ಮಂಗಳವಾರ, ಡಿಸೆಂಬರ್ 7, 2021
27 °C

ಬೆಳೆ ಪರಿಹಾರ ನೀಡದಿದ್ದರೆ ಹೋರಾಟದ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ‘ತಾಲ್ಲೂಕಿನ ರೈತರಿಗೆ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಷ್ಟ ಪರಿಹಾರವನ್ನು ಸರ್ಕಾರ ಸಮರ್ಪಕವಾಗಿ ವಿತರಣೆ ಮಾಡದಿದ್ದರೆ ತಾಲ್ಲೂಕು ಕಚೇರಿ, ಕೃಷಿ, ತೋಟಗಾರಿಕೆ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ (ಪ್ರೊ.ಎಂ.ಡಿ. ನಂಜುಂಡಸ್ವಾಮಿ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸಲು ಎಚ್ಚರಿಸಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ವಾಯುಭಾರ ಕುಸಿತದಿಂದ ತಾಲ್ಲೂಕಿನಲ್ಲಿ ಮಳೆ ಹೆಚ್ಚಾಗಿ ಬಿದ್ದಿದೆ. ಇದರಿಂದ ರೈತರ ಹೊಲ, ಗದ್ದೆಗಳಲ್ಲಿ ತೇವಾಂಶ ಹೆಚ್ಚಾಗಿ ರಾಗಿ, ಭತ್ತ, ನೆಲಗಡಲೆ, ಮುಸುಕಿನ ಜೋಳ ಸೇರಿದಂತೆ ತರಕಾರಿಗಳು ಸಂಪೂರ್ಣವಾಗಿ ನೆಲ ಕಚ್ಚಿವೆ’ ಎಂದರು.

ಬೆಳೆ ನಷ್ಟವಾಗಿದ್ದರೂ ಇದುವರೆವಿಗೂ ಬೆಳೆ ನಷ್ಟದ ಮಾಹಿತಿಯನ್ನು ಜಿಲ್ಲಾಡಳಿತ ಅಥವಾ ತಾಲ್ಲೂಕು ಆಡಳಿತವಾಗಲಿ ನೀಡಿಲ್ಲ. ಬೆಳೆ ನಷ್ಟದ ಮಾಹಿತಿಯನ್ನು ಸಮರ್ಪಕವಾಗಿ ಸಂಗ್ರಹ ಮಾಡಿಲ್ಲ. ಕೂಡಲೇ ಅಧಿಕಾರಿಗಳು ಸಮಗ್ರವಾಗಿ ಬೆಳೆ ನಷ್ಟದ ಬಗ್ಗೆ ಸರ್ವೆ ಮಾಡಿ ಸರ್ಕಾರಕ್ಕೆ ಕಳುಹಿಸಬೇಕು. ಬೆಳೆ ಪರಿಹಾರವನ್ನು ರೈತರ ಖಾತೆಗಳಿಗೆ ಜಮೆ ಮಾಡಬೇಕು ಎಂದು
ಆಗ್ರಹಿಸಿದರು.

ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಜಿ. ರಾಮಕೃಷ್ಣ (ಹೆಗ್ಗಡೆ) ಮಾತನಾಡಿ, ರೈತರಿಗೆ ಶೀಘ್ರವೇ ಪರಿಹಾರ ನೀಡದಿದ್ದರೆ ನ. 30ರಂದು ತಾಲ್ಲೂಕು ಕಚೇರಿ ಮುಂದೆ ನೂರಾರು ರೈತರೊಟ್ಟಿಗೆ ಜಮಾಯಿಸಿ ಪ್ರತಿಭಟನೆ ಮಾಡಲಾಗುವುದು. ಒಂದು ಹೆಕ್ಟೇರ್‌ಗೆ ಕನಿಷ್ಠ ₹ 25 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಎಸ್. ನಾರಾಯಣಪ್ಪ, ಕಾರ್ಯಾಧ್ಯಕ್ಷ ಎಚ್.ಎನ್. ಸುಬ್ಬಿರೆಡ್ಡಿ, ಉಪಾಧ್ಯಕ್ಷ ಎನ್. ಶ್ರೀನಿವಾಸ್, ಖಜಾಂಚಿ ಕೆ. ಬೈರಾರೆಡ್ಡಿ, ಮುಖಂಡರಾದ ಸೂರ್ಯನಾರಾಯಣ, ಜಿ.ಎಲ್. ನರಸಿಂಹಯ್ಯ, ಕದಿರಪ್ಪ, ಮಂಜುನಾಥ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು