ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಖಂಡಿಸಿ ರೈತ ಸಂಘ ಪ್ರತಿಭಟನೆ

Last Updated 28 ಜುಲೈ 2022, 4:56 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಹಾಲು ಹಾಗೂ ಹಾಲಿನ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ಹಾಕಿರುವುದನ್ನು ಖಂಡಿಸಿ ರಾಜ್ಯ ಪ್ರಾಂತ ರೈತ ಸಂಘ ಹಾಗೂ ರೈತ ಸಂಘ (ಪುಟ್ಟಣ್ಣಯ್ಯ ಬಣ)ದ ಮುಖಂಡರು, ಕಾರ್ಯಕರ್ತರು ಬುಧವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಟ್ಟಣದ ಸುಂದರಯ್ಯ ಭವನದಿಂದ ಹೊರಟ ಪ್ರತಿಭಟನಾಕಾರರು ಮುಖ್ಯರಸ್ತೆಯಲ್ಲಿ ಸಂಚರಿಸಿ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಮೆರವಣಿಗೆ ಮಾಡಿದರು.

ರಾಜ್ಯ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಪಿ.ಮಂಜುನಾಥ ರೆಡ್ಡಿ ಮಾತನಾಡಿ, ‘ಕೇಂದ್ರ ಆರ್ಥಿಕ ಸಚಿವೆ ನಿರ್ಮಲ ಸೀತಾರಾಮನ್ ಅಧ್ಯಕ್ಷತೆಯಲ್ಲಿ 2022ರ ಜಿಎಸ್‌ಟಿ ಸಮಾವೇಶದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಹಾಗೂ ಯಂತ್ರೋಪಕರಣಗಳ ಮೇಲೆ ತೆರಿಗೆ ಹಾಕಿದ್ದಾರೆ. ಹಾಲು, ಹಾಲಿನ ಉತ್ಪನ್ನಗಳ ಮೇಲೆ ಶೇ 8 ರಿಂದ 12 ರವರೆಗೆ ಹಾಗೂ ಯಂತ್ರೋಪಕರಗಳ ಮೇಲೆ ಶೇ 12 ರಿಂದ 18 ರಷ್ಟು ಜಿಎಸ್‍ಟಿ ಹಾಕಲು ನಿರ್ಣಯಿಸಿದ್ದಾರೆ. ದೇಶದಲ್ಲಿ 9 ಕೋಟಿ ಹಾಲು ಉತ್ಪಾದಕರ ಕುಟುಂಬಗಳ ಮೇಲೆ 2 ರೀತಿಯ ತೆರಿಗೆಗಳ ಭಾರ ಹೆಚ್ಚಾಗಿದೆ. ಇದರಿಂದ ಸಾಮಾನ್ಯ ಕೃಷಿ ಕೂಲಿಕಾರ್ಮಿಕರ, ಬಡತನ ರೇಖೆಗಿಂತ ಕಡಿಮೆ ಇರುವ ಜನರಿಗೆ ತೊಂದರೆ ಆಗಿದೆ’ ಎಂದು ಆರೋಪಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಟಿ.ಲಕ್ಷ್ಮಿನಾರಾಯಣರೆಡ್ಡಿ ಮಾತನಾಡಿ, ‘ಕೇಂದ್ರ ಸರ್ಕಾರ ಹಾಲಿನ ಉತ್ಪನ್ನಗಳ,ಯಂತ್ರೋಪಕರಣಗಳ ಮೇಲೆ ವಿಧಿಸಿರುವ ತೆರಿಗೆ ವಾಪಸ್ ಪಡೆಯಬೇಕು. ಡಾ.ಸ್ವಾಮಿನಾಥನ್ ಶಿಫಾರಸು ವರದಿಯನ್ವಯ ಹಾಲಿಗೆ ಲಾಭದಾಯಕ ಬೆಲೆ ₹50ರಷ್ಟು ನಿಗದಿಪಡಿಸಬೇಕು. ಹೈನುಗಾರಿಕೆಯ ಉತ್ಪಾದನೆ ಮತ್ತು ನಿರ್ವಹಣೆಯಲ್ಲಿ ಹಾಲು ಉತ್ಪಾದಕರ ಖರ್ಚು ಕಡಿಮೆ ಮಾಡಲು ಸರ್ಕಾರ ವಿಶೇಷ ಯೋಜನೆ ಜಾರಿ ಮಾಡಬೇಕು’ ಎಂದು ತಿಳಿಸಿದರು.

ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎನ್.ಶ್ರೀರಾಮಪ್ಪ, ಮುಖಂಡ ಆಂಜನೇಯರೆಡ್ಡಿ, ಹೇಮಚಂದ್ರ, ಶ್ರೀರಾಮನಾಯಕ್, ರಾಮಪ್ಪ, ಜಿ.ಕೃಷ್ಣಪ್ಪ, ವೆಂಕಟರಾಮರೆಡ್ಡಿ, ನಾಗರಾಜರೆಡ್ಡಿ, ಗಂಗರಾಜಪ್ಪ, ರಾಮಚಂದ್ರಪ್ಪ, ಮುನಿಸ್ವಾಮಿ, ಸೀನೇನಾಯಕ್, ಮಂಜುನಾಥ್, ಭಾರತಿ, ನಾರಾಯಣಸ್ವಾಮಿ, ರಾಮಾಂಜಿನಪ್ಪ, ಅನುಸೂಯಮ್ಮ, ಈಶ್ವರರೆಡ್ಡಿ, ಸೂರಿ, ಅರವಿಂದರೆಡ್ಡಿ, ಮಂಜುನಾಥರೆಡ್ಡಿ, ಆನಂದರೆಡ್ಡಿ, ರಾಜಾರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT