ಸೋಮವಾರ, ಜನವರಿ 24, 2022
28 °C

ಬೀದಿಬದಿ ವ್ಯಾಪಾರಿಗಳ ಅಭಿವೃದ್ಧಿಗೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ‘ಬೀದಿಬದಿ ವ್ಯಾಪಾರಿಗಳ ಜೀವನವನ್ನು ಉತ್ತಮಪಡಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಅನೇಕ ಸೌಲಭ್ಯ ಕಲ್ಪಿಸಿದ್ದು, ವ್ಯಾಪಾರಿಗಳು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ನಗರಸಭೆ ಅಧ್ಯಕ್ಷೆ ರೇಖಾ ಉಮೇಶ್ ಸಲಹೆ ನೀಡಿದರು.

ಜಿಲ್ಲಾಡಳಿತ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ನಗರದ ನಗರಸಭೆ ಸಭಾಂಗಣದಲ್ಲಿ ಡೇ-ನಲ್ಮಾ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬೀದಿಬದಿ ವ್ಯಾಪಾರಿಗಳ ಅಭಿವೃದ್ಧಿ ಹಾಗೂ ಜೀವನಮಟ್ಟ ಸುಧಾರಿಸಲು ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ವ್ಯಾಪಾರಸ್ಥರು ಸದಾ ಇಲಾಖೆಯ ಅಧಿಕಾರಿಗಳ ಸಂಪರ್ಕದಲ್ಲಿ ಇರಬೇಕು. ಎಲ್ಲಾ ಇಲಾಖೆಗಳ ಸಹಕಾರ ನಿಮಗೆ ಅತ್ಯಗತ್ಯವಾಗಿದೆ. ನಗರಸಭೆಯಿಂದ ಸಿಗುವ ಸೌಲಭ್ಯ ಪಡೆಯಲು ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತಂದರೆ ಶೀಘ್ರವೇ ಬಗೆಹರಿಸಲಾಗುವುದು ಎಂದು ಭರವಸೆ
ನೀಡಿದರು.

ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ಇಲಾಖೆಯ ಅಧಿಕಾರಿ ವೆಂಕಟಾಚಲಪತಿ ಮಾತನಾಡಿ, ಡೇ-ನಲ್ಮ್ ಯೋಜನೆಯಡಿ ಬೀದಿಬದಿ ಮತ್ತು ತಳ್ಳುವ ಗಾಡಿಗಳ ವ್ಯಾಪಾರಿಗಳಿಗೆ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಈ ನಿಟ್ಟಿನಲ್ಲಿ ಸಣ್ಣ ವ್ಯಾಪಾರಸ್ಥರು ಜಾಗೃತರಾಗಿ ಯೋಜನೆಗಳ ಸದುಪಯೋಗ ಪಡೆದುಕೊಂಡು ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದರು.

ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಬೀದಿಬದಿ ವ್ಯಾಪಾರಿಗಳ ರಕ್ಷಣೆ ಮತ್ತು ಕಾಯ್ದೆಯಡಿ ವ್ಯಾಪಾರಿಗಳು ವ್ಯಾಪಾರ ಸಮಿತಿ ರಚಿಸಿಕೊಳ್ಳಬೇಕು. ಗುರುತಿನ ಚೀಟಿ ಮತ್ತು ಮಾರಾಟ ಪತ್ರ ಹೊಂದಿರುವವರು ಮಾತ್ರ ಸಮಿತಿಯಲ್ಲಿ ಭಾಗವಹಿಸಬಹುದು. ಈ ಹಿನ್ನೆಲೆಯಲ್ಲಿ ವ್ಯಾಪಾರಿಗಳು ನಗರಸಭೆಗೆ ದಾಖಲಾತಿ ನೀಡಿ ಗುರುತಿನ ಚೀಟಿ ಪಡೆಯಬೇಕು. ಸರ್ಕಾರ ಸವಲತ್ತುಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕು ಎಂದು
ಸೂಚಿಸಿದರು.

ಕಾರ್ಯಾಗಾರದಲ್ಲಿ ಪೌರಾಯುಕ್ತ ಉಮಾಶಂಕರ್, ಬೀದಿಬದಿ ವ್ಯಾಪಾರಿಗಳ ತಾಲ್ಲೂಕು ಸಂಘದ ಅಧ್ಯಕ್ಷ ಸೋಫಿ ಸಲೀಂ, ಉಪಾಧ್ಯಕ್ಷೆ ರೆಡ್ಡಮ್ಮ, ಕಾರ್ಯದರ್ಶಿ ಲೋಕೇಶ್ ಎನ್. ನಾಯಕ್, ಪ್ರಧಾನ ಕಾರ್ಯದರ್ಶಿ ಪಾರ್ವತಮ್ಮ, ಪದಾಧಿಕಾರಿಗಳಾದ ನಯಾಜ್, ಪಿ. ಮೋಹನ್ ಬಾಬು, ಶಬ್ಬೀರ್ ಅಹ್ಮದ್, ಫರ್ವೀನ್ ತಾಜ್, ಜಿ. ವಿಶ್ವಾಸ್
ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.