ್ಷೇತ್ರದಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ 6 ಹೋಬಳಿಗಳಿವೆ. ಎಲ್ಲೆಲ್ಲಿ ಹೆಚ್ಚು ಮತದಾನವಾಗಿದೆ. ಯಾವ ಯಾವ ಹೋಬಳಿಯಲ್ಲಿ ಮತ್ತು ನಗರದಲ್ಲಿ ಯಾರಿಗೆ ಲೀಡ್ ಬರಬಹುದು. ಅಂತಿಮವಾಗಿ ಯಾರಿಗೆ ಗೆಲುವು ಸಿಗಬಹುದು ಎಂದು ಚರ್ಚೆಗಳು ಕ್ಷೇತ್ರದಲ್ಲಿ ನಡೆಯುತ್ತಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT