ಶನಿವಾರ, ಮಾರ್ಚ್ 6, 2021
28 °C

ಗೋವುಗಳಿಗೆ ವಿಶೇಷ ಅಲಂಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಗ್ರಾಮೀಣ ಸೊಗಡಿನೊಂದಿಗೆ ತಳಕು ಹಾಕಿಕೊಂಡಿರುವ ಮಕರ ಸಂಕ್ರಾತಿಯನ್ನು ನಗರ ಹಾಗೂ ತಾಲ್ಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಮನೆಗಳಲ್ಲಿ ಮಹಿಳೆಯರು ಬೆಳಿಗ್ಗೆ ಎಳ್ಳೆಣ್ಣೆಸ್ನಾನ ಮಾಡಿ, ತಳಿರು ತೋರಣಗಳಿಂದ ಸಿಂಗರಿಸುವುದು, ಮನೆಗಳ ಮುಂದೆ ಚಿತ್ತಾಕರ್ಷಣೆಯ ರಂಗೋಲಿಗಳನ್ನು ಬಿಡಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಜನರು ಮನೆಗಳಲ್ಲಿ ಭಕ್ತಿಯಿಂದ ವಿಶೇಷ ಪೂಜೆ, ಗೋಪೂಜೆಗಳನ್ನು ಮಾಡಿದರು. ಎಳ್ಳು, ಕಡಲೆಬೀಜ, ಕೊಬ್ಬರಿ, ಅಚ್ಚುಬೆಲ್ಲ, ಸಕ್ಕರೆ ಅಚ್ಚು, ಹುರಿಗಡಲೆ ಸೇರಿಸಿ ತಯಾರಿಸಿದ್ದ ಎಳ್ಳು-ಬೆಲ್ಲ, ಕಬ್ಬು, ಎಲಚಿಹಣ್ಣುಗಳು ಮತ್ತು ನವಧಾನ್ಯಗಳನ್ನು ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸಿದರು.

ಗೋವುಗಳಿಗೆ ವಿಶೇಷ ಅಲಂಕಾರ, ಪೂಜೆ ಮಾಡಿ ಮೆರವಣಿಗೆ ಮಾಡುವ ಮೂಲಕ ಸಂಭ್ರಮಿಸಿದರು. ಕೆಲವು ಮನೆಗಳಲ್ಲಿ ಮಕ್ಕಳಿಗೆ ಆರತಿ ಮಾಡಿ ಹಿರಿಯರ ಆಶೀರ್ವಾದ, ಹಾರೈಕೆ ಸಾಮಾನ್ಯವಾಗಿತ್ತು. ಗ್ರಾಮೀಣ ಭಾಗಗಳಲ್ಲಿ ಕೆಲವು ಪಿತೃಗಳಿಗೆ ತರ್ಪಣಗಳನ್ನು ನೀಡಿ ಪೂರ್ವಿಕರಿಗೆ ನಮಿಸಿದರು. ಸಂಕ್ರಾಂತಿ ಸಂಭ್ರಮದ ಹೆಸರಿನಲ್ಲಿ ಕೆಲವು ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂದೇಶವನ್ನು ಸಾರುವ ಮಕರಸಂಕ್ರಾಂತಿ ಶ್ರದ್ಧಾ ಭಕ್ತಿಗಳಿಂದ ಆಚರಿಸಿ ಸಂಭ್ರಮಿಸಿದರು.

ಸಂಕ್ರಾಂತಿಯ ವಿಶೇಷವಾಗಿ ಜನರು ದೇವಾಲಯಗಳಿಗೆ ಎಡತಾಕುತ್ತಿದ್ದರು. ಯಾವ ದೇವಾಲಯದಲ್ಲಿ ನೋಡಿದರೂ ಭಕ್ತರ ಉದ್ದ ಉದ್ದನೆಯ ಸಾಲುಗಳು ಕಾಣುತ್ತಿದ್ದವು. ದೇವಾಲಯಗಳಲ್ಲಿ ವಿಶೇಷವಾಗಿ ಶಿವನದ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಸಂಜೆ ಮಹಿಳೆಯರು ಹೊಸ ಉಡುಗೆಗಳೊಂದಿಗೆ ಮನೆ ಮನೆಗೂ ತೆರಳಿ ಎಳ್ಳು ಬೀರಿದರು. ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂಬ ಸಂದೇಶವನ್ನು ಸಾರಿದರು. ಹೀಗೆ ನಗರ ಪ್ರದೇಶದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಡಗರ ಸಂಭ್ರಮದ ವಾತಾವರಣ ಉಂಟಾಗಿತ್ತು. ಕೆಲವು ಕಡೆ ಸಂಘ ಸಂಸ್ಥೆಗಳಿಂದ ರಂಗೋಲಿ ಸ್ಪರ್ಧೆ, ಗಾಯನ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಜೀವನದ ಅವಿಭಾಜ್ಯ ಅಂಗವಾದ ದನಕರುಗಳನ್ನು ತೊಳೆದು ಸಿಂಗಾರ ಮಾಡಿ ಪೂಜಿಸಿ ಮೆರವಣಿಗೆ ಮಾಡಿದರು. ಸಂಜೆ ಬೆಂಕಿಯ ಮೇಲೆ ಹಾಯಿಸಿದರು. ಯುವಜನರು ಬೆಂಕಿಯ ಪಂಜು ಭರಾಟೆಗಳನ್ನು ತಿರುಗಿಸುವುದರ ಮೂಲಕ ಸಂಭ್ರಮಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.