ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣಿನ ಬದುಕಿನ ಕೋಶ ‘ಟ್ರಂಕು’

ಗ್ರಾಮೀಣ ಹೆಣ್ಣುಮಕ್ಕಳಿಗೆ ತವರುಮನೆಯ ನೆನಪು ಬಚ್ಚಿಡುವ ಪೆಟ್ಟಿಗೆ
Last Updated 10 ಜನವರಿ 2021, 4:48 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಹಳಬರ ಬಾಯಲ್ಲಿ ‘ಟ್ರಂಕು’ ಎಂದೇ ಮುದ್ರೆ ಒತ್ತಿಸಿಕೊಂಡ ಕಬ್ಬಿಣ ಅಥವಾ ತಗಡಿನ ಪೆಟ್ಟಿಗೆ ಒಂದು ರೀತಿಯಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಆತ್ಮ ಇದ್ದಂತೆ.

ಹಿಂದೆ ಸಾಮಾನ್ಯವಾಗಿ ಹೆಣ್ಣುಮಕ್ಕಳು ತವರುಮನೆಯಿಂದ ಈ ಟ್ರಂಕನ್ನು ಅತ್ತೆ ಮನೆಗೆ ತೆಗೆದುಕೊಂಡು ಹೋಗುವ ಪದ್ಧತಿಯಿತ್ತು. ಅದರಲ್ಲಿ ಅವರ ಸೀರೆ, ಕುಪ್ಪಸ, ತವರುಮನೆಯನ್ನು ನೆನಪಿಸುವ ಹಲವು ವಸ್ತುಗಳನ್ನು ಇಟ್ಟುಕೊಂಡಿರುತ್ತಿದ್ದರು. ಆಪ್ತರ, ಹಿರಿಯರ, ಅಕ್ಕರೆಯಾದವರ ಹಳೆಯ ಫೋಟೊಗಳನ್ನು ಅದರಲ್ಲಿ ಇರಿಸಿಕೊಂಡಿರುತ್ತಿದ್ದರು.

ಆಧುನಿಕತೆಯು ಬೀರುವಿನ ರೂಪದಲ್ಲಿ ಬಂದು, ಟ್ರಂಕುಗಳು ಮರೆಯಾಗುತ್ತಿರುವ ಈ ದಿನಗಳಲ್ಲಿ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸೋಮಯ್ಯನವರ ಮಗಳು ಸಂಗೀತಾ, ಹಳೆಯ ಟ್ರಂಕಿಗೆ ಬಣ್ಣ ಹಚ್ಚುತ್ತಿದ್ದುದು ಕಂಡುಬಂತು.

‘ಈ ಟ್ರಂಕು ನಮ್ಮ ತಾತನವರ ಕಾಲದ್ದು. ನಮ್ಮಮ್ಮ ತನ್ನ ತವರಿನಿಂದ ತಂದಿದ್ದರು. ಮನೆಯಲ್ಲಿ ಮೂಲೆನಾಗೆ ಬಿದ್ದಿತ್ತು. ಪುಸ್ತಕಗಳನ್ನು ಇಟ್ಟುಕೊಳ್ಳಲೆಂದು ಇದಕ್ಕೆ ಬಣ್ಣ ಬಳಿಯುತ್ತಿದ್ದೇನೆ. ಈ ಟ್ರಂಕಿನಲ್ಲಿ ಏನನ್ನು ಇಟ್ಟರೂ ಇಲಿ, ಜಿರಳೆಗಳ ಕಾಟ ಇರೋದಿಲ್ಲ. ಸುರಕ್ಷಿತವಾಗಿರುತ್ತದೆ’ ಎನ್ನುತ್ತಾ ಬಣ್ಣ ಬಳಿಯುವುದರಲ್ಲಿ ಮಗ್ನರಾದರು ಸಂಗೀತಾ.

ಈ ಟ್ರಂಕು ಎಷ್ಟು ಪ್ರಸಿದ್ಧಿಯೆಂದರೆ ಅನೇಕ ಸಿನಿಮಾಗಳಲ್ಲಿ ಕೂಡ ಇದನ್ನು ರೂಪಕವಾಗಿ ಬಳಕೆ ಮಾಡಿದ್ದಾರೆ. ಹಿಂದೆ, ಅತ್ತೆ ಮನೆಗೆ ಹೊರಟ ಹೆಣ್ಣಿನ ಹೆಮ್ಮೆಯ ಸಂಕೇತವಾಗಿತ್ತು ಈ ಟ್ರಂಕು. ಅದರಲ್ಲಿ ಆಕೆ ತನ್ನ ಆತ್ಮವನ್ನೇ ಹುದುಗಿಸಿಟ್ಟುಕೊಂಡಿರುತ್ತಿದ್ದಳು.

‘ಮೀನಖಂಡದ ಕೆಳಕ್ಕೆ, ಹಿಮ್ಮಡಿಯಿಂದ ಸ್ವಲ್ಪ ಮೇಲಕ್ಕೆ ಹೊಸ ಸೀರೆಯನ್ನುಟ್ಟು, ಕೆನ್ನೆ ತುಂಬಾ ಅರಿಸಿನ ಬಳಿದುಕೊಂಡು, ಮುಡಿಯಲ್ಲಿ ಜಡೆ ಬಿಲ್ಲೆ ಮತ್ತು ಹೂವನ್ನು ಮುಡಿದು, ಕಂಕುಳಿನಲ್ಲಿ ಹೊಸ ಟ್ರಂಕನ್ನು ಇರಿಸಿಕೊಂಡು, ಹೆಣ್ಣು ಹೋಗುವಾಗ, ಟ್ರಂಕಿನ ಮೇಲೆ ಬಿದ್ದ ಸೂರ್ಯನ ಬೆಳಕು ಅವಳ ಮುಖದ ಮೇಲೆ ಚೆಲ್ಲುವಾಗ, ಆ ನಗೆ ಮುಖದ ಕಾಂತಿ ಹೆಚ್ಚಿ, ಗಂಡನ ಜೊತೆಯಲ್ಲಿ ಅತ್ತೆಯ ಮನೆಗೆ ಹೆಜ್ಜೆ ಹಾಕುತ್ತಾ, ಊರನ್ನು ದಾಟುತ್ತಿದ್ದ ದೃಶ್ಯ ಎಂದಿಗೂ ಮರೆಯಲಾಗದಂತಹದ್ದು” ಎಂದು ಬಣ್ಣಿಸುತ್ತಾರೆ ಸಾಹಿತಿ ಸ.ರಘುನಾಥ.

‘ಪ್ರತಿ ಮನೆಯಲ್ಲಿ ಅತ್ತೆಯ ಮನೆಗೆ ಹೆಣ್ಣನ್ನು ಕಳುಹಿಸಿಕೊಡುವಾಗ, ವಿಶೇಷವಾಗಿ ತಾಯಿಯೇ ಟ್ರಂಕನ್ನು ಹೊರುತ್ತಿದ್ದರು. ಇಲ್ಲವಾದಲ್ಲಿ ಅಣ್ಣನೋ, ತಮ್ಮನೋ ಹೊರುತ್ತಿದ್ದರು. ಬೀಳ್ಕೊಡುವ ಕೊನೆಯ ಘಳಿಗೆಯಲ್ಲಿ ಟ್ರಂಕನ್ನು ಹಸ್ತಾಂತರಿಸಲಾಗುತ್ತಿತ್ತು. ಏನೋ ಒಂದು ದೊಡ್ಡ ನಿಧಿಯನ್ನು ಕಾಣಿಕೆಯಾಗಿ ಕೊಟ್ಟಂತೆ ತವರಿನವರು ಭಾವಿಸುತ್ತಿದ್ದರು. ಮದುವೆ ಹೆಣ್ಣು ಅಷ್ಟೇ ಅಮೂಲ್ಯ ವಸ್ತುವೆಂಬಂತೆ ಅದನ್ನು ಸ್ವೀಕರಿಸುತ್ತಿದ್ದಳು. ಆತ್ಮೀಯ ಬೀಳ್ಕೊಡುಗೆಯ ಒಂದು ಸಂಕೇತವಾಗಿ ಟ್ರಂಕು ಬಳಕೆಯಾಗುತ್ತಿತ್ತು’ ಎಂದು ವಿವರಿಸಿದರು.

ಇದು ಒಂದು ರೀತಿಯಲ್ಲಿ ಬಡ ಹೆಣ್ಣುಮಕ್ಕಳ ನೆನಪಿನ ಪೆಟ್ಟಿಗೆಯೂ ಹೌದು. ಜಡೆಕುಚ್ಚು, ಚೌರಿ, ಟೇಪು, ಚಿಕ್ಕ ಕನ್ನಡಿ, ಬಾಚಣಿಗೆ, ಕಘಮಲೆಣ್ಣೆ(ಸುಗಂಧದ ಎಣ್ಣೆ), ಘಮಲ್ಸೊಬ್ಬು(ಸುವಾಸನೆಯ ಸೋಪು) ಇವೆಲ್ಲವೂ ಅಮೂಲ್ಯ ನಿಧಿಯಾಗಿ ಟ್ರಂಕಿನೊಳಗೆ ಜೋಪಾನವಾಗಿರುತ್ತವೆ. ಆ ಹೆಣ್ಣುಮಗಳು ಟ್ರಂಕಿನ ಮುಚ್ಚಳ ತೆಗೆದು ಅವನ್ನು ನೋಡಿದಾಗಲೆಲ್ಲಾ ಆ ವಸ್ತುಗಳಲ್ಲಿ ಅದರಲ್ಲೂ ಆ ಪುಟ್ಟ ಕನ್ನಡಿಯಲ್ಲಿ ತನ್ನ ತವರು, ಗೆಳತಿಯರು ಮತ್ತು ತವರೂರನ್ನು ಕಲ್ಪಿಸಿಕೊಳ್ಳುತ್ತಾಳೆ.

ಟ್ರಂಕು ಹೆಣ್ಣಿನ ಬದುಕಿನ ಸಮಗ್ರ ಕಥೆಯನ್ನೇ ಹಿಡಿದಿಟ್ಟುಕೊಳ್ಳುತ್ತಿತ್ತು. ಅದು ಹೆಣ್ಣಿನ ಬದುಕಿನ ಗುಟ್ಟುಗಳನ್ನು ಬಚ್ಚಿಕೊಂಡಿರುವ ಖಜಾನೆಯಂತದ್ದು. ಈ ಟ್ರಂಕಿಗೆ ಮಾತು ಬಂದಿದ್ದಿದ್ದರೆ ಬಹುಶಃ ಜಾನಪದ ಗೀತೆಗಳನ್ನು ಹಾಡುತ್ತಿತ್ತೇನೋ. ಅದು ಹಾಡದಿದ್ದರೂ ಹೆಣ್ಣಿನ ಮನಸ್ಸು ಆ ಎಲ್ಲವನ್ನೂ ಹಾಡಾಗಿ ಕಟ್ಟಿಕೊಳ್ಳಬಲ್ಲದು. ಟ್ರಂಕನ್ನು ಈಗಲೂ ಅನೇಕ ಹೆಣ್ಣುಮಕ್ಕಳು ಅಮೂಲ್ಯವಾದ ನಿಧಿಯೆಂದು ಭಾವಿಸಿ ಈಗಲೂ ಕಾಪಾಡಿಕೊಂಡಿದ್ದಾರೆ. ಹಾಗಾಗಿ ಟ್ರಂಕು ಹೆಣ್ಣಿನ ಬದುಕಿನ ಕೋಶ
ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT