ಬುಧವಾರ, ಆಗಸ್ಟ್ 17, 2022
26 °C

ತಾಲ್ಲೂಕು ಕಚೇರಿಗೆ ರೈತರ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ತಾಲ್ಲೂಕಿನ ಕೆರೆಗಳಿಗೆ ಕೆ.ಸಿ. ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ನೀರು ಹರಿಸುವುದು ಸೇರಿದಂತೆ ಭೂಸುಧಾರಣೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಕೆಪಿಟಿಸಿಎಲ್ ಖಾಸಗೀಕರಣವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಜೆ.ವಿ. ರಘುನಾಥರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಲು ಹೊರಟಿರುವ ಕಾಯ್ದೆಗಳಿಂದ ರೈತರು ಇರುವ ಅಲ್ಪಸ್ವಲ್ಪ ಜಮೀನುಗಳನ್ನು ಕಳೆದುಕೊಂಡು ಬೀದಿಗೆ ಬರಬೇಕಾಗುತ್ತದೆ ಎಂದು ದೂರಿದರು.

ರೈತರು, ಸಣ್ಣ ಹಿಡುವಳಿದಾರರನ್ನು ರಕ್ಷಣೆ ಮಾಡಲು ಭೂಸುಧಾರಣೆ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ರೈತರಲ್ಲದವರು ಭೂಮಿ ಕೊಳ್ಳುವುದನ್ನು ನಿರ್ಬಂಧಿಸಲಾಗಿತ್ತು. ತಿದ್ದುಪಡಿ ಮಾಡುವ ಮೂಲಕ ನಿರ್ಬಂಧ ರದ್ದುಪಡಿಸಿ ಯಾರು ಬೇಕಾದರೂ ಭೂಮಿ ಕೊಳ್ಳಬಹುದು ಎಂಬ ನೀತಿಯು ರೈತರಿಗೆ ಮಾರಕವಾಗುತ್ತದೆ ಎಂದು ಆರೋಪಿಸಿದರು.

ಮುಖಂಡ ಕೆ. ವೆಂಕಟರಾಮಯ್ಯ ಮಾತನಾಡಿ, ಕೆಪಿಟಿಸಿಎಲ್ ಖಾಸಗೀಕರಣಗೊಳಿಸುವ ಹುನ್ನಾರವನ್ನು ಕೈಬಿಡಬೇಕು. ಖಾಸಗಿ ವ್ಯಕ್ತಿಗಳಿಗೆ ನೀಡಿದರೆ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ರೈತರ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ನಿಲ್ಲಿಸುತ್ತಾರೆ. ವಿದ್ಯುತ್ ದರ ಏರಿಕೆ ಮಾಡುತ್ತಾರೆ. ವಿದ್ಯುತ್‌ ಪರಿವರ್ತಕ, ಸಂಪರ್ಕ ತಂತಿಗಳು ಸೇರಿದಂತೆ ಎಲ್ಲಕ್ಕೂ ಶುಲ್ಕ ವಿಧಿಸುತ್ತಾರೆ. ನೌಕರರ ಉದ್ಯೋಗಕ್ಕೂ ಕುತ್ತು ಬರುತ್ತದೆ ಎಂದು ಎಚ್ಚರಿಸಿದರು.‌

ತಾಲ್ಲೂಕನ್ನು ಸತತವಾಗಿ ಬರಗಾಲ ಆವರಿಸುತ್ತಿದೆ. ಕೆರೆಗಳಿಗೆ ನೀರು ತುಂಬಿಸಲು ರೂಪಿಸಿರುವ ಕೆ.ಸಿ. ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ಯೋಜನೆಯಡಿ ತಾಲ್ಲೂಕಿಗೆ ಅನ್ಯಾಯವಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆಸಿ ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮುಖಂಡರಾದ ಬಿ.ವಿ. ಶ್ರೀರಾಮರೆಡ್ಡಿ, ಎಸ್. ವೆಂಕಟರೆಡ್ಡಿ, ನಾರಾಯಣಸ್ವಾಮಿ, ದೇವರೆಡ್ಡಿ, ರಾಮಚಂದ್ರಪ್ಪ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.