ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ ಮೂಲಸೌಕರ್ಯಕ್ಕೆ ಒತ್ತು

ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಶಾಲೆಗೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಭೇಟಿ
Last Updated 15 ನವೆಂಬರ್ 2020, 3:04 IST
ಅಕ್ಷರ ಗಾತ್ರ

ಚಿಂತಾಮಣಿ: ‘ಸರ್ಕಾರಿ ಶಾಲೆಗಳಿಗೆ ಎಲ್ಲ ಮೂಲಸೌಲಭ್ಯ ಒದಗಿಸಿ ಮಾದರಿ ಶಾಲೆಗಳನ್ನಾಗಿ ರೂಪಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಹಾಗೂ ತಾಲ್ಲೂಕು ನೋಡೆಲ್ ಅಧಿಕಾರಿ ಎನ್. ನೋಮೇಶ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಬಟ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಮತ್ತು ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿವೆ. ಸರ್ಕಾರಿ ಶಾಲೆಗಳಿಗೆ ಹಂತ ಹಂತವಾಗಿ ಸೌಲಭ್ಯ ಒದಗಿಸಿ ಖಾಸಗಿ ಶಾಲೆಗಳಂತೆ ರೂಪಿಸಲಾಗುತ್ತಿದೆ. ಸರ್ಕಾರಿ ಶಾಲೆಗಳ ಬಗ್ಗೆ ಇದ್ದ ಕೀಳರಿಮೆ ಈಗಿಲ್ಲ. ಖಾಸಗಿ ಶಾಲೆಯ ಮಕ್ಕಳು ಸರ್ಕಾರಿ ಶಾಲೆಗಳ ಕಡೆಗೆ ಮುಖ ಮಾಡುತ್ತಿದ್ದಾರೆ ಎಂದರು.

ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ದೊರೆಯಬೇಕು. ಶಿಕ್ಷಣದಿಂದ ಯಾರು ವಂಚಿತರಾಗಬಾರದು. ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಬೇಕು. ಅವರಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕಲಿಸಿ ಉತ್ತಮ ಪ್ರಜೆಗಳನ್ನಾಗಿ ತಯಾರು ಮಾಡಬೇಕು ಎಂದು ಸೂಚಿಸಿದರು.

ಕುಟುಂಬದ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳಿಂದ ಹಲವಾರು ಮಕ್ಕಳು ಶಿಕ್ಷಣ ಪಡೆಯಲು ತೊಂದರೆ ಅನುಭವಿಸುತ್ತಾರೆ. ಸರ್ಕಾರವು ಸಂವಿಧಾನದಂತೆ ಮಕ್ಕಳ ಹಕ್ಕುಗಳ ಕಾಯ್ದೆ ಅಡಿಯಲ್ಲಿ ಎಲ್ಲರಿಗೂ ಶಿಕ್ಷಣ ನೀಡಲು ಕ್ರಮಕೈಗೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವ್ಯಕ್ತಿಗಳು ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ನರೇಗಾ ಯೋಜನೆಯಡಿ ಬಟ್ಲಹಳ್ಳಿ ಶಾಲೆಗೆ ಉದ್ಯಾನ, ಆಟದ ಮೈದಾನ, ರಂಗ ಮಂದಿರ, ಪ್ರವೇಶ ದ್ವಾರ, ಮಳೆನೀರು ಸಂಗ್ರಹ ತೊಟ್ಟಿ, ಅಡುಗೆ ಮನೆ, ಸಿ.ಸಿ. ರಸ್ತೆ ಮಾಡಿ ಮಾದರಿ ಶಾಲೆಯನ್ನಾಗಿ ರೂಪಿಸಲಾಗಿದೆ. ಯಾವುದೇ ಖಾಸಗಿ ಶಾಲೆಗೆ ಸ್ಪರ್ಧೆ ನೀಡುವಂತಿದೆ ಎಂದು
ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಾತನಾಡಿ, ಮಕ್ಕಳು ಕೋವಿಡ್-19ನಿಂದ ಮನೆಗಳಲ್ಲಿ ಇರಬೇಕಾಗಿದೆ. ಮನೆಗಳಲ್ಲಿದ್ದರೂ ಪ್ರತಿನಿತ್ಯ ನಿಯಮಿತವಾಗಿ ಪಾಠಗಳ ವ್ಯಾಸಂಗ ಮಾಡಬೇಕು ಎಂದರು.

ಮುಖ್ಯಶಿಕ್ಷಕ ಸಿ. ಶ್ರೀನಿವಾಸರೆಡ್ಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟರಮಣಪ್ಪ, ನರೇಗಾ ಎಂಜಿನಿಯರ್ ಸಂತೋಷ್, ಅರುಣ್, ನವೀನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT