ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಮತ್ತೊಂದು ಚುನಾವಣೆ ದಾಳ ಎತ್ತಿನಹೊಳೆ!

ಆಡಳಿತ–ವಿರೋಧ ಪಕ್ಷಗಳ ನಾಯಕರಿಂದ ಪರ–ವಿರೋಧ ವಾಕ್ಸಮರ
Last Updated 29 ನವೆಂಬರ್ 2022, 5:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: 2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗೆ ಎತ್ತಿನ ಹೊಳೆ ಯೋಜನೆಯು ಮತ್ತೆ ರಾಜಕೀಯ ದಾಳವಾಗಿ ಬಳಕೆಯಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಜಿಲ್ಲೆಗೆ ಭೇಟಿ ನೀಡುವ ರಾಜಕೀಯ ನಾಯಕರೆಲ್ಲ ಈ ವಿಚಾರವನ್ನೇ ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದಾರೆ. ಘಟಾನುಘಟಿ ನಾಯಕರಾದಜೆಡಿಎಸ್‌ನ ಎಚ್‌.ಡಿ. ದೇವೇಗೌಡರು, ಎಚ್‌.ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ನ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಡಾ.ಕೆ. ಸುಧಾಕರ್– ಹೀಗೆಜಿಲ್ಲೆಯ ಭೇಟಿ ನೀಡುವ ಆಡಳಿತ ಮತ್ತು ವಿರೋಧ ‍ಪಕ್ಷಗಳ
ನಾಯಕರ ಮಾತುಗಳಲ್ಲಿಪದೇ ಪದೇ ಎತ್ತಿನಹೊಳೆ ಯೋಜನೆ ಇಣುಕುತ್ತಿದೆ. ‌ಯೋಜನೆಯ ಕ್ರೆಡಿಟ್‌ಗಾಗಿ ವಾಕ್ಸಮರಗಳು ತಾರಕಕ್ಕೇರಿವೆ.

ಜಿಲ್ಲೆಗೆ ಇಲ್ಲಿಯವರೆಗೂ ಎತ್ತಿನಹೊಳೆ ನೀರು ಹರಿದಿಲ್ಲ. ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎತ್ತಿನಹೊಳೆಯ ವಿಚಾರವಾಗಿ ರಾಜಕಾರಣಿಗಳ ಮಾತಿನ ಹರಿವು ಈಗಾಗಲೇ ಜೋರಾಗಿದೆ. ಮುಖ್ಯಮಂತ್ರಿ, ವಿರೋಧ ಪಕ್ಷಗಳ ನಾಯಕರು, ಸಚಿವರಾದಿಯಾಗಿ ಜಿಲ್ಲೆಗೆ ಭೇಟಿ ನೀಡುತ್ತಿರುವ ಎಲ್ಲರೂ ರಾಜಕೀಯಕ್ಕಾಗಿ ‘ಎತ್ತಿನಹೊಳೆ’ ಯೋಜನೆಯ ಚುಂಗು ಹಿಡಿದಿದ್ದಾರೆ.ಎತ್ತಿನಹೊಳೆ ವಿಚಾರ ಚುನಾವಣೆಯಲ್ಲಿ ರಾಜಕೀಯ ವಿಷಯವಾಗಲಿದೆ ಎನ್ನುವುದು ಈಗಾಗಲೇ ಖಚಿತವಾಗಿದೆ.

ಪಶ್ಚಿಮಾಭಿಮುಖವಾಗಿ ಹರಿಯುವ ಎತ್ತಿನಹೊಳೆಯ 24.01 ಟಿಎಂಸಿ ಅಡಿ ನೀರನ್ನು ತಿರುಗಿಸಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ 29 ತಾಲ್ಲೂಕುಗಳ 38 ಪಟ್ಟಣ ಪ್ರದೇಶ ಮತ್ತು 6,657 ಗ್ರಾಮಗಳ ಜನರಿಗೆ ಕುಡಿಯುವ ನೀರು ಒದಗಿಸುವುದು ಯೋಜನೆಯ ಗುರಿ.

2012ರಲ್ಲಿ ₹ 8,323.50ಕೋಟಿ ವೆಚ್ಚದ ಯೋಜನಾ ಅಂದಾಜಿಗೆ ಅನುಮೋದನೆ ನೀಡಲಾಗಿತ್ತು. 2014ರಲ್ಲಿ
ಯೋಜನಾ ವೆಚ್ಚವನ್ನು ₹ 12,912.36 ಕೋಟಿಗೆ ಹೆಚ್ಚಿಸಲಾಯಿತು. ವಿಳಂಬದ ಕಾರಣ ಯೋಜನಾ ವೆಚ್ಚ ಏರುತ್ತಲೇ ಇದೆ. ಎತ್ತಿನಹೊಳೆ ಯೋಜನೆಯ ಕಾಮಗಾರಿ ವೆಚ್ಚ ಈಗ ₹ 24,000 ಕೋಟಿಗೆ ಹೆಚ್ಚಿದೆ.

ಏಪ್ರಿಲ್‌ನಲ್ಲಿ ಜನತಾ ಜಲಧಾರೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೆರೇಸಂದ್ರಕ್ಕೆ ಭೇಟಿ ನೀಡಿದ್ದ ಜೆಡಿಎಸ್ ವರಿಷ್ಠಚ್‌.ಡಿ.ದೇವೇಗೌಡರು, ‘ಎತ್ತಿನಹೊಳೆ ನೀರು ಬಂದರೆ ನಿಮ್ಮ ಪುಣ್ಯ’ ಎಂದಿದ್ದರು.ಈ ಹಿಂದೆ ಜಿಲ್ಲೆಗೆ ಬಂದಿದ್ದಾಗ ಬಸವರಾಜ ಬೊಮ್ಮಾಯಿ, ‘ನಾನು ಜಲಸಂಪನ್ಮೂಲ ಸಚಿವನಾಗಿದ್ದ ವೇಳೆ ಈ ಯೋಜನೆಗೆ ಅನುಮೋದನೆ ನೀಡಿದ್ದೆ. ಜಿಲ್ಲೆಗೆ ನೀರು ಹರಿಸಿಯೇ ಸಿದ್ಧ’ ಎಂದು ಹೇಳಿದ್ದರು. ಹಣ ಕೊಟ್ಟಿದ್ದು ನಾವು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ನುಡಿಯುತ್ತಿದ್ದಾರೆ.

ಹೀಗೆ ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆ ಪ್ರತಿ ಚುನಾವಣೆಗಳಲ್ಲಿ ಚರ್ಚೆಯ ಮತ್ತು ಚುನಾವಣೆಯ ವಿಷಯವಾಗುತ್ತಿದೆ. ಈಗ ಗೌರಿಬಿದನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಚುನಾವಣೆಯ ವೇಳೆಗೆ ಜಿಲ್ಲೆಗೆ ನೀರು ಬರುವುದೇ ಎನ್ನುವ ಕಾತರ ಜನರದ್ದಾಗಿದೆ.

ಈ ವರ್ಷ ನೀರು ಜಿಲ್ಲೆಗೆ ಹರಿಯುತ್ತದೆ ಎಂದು ಪ್ರತಿ ವರ್ಷರಾಜಕೀಯ ನಾಯಕರು ಹೇಳುತ್ತಲೇ ಯೋಜನೆ
ಜಾರಿಯಾಗಿ ಒಂಬತ್ತು ವರ್ಷಗಳು ಪೂರ್ಣವಾಗಿವೆ. ಹೀಗೆ ಯೋಜನಾ ವೆಚ್ಚ ಹೆಚ್ಚಳ, ನೀರು ಹರಿಯುವ ಬಗ್ಗೆ ಪರ–ವಿರೋಧದ ವಾಕ್ಸಮರವು ಮತ್ತೊಂದು ವಿಧಾನಸಭಾ ಚುನಾವಣೆಗೆ ವಿಷಯವಸ್ತುವಾಗುವುದು ನಿಚ್ಚಳವಾಗುತ್ತಿದೆ.

ಮುಗಿಯದ ಬಫರ್ ಡ್ಯಾಂ ಗೊಂದಲ

ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ಗಡಿಭಾಗದಲ್ಲಿ ನಿರ್ಮಾಣವಾಗಲಿರುವ ಬೈರಗೊಂಡ್ಲು ಜಲಾಶಯದ ವಿವಾದ ಸದ್ಯಕ್ಕೆ ಪರಿಹಾರ ಆಗುವ ಲಕ್ಷಣಗಳಿಲ್ಲ. ಬೈರಗೊಂಡ್ಲು ಜಲಾಶಯ ನಿರ್ಮಾಣವಾದರೆ ಮಾತ್ರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆ ನೀರು ಹರಿದಂತೆ ಎನ್ನುವ ಮಾತಿದೆ.

ಬೈರಗೊಂಡ್ಲುವಿನಲ್ಲಿ ನಿರ್ಮಿಸುವ ಬಫರ್ ಡ್ಯಾಂಗೆ ಇನ್ನೂ ಭೂಸ್ವಾಧೀನವಾಗಿಲ್ಲ. ಜಲಾಶಯ ನಿರ್ಮಾಣಕ್ಕೆ ಬೇಕಿರುವ ಜಮೀನು ಹಾಗೂ ಪರಿಹಾರ ಮೊತ್ತದ ಗೊಂದಲ ಯೋಜನೆಯ ಪಾಲಿಗೆ ಅಡ್ಡಿಯಾಗಿ‌ದೆ. ಡ್ಯಾಂ ನಿರ್ಮಾಣವಾಗದಿದ್ದರೆ ಪೂರ್ಣ ಪ್ರಮಾಣದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗೆ ನೀರು ಹರಿಯಲು ಸಾಧ್ಯವಿಲ್ಲ ಎನ್ನುವ ವಾದವೂ ಇದೆ.

‘ಎತ್ತಿನಹೊಳೆ ಪೈಪ್‌ನಲ್ಲಿ ಆನೆ ತರುತ್ತಾರೆ‌’

ಎರಡು ವರ್ಷಗಳಲ್ಲಿ ಎತ್ತಿನಹೊಳೆ ನೀರು ಹರಿಸುತ್ತೇವೆ ಎಂದರು. ಯೋಜನೆಯ ವೆಚ್ಚ ₹ 13 ಸಾವಿರ ಕೋಟಿಯಿಂದ ₹24 ಸಾವಿರ ಕೋಟಿಗೆ ಹೆಚ್ಚಿದೆ. ಪೈಪ್ ಲೈನ್ ಎಳೆದಾಗ ಒಳ್ಳೆಯ ಕಮಿಷನ್ ಸಿಗುತ್ತದೆ. ಕಮಿಷನ್‌ಗಾಗಿ ಈ ಕಾರ್ಯಕ್ರಮಗಳು ಮಾಡಿದ್ದಾರೆ. ಇಂದಿಗೂ ಈ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಬಂದಿಲ್ಲ. ಸಕಲೇಶಪುರ, ಆಲೂರು ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಿದೆ. ಆ ಆನೆಗಳನ್ನು ಪೈಪ್‌ಲೈನ್ ಮೂಲಕ ಇಲ್ಲಿಗೆ ತರುತ್ತಾರೆ.

-ಎಚ್‌.ಡಿ.ಕುಮಾರಸ್ವಾಮಿ,ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ಆಯೋಗದಿಂದ ವಿಮರ್ಶೆ ನಡೆಯಲಿ

ಎತ್ತಿನಹೊಳೆ ಯೋಜನೆಗೆ ಕಳೆದ 12 ವರ್ಷಗಳಿಂದ ಎಲ್ಲ ರಾಜಕೀಯ ಪಕ್ಷಗಳು ಜೋತು ಬಿದ್ದಿವೆ. ಆದರೆ ಕೇಂದ್ರ ಜಲ ಆಯೋಗವು ಈ ಯೋಜನೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಈ ಹಿಂದೆಯೇ ಪತ್ರ ಬರೆದು ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಬರುವುದಿಲ್ಲ ಎಂದಿತ್ತು. ಈಗ ಮತ್ತೊಮ್ಮೆ ಪ್ರಧಾನಿ ಅವರು ಯೋಜನೆಯ ಬಗ್ಗೆ ಕೇಂದ್ರ ಜಲ ಆಯೋಗದಿಂದ ವಿಮರ್ಶೆ ನಡೆಸಬೇಕು.

- ಆರ್.ಆಂಜನೇಯ ರೆಡ್ಡಿ,ಅಧ್ಯಕ್ಷ, ಶಾಶ್ವತ ನೀರಾವರಿ ಹೋರಾಟ ಸಮಿತಿ

2023ಕ್ಕೆ ನೀರು ಖಚಿತ

ಜಿಲ್ಲೆಗೆ 2023ಕ್ಕೆ ಎತ್ತಿನಹೊಳೆ ಯೋಜನೆಯಡಿ ನೀರು ಬರುವುದು ಖಚಿತ. ಈ ಭಾಗದ ಜನರ ನೀರಿನ ಸಮಸ್ಯೆ ನೀಗಿಸಲು ಎತ್ತಿನಹೊಳೆ ಯೋಜನೆಯ ಕಾಮಗಾರಿಗೆ ₹ 23 ಸಾವಿರ ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಶೀಘ್ರ ನಿರ್ಧಾರ ಕೈಗೊಳ್ಳಲಿದ್ದಾರೆ.

- ಡಾ.ಕೆ.ಸುಧಾಕರ್,ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT