ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನ ಹೊಳೆ: ಅವೈಜ್ಞಾನಿಕ ಕಾಮಗಾರಿಗೆ ರೈತರ ತಡೆ

Last Updated 8 ಜನವರಿ 2021, 6:25 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ಡಿ.ಪಾಳ್ಯ ಹೋಬಳಿಯ ಜೋಗಿರೆಡ್ಡಿಹಳ್ಳಿ ಜಮೀನು ಒಂದರಲ್ಲಿ ಎತ್ತಿನಹೊಳೆ ಪೈಪ್ ಲೈನ್ ಕಾಮಗಾರಿಯನ್ನು ರೈತರ ಅನುಮತಿಯಿಲ್ಲದೆ ಹಾಗೂ ಸರ್ಕಾರದಿಂದ ಯಾವುದೇ ಆದೇಶವಿಲ್ಲದೆ ಕಾಮಗಾರಿ ನಡೆಯುತ್ತಿದ್ದನ್ನು ಕಂಡು ರೈತ ಮುಖಂಡರು ಗುರುವಾರ ತಡೆದು, ಪ್ರತಿಭಟನೆ ಮಾಡಿದರು.

ಪ್ರಜಾ ಸಂಘರ್ಷ ಸಮಿತಿಯ ಜಿಲ್ಲಾ ಸಹ ಸಂಚಾಲಕ ಆರ್.ಎನ್.ರಾಜು ಮಾತನಾಡಿ, ‘ಈ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಸರ್ಕಾರದ ಅಧಿಸೂಚನೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ಯಾವುದೇ ಅನುಮತಿಯಿಲ್ಲ. ಆದರೂ ಅಧಿಕಾರಿಗಳು ಅವೈಜ್ಞಾನಿಕವಾಗಿ ರೈತರ ಜಮೀನಿನಲ್ಲಿ ಪೈಪ್ ಲೈನ್ ಅಳವಡಿಸುವುದು ಸರಿಯಲ್ಲ. ನೆಪ ಮಾತ್ರಕ್ಕೆ ರೈತರ ಬಳಿ ಎಂ.ಆರ್‍.ಎಸ್ ಎಡಿಯು ಇನ್‍ಫ್ರಾಸ್ಟ್ರಕ್ಚರ್ ಕಂಪನಿ ಹೆಸರಿಗೆ ದೌರ್ಜನ್ಯವಾಗಿ ₹100 ಬಾಂಡ್ ಪೇಪರ್‌ನಲ್ಲಿ ಸಹಿ ಹಾಕಿಸಿಕೊಂಡು ಕಾಮಗಾರಿ ಮಾಡುತ್ತಿದ್ದಾರೆ. ಜಿಲ್ಲಾ ಆಡಳಿತ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳಿಗೆ ರೈತರಿಗೆ ಆಗುತ್ತಿರುವ ವಂಚನೆ ಬಗ್ಗೆ ಕಿಂಚತ್ತು ಕಾಳಜಿ ಇಲ್ಲದೆ ಜಾಣ ಕುರುಡು ನೀತಿ ಅನುಸರಣೆ ಮಾಡುತ್ತಿದ್ದು, ಇದನ್ನು ಪ್ರಶ್ನೆ ಮಾಡುವ ಹಕ್ಕು ಇಲ್ಲದಂತಾಗಿದೆ. ರೈತನಿಗೆ ಇರುವ ಅಲ್ಪಸ್ವಲ್ಪ ಜಮೀನನ್ನು ಇವರು ಸ್ವಾಧೀನ ಮಾಡಿಕೊಂಡರೆ ಮುಂದೆ ಇವರ ಗತಿ ಏನು’ ಎಂದು ಪ್ರಶ್ನೆ ಮಾಡಿದರು.

ನಗರ ಯೋಜನಾ ಪ್ರಾಧಿಕಾರದ ನಿವೃತ್ತ ಜಂಟಿ ನಿರ್ದೇಶಕ ರಘುನಾಥರೆಡ್ಡಿ ಮಾತನಾಡಿ, ‘ಎತ್ತಿನ ಹೊಳೆ ಯೋಜನೆಯ ಕಾಮಗಾರಿ ಅವೈಜ್ಞಾನಿಕವಾಗಿ ಕೂಡಿದ್ದು, ಇದು ಸರ್ಕಾರದ ಯಾವುದೇ ಅನುಮತಿ ಇಲ್ಲದೇ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳ ಕೈಗೊಂಬೆಗಳಾಗಿ ವರ್ತಿಸುತ್ತಿದ್ದಾರೆ. ತಾವು ರೈತರ ಮಕ್ಕಳು ಎಂಬುವುದನ್ನು ಮರೆತು ರೈತರಿಗೆ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ’ ಎಂದರು.

ವಿಶ್ವೇಶ್ವರಯ್ಯ ಜಲ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನಿರಂಜನ್, ಉಪ ತಹಸೀಲ್ದಾರ್ ವೆಂಕಟರಾಮರಾವ್, ಕಂದಾಯ ನಿರೀಕ್ಷಕ ಯೋಗೀಶ್ ಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರೈತರ ಅಹವಾಲು ಸ್ವೀಕರಿಸಿ ಕಾಮಗಾರಿಯನ್ನು ಸ್ಥಗಿತಗೊಳಿಸಿದರು. ಮುಂದಿನ ವಾರ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ರೈತರ ಅನುಮತಿ ಪಡೆದು ಕಾಮಗಾರಿ ಮುಂದುವರೆಸುವುದಾಗಿ ಭರವಸೆ ನೀಡಿದರು.

ರೈತ ಮುಖಂಡರಾದ ಗುಂಡಾಪುರ ಲೋಕೇಶ್‍ಗೌಡ, ರಾಮಕೃಷ್ಣ, ರಂಗನಾಥಗೌಡ, ಚಿಗಟಗೆರೆ ಶ್ರೀನಿವಾಸ್, ಸಾಲಾರ್‍ಖಾನ್, ಗಂಗಪ್ಪ, ಭರತ, ಅಶ್ವಥ್ಥಪ್ಪ, ನರಸಿಂಹಮೂರ್ತಿ, ವೆಂಕಟೇಶ್, ರಘುನಾಥ್‍ಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT