ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದು ಬೀಳುವಂತಿರುವ ಹಳೇ ಧರ್ಮಛತ್ರದಲ್ಲಿ 18 ಕುಟುಂಬಗಳ ವಾಸ!

ಕಟ್ಟಡ ಕುಸಿದು ಬೀಳುವ ಆತಂಕ: ಎರಡು ದಶಕದಿಂದಲೂ ಸ್ವಂತ ಸೂರಿಲ್ಲ
Last Updated 17 ಮೇ 2021, 2:47 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ಹೊರವಲಯದ ಕೋನಪ್ಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪುರಾತನವಾದ ಪಾಳುಬಿದ್ದಿರುವ ಧರ್ಮಛತ್ರದಲ್ಲಿ 18 ಕುಟುಂಬಗಳು ಕಳೆದ 2 ದಶಕಗಳಿಂದ ನಿಕೃಷ್ಟ ಜೀವನ ನಡೆಸುತ್ತಿವೆ. 21 ನೇ ಶತಮಾನದಲ್ಲೂ ಈ ಕುಟುಂಬಗಳು ವಿದ್ಯುತ್ ಬೆಳಕು ಕಂಡಿಲ್ಲ. ಇಂದಿಗೂ ಸೀಮೆ ಎಣ್ಣೆ ದೀಪಗಳ ಬೆಳಕಿನಲ್ಲೇ ಜೀವನ ದೂಡುತ್ತಿದ್ದಾರೆ.

ತುಂಬಾ ಶಿಥಿಲಗೊಂಡಿರುವ ಹಳೆಯ ಧರ್ಮಛತ್ರ. ಯಾವಾಗ ಕುಸಿದು ಬೀಳುತ್ತದೋ ಎಂಬ ಭಯದಲ್ಲೇ ಬದುಕು ಸವೆಸುತ್ತಿದ್ದಾರೆ. ನಗರಕ್ಕೆ ಕೂಗಳತೆಯಲ್ಲಿದ್ದರೂ ಇಂದಿಗೂ ಕನಿಷ್ಠ ಸೌಲಭ್ಯ ತಲುಪಿಲ್ಲ.

ಇಲ್ಲಿನ ಯಾವ ಕುಟುಂಬಕ್ಕೂ ಮನೆಯಾಗಲಿ, ಜಮೀನಾಗಲಿ ಇಲ್ಲ. ಕೂಲಿನಾಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ರಾತ್ರಿಯಾದರೆ ಜೀವವನ್ನು ಕೈಯಲ್ಲಿ ಹಿಡಿದು ನಿದ್ದೆ ಮಾಡುವ ಸ್ಥಿತಿ. ಹರಕಲು ಗೋಡೆಗಳಿಗೆ ಪೇಪರ್ ಕಟ್ಟಿಕೊಂಡು, ಅಲ್ಪ ಸ್ವಲ್ಪ ರಿಪೇರಿ ಮಾಡಿಕೊಂಡು ಜೀವನ ನಡೆಸುತ್ತೇವೆ. ಬೆಳಕನ್ನೇ ಕಾಣದ ಹಾಳು ಕೊಂಪೆಯಾಗಿರುವುದರಿಂದ ಹಾವು, ಚೇಳುಗಳ ಕಾಟ.ಮಳೆಗಾಲದಲ್ಲಿ ರಾತ್ರಿಯೆಲ್ಲ ಜಾಗರಣೆ ಮಾಡುತ್ತೇವೆ ಎನ್ನುತ್ತಾರೆ ಅಲ್ಲಿನ ನಿವಾಸಿ ಸೈಯದ್ ಪಾಷಾ.

20 ವರ್ಷಗಳಿಂದ ಇಲ್ಲಿ ನೆಲೆಸಿದ್ದರೂ ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ಕಡೆ ಕಣ್ಣು ಹಾಯಿಸಿಲ್ಲ. ಮತದಾನದ ಹಕ್ಕು ನೀಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಲೋಕಸಭೆ ಚುನಾವಣೆಯವರೆಗೂ ಪ್ರತಿ ಚುನಾವಣೆಯಲ್ಲೂ ರಾಜಕೀಯ ನಾಯಕರು ಮತಯಾಚನೆಗೆ ಬರುತ್ತಾರೆ. ಸರ್ಕಾರಿ ಯೋಜನೆಯಲ್ಲಿ ಮನೆ ಕಟ್ಟಿಸಿಕೊಡುತ್ತೇವೆ ಎಂದು ಆಶ್ವಾಸನೆ ನೀಡುತ್ತಾರೆ. ಚುನಾವಣೆಯ ನಂತರ ಈ ಕಡೆ ಸುಳಿಯುವುದೇ ಇಲ್ಲ ಎಂದು ನೊಂದು ನುಡಿಯುತ್ತಾರೆ.

ಇಲ್ಲಿಯ ಹೆಚ್ಚಿನ ಜನರು ಆರೋಗ್ಯ ತೊಂದರೆ ಇದೆ. ಕೆಲವರಿಗೆ ಪಡಿತರ ಕಾರ್ಡ್ ಇದೆ, ಕೆಲವರಿಗೆ ಇಲ್ಲ. ಪ್ರತಿದಿನ ನಗರಕ್ಕೆ ಬಂದು ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿವೆ. ಕೊರೊನಾ ಲಾರ್‌ಡೌನ್‌ನಿಂದ ಕೂಲಿ ಕೆಲಸವೂ ಇಲ್ಲದೆ ಹಸಿವಿನಿಂದ ಸಾಯುವ ಸ್ಥಿತಿ ಎದುರಾಗಿ ಎಂದು ನೋವು ಹಂಚಿಕೊಳ್ಳುತ್ತಾರೆ.

ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ಆಹಾರದ ಕಿಟ್‌ಗಳನ್ನು ನೀಡಲಾಗಿತ್ತು. ಈ ವರ್ಷ ಅದೂ ಇಲ್ಲ. ದಾನಿಗಳು, ಸಂಘಸಂಸ್ಥೆಗಳು ಈ ಅಲೆಮಾರಿಗಳ ಕುಟಂಬಗಳ ನೆರವಿಗೆ ಧಾವಿಸಿದರೆ, ಅವರ ಬದುಕಿಗೆ ಸಹಾಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT