ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಬೆಂಕಿ ಕೆನ್ನಾಲಿಗೆಗೆ ಹುಲ್ಲು, ಪಕ್ಷಿ-ಪ್ರಾಣಿ ಭಸ್ಮ

ದೇವಿಕುಂಟೆ ಅರಣ್ಯದಲ್ಲಿ ದಹನ; ಅರಣ್ಯ, ಬೆಟ್ಟ-ಗುಡ್ಡಗಳ ಸಂರಕ್ಷಣೆಗೆ ಪರಿಸರ ಪ್ರೇಮಿಗಳ ಆಗ್ರಹ
Last Updated 6 ಮಾರ್ಚ್ 2021, 3:25 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ದೇವಿಕುಂಟೆ ಗ್ರಾಮದಲ್ಲಿ ಭತ್ತದ ಹೊಲದ ಪಕ್ಕದಲ್ಲಿನ ಅರಣ್ಯಕ್ಕೆ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ, ಕಾಡಿನ ಸಂಪತ್ತು ನಾಶ ಆಗಿ, ಅಪಾರ ಪ್ರಮಾಣದ ಪಕ್ಷಿ-ಪ್ರಾಣಿಗಳು ಸುಟ್ಟು ಭಸ್ಮವಾಗಿದೆ.

ದೇವಿಕುಂಟೆ ಗ್ರಾಮದ ಗೋಪಾಲ್ ಎಂಬ ರೈತ ಭತ್ತದ ಗದ್ದೆ ಪಕ್ಕದಲ್ಲಿ ಅರಣ್ಯ ಪ್ರದೇಶ ಇದೆ. ಬುಧವಾರ ಕೆಲ ಕಿಡಿಗೇಡಿಗಳು ಒಣಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕಿಡಿಗಳು ಭತ್ತದ ಗದ್ದೆಗೆ ಹರಡುತ್ತದೆ ಎಂದು, ರೈತ ಗೋಪಾಲ್ ಬೆಂಕಿಯನ್ನು ನೀರಿನಿಂದ ಹಾರಿಸಿದರೂ ಪ್ರಯೋಜವಾಗಿಲ್ಲ. ಮೊಳಕಾಲುದ್ದ ಬೆಳೆದಿರುವ ಈ ಹುಲ್ಲಿನ ನಡುವೆ ಹುಳು ಹುಪ್ಪಟಗಳು,ಕಪ್ಪೆಗಳು, ಹಾವುಗಳು, ಓತಿಕೇತ, ಮಿಡತೆಗಳು, ಚಿಟ್ಟೆಗಳು ಸುಂದರ ಸಂಸಾರ ಹೂಡಿವೆ. ನೆಲದೊಳಗೆ ಇರುವೆಗಳು, ಗೆದ್ದಲು ಗೂಡು ಕಟ್ಟಿದೆ. ಎರೆ ಹುಳಗಳು ನೆಲವೆಲ್ಲಾ ನನ್ನದೇ ಎಂದು ತಿರುಗಾಡುತ್ತಿವೆ. ಆದರೆ ಕಾಡ್ಕಿಚ್ಚು ಹರಡಿ ಅಪಾರ ಪ್ರಮಾಣದ ಹುಲ್ಲು ನಾಶ ಆಗಿದೆ.

‘ಬೇಸಿಗೆ ಆರಂಭವಾಗುತ್ತಿದ್ದಂತೆ ಕೆಲವರು ಬೆಟ್ಟ-ಗುಡ್ಡಗಳಿಗೆ ಕುರಿ, ಹಸು ಮೇಯಿಸಲು ಹೋಗುತ್ತಾರೆ. ಬೀಡಿ, ಸಿಗರೇಟು ಅಂಟಿಸಿಕೊಂಡು, ನೆರೆದ ಹುಲ್ಲಿಗೆ ಬೆಂಕಿ ಇಡುತ್ತಿದ್ದಾರೆ. ಇದರಿಂದ ಅಪಾರ ಪ್ರಮಾಣದ ಸಸ್ಯ ಹಾಗೂ ಮರಗಳು ಬೆಂಕಿಗೆ ಆಹುತಿ ಆಗುತ್ತವೆ. ಕಾಡು, ಬೆಟ್ಟ-ಗುಡ್ಡಗಳಿಗೆ, ಅರಣ್ಯ ಪ್ರದೇಶಗಳಿಗೆ ಬೆಂಕಿ ಇಡುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಸುಮ್ಮನಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

‘ಸೂಕ್ಷ್ಮ ವಲಯದ ಕಾಡು, ಅರಣ್ಯ, ಬೆಟ್ಟ-ಗುಡ್ಡಗಳ ಕಡೆ ನಿಗಾ ವಹಿಸಬೇಕು. ಬೆಂಕಿ ಹಚ್ಚುವವರಿಗೆ ಕಾನೂನಿನ ಕ್ರಮ ಜರುಗಿಸಿ, ಶಿಕ್ಷೆಗೆ ಒಳಪಡಿಸಬೇಕು. ನಾವು ಮಾಡುವ ಕಾರ್ಯದಲ್ಲಿ ಮಮಕಾರ ಮತ್ತು ಮಾನವೀಯತೆ ಇರಬೇಕು. ಯಾವುದೇ ಕಾರ್ಯದಲ್ಲಿಯೂ ಇದು ಇರದಿದ್ದರೆ ಅದು ಸಮಾಜಕ್ಕೆ ಮಾರಕವಾಗುತ್ತದೆ’ ಎಂದು ಗ್ರಾಮದ ಯುವಕ ಡಿ.ಜೆ.ಪವನ್ ಕಲ್ಯಾಣ್ ತಿಳಿಸಿದರು.

‘ಮನುಷ್ಯನ ದುರಾಸೆಗಳು ಇಡೀ ಪರಿಸರ ಸಮತೋಲನವನ್ನೇ ಬುಡಮೇಲು ಮಾಡಿವೆ. ಪ್ರಾಣಿ ಪಕ್ಷಿಗಳು ವಾಸಿಸುವ ಸ್ಥಳಗಳಲ್ಲಿ ಮನುಷ್ಯನು ನೆಲೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾನೆ. ಕಾಡು, ಬೆಟ್ಟ-ಗುಡ್ಡ, ಸಸ್ಯ, ಮರಗಳು ಇದ್ದರೆ ಮಳೆ ಆಗುತ್ತದೆ. ಬಯಲುಸೀಮೆ ಪ್ರದೇಶದಲ್ಲಿ ನದಿನಾಲೆಗಳು ಇಲ್ಲ. ಇಂತಹ ಪ್ರದೇಶದಲ್ಲಿ ಗಿಡ-ಮರಗಳನ್ನು ಸಂರಕ್ಷಿಸಬೇಕೇ ಹೊರತು, ಅರಣ್ಯಕ್ಕೆ ಬೆಂಕಿ ಹಚ್ಚುವುದರಿಂದ ಪರಿಸರವೇ ಮಾಯವಾಗುತ್ತದೆ. ಮಳೆಯು ಬರುವುದಿಲ್ಲ. ಬೆಂಕಿ ಹಚ್ಚುವ ಕೆಲಸ ಎಂದಿಗೂ ಮಾಡಬಾರದು’ ಎಂದು ಪರಿಸರ ಪ್ರೇಮಿ, ರೈತ ಗೋಪಾಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT