ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ- ಪರಿಸರ ಮಿತ್ರ; ಇದು ಲಕ್ಕೇಪಲ್ಲಿ ಶಾಲೆ

ವಿದ್ಯಾರ್ಥಿಗಳಿಗೆ ಪ್ರತಿವರ್ಷ ಉಚಿತ ಲೇಖನ ಸಾಮಗ್ರಿ ವಿತರಣೆ
Last Updated 7 ಜನವರಿ 2023, 5:37 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಅತ್ಯಂತ ಹಿಂದುಳಿದ ಮತ್ತು ಗಡಿ ಭಾಗದಲ್ಲಿರುವ ಲಕ್ಕೇಪಲ್ಲಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಹಳೆಯ ವಿದ್ಯಾರ್ಥಿಗಳು, ದಾನಿಗಳ ನೆರವಿನಿಂದ ಉತ್ತಮ ಶಾಲೆಯಾಗಿ ರೂಪುಗೊಂಡಿದೆ.

ಶಿಕ್ಷಕರು ಆಸಕ್ತಿ ವಹಿಸಿ ಮನಸ್ಸು ಮಾಡಿದರೆ ಶಾಲೆಯನ್ನು ಹೇಗೆ ರೂಪಿಸಬಹುದು ಎಂಬುದಕ್ಕೆ ಈ ಶಾಲೆ ಉದಾಹರಣೆ. ಮುಖ್ಯ ಶಿಕ್ಷಕ ಟಿ.ಕೆ. ನರಸಿಂಹಪ್ಪ ಶಾಲೆಯ ಅಭಿವೃದ್ಧಿಯ ರೂವಾರಿ. ಕಳೆದ 25 ವರ್ಷಗಳಿಂದ ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 2014ರಲ್ಲೇ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಾಲಾಭಿವೃದ್ಧಿ ಹಾಗೂ ಮೇಲ್ವಿಚಾರಣಾ ಸಮಿತಿ, ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲ ಎನ್ನುವುಂತೆ ಈ ಶಾಲೆ ಇದೆ. ಒಂದರಿಂದ ಐದನೇ ತರಗತಿಯವರೆಗೆ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬ್ಯಾಗ್ ಹಾಗೂ ಅಗತ್ಯವಾದ ಲೇಖನ ಸಾಮಗ್ರಿಗಳನ್ನು ಪ್ರತಿವರ್ಷ ಉಚಿತವಾಗಿ ನೀಡಲಾಗುತ್ತದೆ.

ಶಾಲೆಗೆ ಅಗತ್ಯವಾದ ಕೊಠಡಿಗಳು, ಸುತ್ತಲೂ ಕಾಂಪೌಂಡ್, ಶೌಚಾಲಯ, ನೀರಿನ ಸೌಲಭ್ಯ, ಕೈತೋಟ ಮತ್ತಿತರ ಎಲ್ಲ ಸೌಲಭ್ಯಗಳಿವೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಾದರೂ ಕಂಪ್ಯೂಟರ್, ಪ್ರೊಜೆಕ್ಟರ್, ಟಿವಿ ಸೇರಿದಂತೆ ಕಲಿಕೆಗೆ ಅಗತ್ಯವಾದ ಎಲ್ಲ ಪರಿಕರಗಳನ್ನು ದಾನಿಗಳ ಸಹಕಾರದಿಂದ ಪಡೆಯಲಾಗಿದೆ.

ಗ್ರಾಮದ ವಕೀಲ ವಿಶ್ವನಾಥ್ ಶಾಲೆಗೆ ಸ್ವಂತ ಜಾಗ ನೀಡಿದ್ದಾರೆ. ಜತೆಗೆ ₹1.25 ಲಕ್ಷ ವೆಚ್ಚದಲ್ಲಿ ಉತ್ತಮ ವೇದಿಕೆ ನಿರ್ಮಿಸಿಕೊಟ್ಟಿದ್ದಾರೆ. ದಾನಿಗಳ ನೆರವಿನಿಂದ ಶಾಲೆಯ ಆವರಣದಲ್ಲಿ ಚಿಕ್ಕ ದೇವಾಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಶಾಲೆ ಆವರಣದಲ್ಲಿ ಪರಿಸರಕ್ಕೆ ಹೆಚ್ಚಿನ ಒತ್ತು ನೀಡಿ ಗಿಡಗಳನ್ನು ನೆಟ್ಟು ಹಸಿರು ಶಾಲೆಯನ್ನಾಗಿ ರೂಪಿಸಲಾಗಿದೆ. ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಲಾಗಿದೆ. ಸ್ವಚ್ಛ ಭಾರತ್ ಮಿಷನ್‌ನಿಂದ ಸ್ವಚ್ಛತಾ ಶಾಲೆ ಹಾಗೂ ಪರಿಸರ ಮಿತ್ರ ಶಾಲೆ ಪ್ರಶಸ್ತಿಯ ಗರಿಯೂ ಲಭಿಸಿದೆ. ಶಾಲೆಯ ಕಾರಿಡಾರ್‌ನಲ್ಲಿ ಬಣ್ಣ ಬಣ್ಣದ ಫಲಕಗಳನ್ನು ಬರೆಸಲಾಗಿದೆ. ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ಗ್ರಾಮಸ್ಥರು ಸೇರಿ ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಗ್ರಾಮಾಂತರ ಪ್ರದೇಶದ ಕಿರಿಯ ಪ್ರಾಥಮಿಕ ಶಾಲೆಯಾದರೂ ಇಲಾಖೆ ನಡೆಸುವ ಎಲ್ಲಾ ಕ್ರೀಡಾಕೂಟಗಳು ಸೇರಿದಂತೆ ಎಲ್ಲ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಎನ್. ಯಶ್ವಂತ್ ಈ ವರ್ಷದ ಧಾರ್ಮಿಕ ಪಠಣದ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಶಾಲೆಯ ಹೆಗ್ಗಳಿಕೆಯಾಗಿದೆ.

ಪ್ರತಿಯೊಂದು ಗ್ರಾಮದಲ್ಲೂ ಯುವಕರು ಶಾಲೆಗಳಿಗೆ ಈ ರೀತಿ ಸಹಕಾರ ನೀಡಿದರೆ ಖಂಡಿತ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ. ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂದು ಭಾಷಣ ಮಾಡುವ, ಘೋಷಣೆ ಕೂಗುವ ಜನರು ಒಮ್ಮೆ ಈ ಶಾಲೆಯ ಚಟುವಟಿಕೆಗಳನ್ನು ಗಮನಿಸಿ ಅದರಂತೆ ನಡೆದುಕೊಂಡರೆ ಶಾಲೆಗಳನ್ನು ಮುಚ್ಚುವ ಅವಕಾಶವೇ ಬರುವುದಿಲ್ಲ ಎನ್ನುತ್ತಾರೆ ಗ್ರಾಮದ ಹಿರಿಯರು.

ಪ್ರತಿ ಸರ್ಕಾರಿ ಶಾಲೆಯ ಶಿಕ್ಷಕರು ಗ್ರಾಮಸ್ಥರೊಂದಿಗೆ ವಿಶ್ವಾಸ, ಸಹಕಾರ ಬೆಳೆಸಿಕೊಂಡು ಆಸಕ್ತಿ ವಹಿಸಿದರೆ ಖಂಡಿತ ಖಾಸಗಿ ಶಾಲೆಗಳೊಂದಿಗೆ ಸ್ಪರ್ಧೆ ಮಾಡಬಹುದು. ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಾರೆ. ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಿ ಮುಚ್ಚುವ ಪ್ರಮೇಯವೇ ಬರುವುದಿಲ್ಲ ಎಂದು ಗ್ರಾಮದ ವಿದ್ಯಾರ್ಥಿಗಳ ಪೋಷಕರು ಅಭಿಪ್ರಾಯಪಡುತ್ತಾರೆ.

ಆಟದ ಮೈದಾನದ ಕೊರತೆ: ಶಾಲೆಗೆ ಆಟದ ಮೈದಾನದ ಕೊರತೆ ಇದೆ. ಇರುವ ಮೈದಾನ ಸಾಕಾಗುವುದಿಲ್ಲ. ಪಕ್ಕದ ಜಮೀನುಗಳ ಮಾಲೀಕರ ಜತೆ ಮಾತುಕತೆ ನಡೆಸಲಾಗುತ್ತಿದೆ. ಸ್ವಲ್ಪ ಜಾಗವನ್ನು ಪಡೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮುಖ್ಯ ಶಿಕ್ಷಕ ಟಿ.ಕೆ. ನರಸಿಂಹಪ್ಪ ಹೇಳುತ್ತಾರೆ.

ಉತ್ತಮ ಸಹಕಾರ

ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. 25 ವರ್ಷಗಳಿಂದಲೂ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಅಧಿಕಾರಿಗಳು, ಗ್ರಾಮಸ್ಥರು, ಶಾಲಾಭಿವೃದ್ದಿ ಸಮಿತಿಯ ಸಹಕಾರ ಉತ್ತಮವಾಗಿದೆ. ಇಲಾಖೆಯ ಅಧಿಕಾರಿಗಳು ಕರ್ತವ್ಯವನ್ನು ಗುರುತಿಸಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.

ಟಿ.ಕೆ.ನರಸಿಂಹಪ್ಪ, ಮುಖ್ಯ ಶಿಕ್ಷಕ

ಮತ್ತಷ್ಟು ಸಹಕಾರದ ಭರವಸೆ


ಮುಖ್ಯ ಶಿಕ್ಷಕರು ಶಾಲೆಯನ್ನು ಸ್ವಂತ ಶಾಲೆಯಂತೆ ನಡೆಸುತ್ತಿದ್ದಾರೆ. ಗ್ರಾಮಸ್ಥರ ವಿಶ್ವಾಸವನ್ನು ಗಳಿಸಿ ಮಕ್ಕಳ ದಾಖಲಾತಿಗೂ ಕಾರಣರಾಗಿದ್ದಾರೆ. ನಾವು ಸಹ ನಮ್ಮ ಕೈಲಾದ ಸಹಾಯ ಮತ್ತು ಸಹಕಾರ ಕೊಡುತ್ತಿದ್ದೇವೆ.

ಎಲ್.ವಿ. ಶ್ರೀನಿವಾಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ

ಅಚ್ಚುಮೆಚ್ಚಿನ ಶಾಲೆ

ಶಾಲೆಗೆ ಬರಲು ಖಷಿಯಾಗುತ್ತದೆ. ಪ್ರತಿನಿತ್ಯ ಶಾಲೆ ತೆರೆಯುವುದಕ್ಕೆ ಕಾಯುತ್ತಿರುತ್ತೇವೆ. ಮುಖ್ಯ ಗುರುಗಳು ನಮಗೆ ದೇವರಂತೆ. ಪುಟ್ಟ ಮಕ್ಕಳನ್ನು ಪ್ರೀತಿಯಿಂದ ಓಲೈಸುತ್ತಾರೆ. ಶಾಲೆ ನಮಗೆ ಅಚ್ಚುಮೆಚ್ಚಾಗಿದೆ.

ಎನ್.ಯಶ್ವಂತ್, ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT