ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲಿ ಕಮಲಕ್ಕೆ ಬಲ

ಆರರಲ್ಲಿ ಕಮಲ, ಎರಡರಲ್ಲಿ ಕೈ ಮುನ್ನಡೆ; ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ಗೆ ಮನ್ನಣೆ
Published 5 ಜೂನ್ 2024, 5:39 IST
Last Updated 5 ಜೂನ್ 2024, 5:39 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಬಿಜೆಪಿ ಮತ್ತು ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿಯೂ ಬಿಜೆಪಿ ದೊಡ್ಡ ಮಟ್ಟದ ಮುನ್ನಡೆ ಪಡೆದಿದೆ.

ಕಾಂಗ್ರೆಸ್‌ನ ಎಸ್‌.ಎನ್.ಸುಬ್ಬಾರೆಡ್ಡಿ ಪ್ರತಿನಿಧಿಸುವ ಬಾಗೇಪಲ್ಲಿ, ಶರತ್ ಬಚ್ಚೇಗೌಡ ಪ್ರತಿನಿಧಿಸುವ ಹೊಸಕೋಟೆ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಅಲ್ಪ ಲೀಡ್ ಪಡೆದಿದೆ.

ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಪ‍್ರತಿನಿಧಿಸುವ ದೇವನಹಳ್ಳಿ, ಕಾಂಗ್ರೆಸ್‌ನ ಶ್ರೀನಿವಾಸ್ ಪ್ರತಿನಿಧಿಸುತ್ತಿರುವ ನೆಲಮಂಗಲ, ಪ್ರದೀಪ್ ಈಶ್ವರ್ ಅವರ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಲೀಡ್ ಪಡೆದಿದೆ. ಪಕ್ಷೇತರ ಶಾಸಕ ಕೆ.ಎಚ್‌.ಪುಟ್ಟಸ್ವಾಮಿಗೌಡ ಅವರ ಗೌರಿಬಿದನೂರು, ಬಿಜೆಪಿಯ ಎಸ್‌.ಆರ್.ವಿಶ್ವನಾಥ್ ಮತ್ತು ದೊಡ್ಡಬಳ್ಳಾಪುರದ ಧೀರಜ್ ಮುನಿರಾಜು ಕ್ಷೇತ್ರಗಳಲ್ಲಿ ಮತದಾರರು ಕಮಲಕ್ಕೆ ಮನ್ನಣೆ ನೀಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಲೀಡ್ ಪಡೆದಿದ್ದರು. 

ಸೋಲಿನ ನೆಲದಲ್ಲಿ ಮನ್ನಣೆ: ಸ್ವಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ 20 ಸಾವಿರ ಮತಗಳ ಮುನ್ನಡೆಯನ್ನು ಸುಧಾಕರ್ ಪಡೆದಿದ್ದಾರೆ. ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 10,642 ಮತಗಳ ಅಂತರದಿಂದ ಸೋತಿದ್ದರು. ಲೋಕಸಭಾ ಚುನಾವಣೆಯಲ್ಲಿ 98,437 ಮತಗಳನ್ನು ಪಡೆಯುವ ಮೂಲಕ ಮತ್ತೆ ಚಿಕ್ಕಬಳ್ಳಾಪುರ ಜನರ ಮನಕ್ಕೆ ಹತ್ತಿರವಾಗಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕೆಲವು ದಿನಗಳ ಹಿಂದೆ ನಡೆದ ಆತ್ಮಾವಲೋಕನ ಸಭೆಯಲ್ಲಿ ಬಿಜೆಪಿ ಮುಖಂಡರು 18 ಸಾವಿರ ಮತಗಳ ಮುನ್ನಡೆ ದೊರೆಯುತ್ತದೆ ಎಂದಿದ್ದರು.

ನೆಲಮಂಗಲ ತಂದ ಅಚ್ಚರಿ: ಖುದ್ದು ಸುಧಾಕರ್ ಅಚ್ಚರಿಪಡುವಂತೆ ನೆಲಮಂಗಲ ಕ್ಷೇತ್ರದಲ್ಲಿ ಲೀಡ್ ದೊರೆತಿದೆ. ಇಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಗರಿಷ್ಠ 10 ಸಾವಿರ ಲೀಡ್ ದೊರೆಯುತ್ತದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಅಂಕಿ ಸಂಖ್ಯೆಯೊಂದಿಗೆ ವಿಶ್ಲೇಷಿಸಿದ್ದರು. ಅಚ್ಚರಿ ಎನ್ನುವಂತೆ ಬಿಜೆಪಿಯು ಗರಿಷ್ಠ ಲೀಡ್ ಪಡೆದ ಕ್ಷೇತ್ರಗಳ ಪೈಕಿ ನೆಲಮಂಗಲ ಎರಡನೇ ಸ್ಥಾನದಲ್ಲಿ ಇದೆ. 

ಯಲಹಂಕದ್ದೇ ಹವಾ: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಯಲಹಂಕ ವಿಧಾನಸಭಾ ಕ್ಷೇತ್ರ 75 ಸಾವಿರ ಲೀಡ್ ನೀಡಿತ್ತು. ಆದರೆ ಈ ಬಾರಿ ಶಾಸಕ ಎಸ್.ಆರ್.ವಿಶ್ವನಾಥ್ ಸಕ್ರಿಯವಾಗಿ ಕೆಲಸ ಮಾಡಿಲ್ಲ. ಆದ ಕಾರಣ ಲೀಡ್ ಕಡಿಮೆ ಆಗುತ್ತದೆ ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತಿತ್ತು.
ಇಲ್ಲಿ ಲೀಡ್ ಲೆಕ್ಕಾಚಾರ ಬಿಜೆಪಿಗೂ ಕಗ್ಗಂಟಾಗಿತ್ತು. ಆದರೆ ಇಲ್ಲಿನ ಮತದಾರರು ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿಯೇ ಕಮಲಕ್ಕೆ ಮುದ್ರೆ ಒತ್ತಿದ್ದಾರೆ. ಬಿಜೆಪಿ 83 ಸಾವಿರ ಮತಗಳ ಲೀಡ್ ಪಡೆದಿದೆ. ಗರಿಷ್ಠ ಲೀಡ್ ಪಡೆದ ಕ್ಷೇತ್ರ ಎನಿಸಿದೆ.

ನಿರೀಕ್ಷೆಯಂತೆಯೇ ಲೀಡ್: ಬಿಜೆಪಿ ಯುವ ಘಟಕದ ರಾಜ್ಯ ಅಧ್ಯಕ್ಷರೂ ಆಗಿರುವ ಧೀರಜ್ ಮುನಿರಾಜು, ದೊಡ್ಡಬಳ್ಳಾಪುರದಲ್ಲಿ ಪಕ್ಷಕ್ಕೆ ಲೀಡ್ ಕೊಡಿಸಿದ್ದಾರೆ. ಜೆಡಿಎಸ್ ಜೊತೆಯಾದ ಕಾರಣ ದೊಡ್ಡಬಳ್ಳಾಪುರದಲ್ಲಿ ಬಿಜೆಪಿಗೆ ಸರಾಸರಿ 20 ಸಾವಿರ ಲೀಡ್ ದೊರೆಯುತ್ತದೆ ಎನ್ನುವ ನಂಬಿಕೆ ಎರಡೂ ಪಕ್ಷಗಳ ನಾಯಕರಲ್ಲಿ ಇತ್ತು. ಆ ನಂಬಿಕೆ ಸುಳ್ಳಾಗಲಿಲ್ಲ.

ಬಿಜೆಪಿಗೆ ನಿರೀಕ್ಷೆ ಹುಸಿ: ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಪ್ರತಿನಿಧಿಸುವ ದೇವನಹಳ್ಳಿ ಕ್ಷೇತ್ರದಲ್ಲಿ 20ರಿಂದ 30 ಸಾವಿರ ಲೀಡ್ ದೊರೆಯುತ್ತದೆ ಎನ್ನುವ ವಿಶ್ವಾಸ ಬಿಜೆಪಿ ನಾಯಕರಲ್ಲಿ ಇತ್ತು. ಡಾ.ಕೆ.ಸುಧಾಕರ್ ಸಹ ಈ ಕ್ಷೇತ್ರದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದ್ದರು. ಆದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಿರೀಕ್ಷೆಗೆ ಅನುಗುಣವಾಗಿ ಲೀಡ್ ದೊರೆತಿಲ್ಲ. 5,231 ಮತಗಳ ಮುನ್ನಡೆಯನ್ನು ಮಾತ್ರ ದೇವನಹಳ್ಳಿಯಲ್ಲಿ ಬಿಜೆಪಿ ಪಡೆದಿದೆ. 

‘ಕೈ’ಕೊಟ್ಟ ಗೌರಿಬಿದನೂರು, ಬಾಗೇಪಲ್ಲಿ: ಕಾಂಗ್ರೆಸ್, ಲೀಡ್ ಬಗ್ಗೆ ಅತಿ ಹೆಚ್ಚು ನಿರೀಕ್ಷೆಗಳನ್ನು ಹೊಂದಿದ್ದ ಕ್ಷೇತ್ರ ಗೌರಿಬಿದನೂರು ಮತ್ತು ಬಾಗೇಪಲ್ಲಿ. ಗೌರಿಬಿದನೂರಿನಲ್ಲಿ ಶಾಸಕ ಪುಟ್ಟಸ್ವಾಮಿಗೌಡ ಮತ್ತು ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಕಾಂಗ್ರೆಸ್ ಪರ ಸಾರಥ್ಯವಹಿಸಿದ್ದರು. ಬಾಗೇಪಲ್ಲಿಯಲ್ಲಿ ಸುಬ್ಬಾರೆಡ್ಡಿ ಅವರ ನೇತೃತ್ವ. ಆದರೆ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ನಿರೀಕ್ಷಿಸಿದ್ದ ಲೀಡ್ ದೊರೆತಿಲ್ಲ. ಗೌರಿಬಿದನೂರಿನಲ್ಲಿ ಬಿಜೆಪಿ 483 ಮತ ಮುನ್ನಡೆ ಪಡೆದಿದ್ದರೆ ಬಾಗೇಪಲ್ಲಿಯಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದಿದೆ.

ಹೊಸಕೋಟೆಯಲ್ಲಿ ಹೊಳಪು ಪಡೆಯದ ಕಾಂಗ್ರೆಸ್: ಕಾಂಗ್ರೆಸ್ ಹೆಚ್ಚು ಲೀಡ್ ಪಡೆದ ಕ್ಷೇತ್ರ ಹೊಸಕೋಟೆ. ಇಲ್ಲಿ 2,334 ಮತಗಳಿಂದ ರಕ್ಷಾ ರಾಮಯ್ಯ ಮುನ್ನಡೆ ಸಾಧಿಸಿದ್ದಾರೆ. ಈ ಹಿಂದಿನಿಂದಲೂ ಈ ಕ್ಷೇತ್ರದಲ್ಲಿ ಎಂ.ಟಿ.ಬಿ.ನಾಗರಾಜ್ ಮತ್ತು ಬಚ್ಚೇಗೌಡ ಅವರ ಕುಟುಂಬದ ನಡುವೆ ಜಿದ್ದಾಜಿದ್ದು ಇದೆ. ಹೊಸಕೋಟೆಯಲ್ಲಿ ಉತ್ತಮ ಲೀಡ್ ಪಡೆಯಬಹುದು ಎನ್ನುವ ನಿರೀಕ್ಷೆ ಕಾಂಗ್ರೆಸ್‌ನಲ್ಲಿ ಇತ್ತು. ಆದರೆ ಎಂ.ಟಿ.ಬಿ ಅವರ ಪಟ್ಟುಗಳು ಅದಕ್ಕೆ ಅವಕಾಶವನ್ನು ನೀಡಿಲ್ಲ. 

ಹೀಗೆ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಳಿಕೆಯ ಕುರಿತು ತೀವ್ರವಾದ ಚರ್ಚೆಗಳು ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT