ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಮಾಫಿಯಾ ಹಿಂದೆ ವಿದೇಶಿಗರ ಕೈವಾಡ

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅಭಿಮತ
Last Updated 8 ಸೆಪ್ಟೆಂಬರ್ 2020, 16:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ರಾಜ್ಯದಲ್ಲಿ ಡ್ರಗ್ಸ್ ವಿಷ ಬೀಜ ಬಿತ್ತಲು ಯುವಕರನ್ನು ಗುರಿಯಾಗಿಸಿಕೊಳ್ಳಲಾಗಿದ್ದು, ಇದರ ಹಿಂದೆ ವಿದೇಶಿಗರ ಕೈವಾಡವಿದೆ. ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಮೂಲಕ ರಾಜ್ಯವನ್ನು ಡ್ರಗ್ಸ್‌ ಮುಕ್ತಗೊಳಿಸಬೇಕಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡ್ರಗ್ಸ್ ಮಾಫಿಯಾ ಮೂಲಕ ದೇಶದ ಯುವಕರನ್ನು ವ್ಯಸನಿಗಳನ್ನಾಗಿಸಿ ಅವರ ಭವಿಷ್ಯವನ್ನು ಮಂಕುಗೊಳಿಸುವ ದೊಡ್ಡ ಷಡ್ಯಂತ್ರ ನಡೆದಿದೆ. ಇದು ಕಳವಳಕಾರಿ ವಿಚಾರ. ಆರೋಪಿಗಳು ಎಷ್ಟೇ ಪ್ರಭಾವಿಗಳಾದರೂ ಕಠಿಣ ಕ್ರಮ ಜರುಗಿಸಲಾಗುತ್ತದೆ’ ಎಂದು ತಿಳಿಸಿದರು.

‘ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ಅವರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ನಟನಟಿಯರು ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆ ಬರುವುದು ಸಹಜ. ಹಾಗೆಂದು ರಾಗಿಣಿ ಅವರಿಗೂ ಬಿಜೆಪಿ ಸಂಬಂಧ ಕಲ್ಪಿಸುವುದು ಸಲ್ಲದು. ಡ್ರಗ್ಸ್ ದಂಧೆಯಲ್ಲಿ ತೊಡಗಿದವರು ಯಾವುದೇ ಪಕ್ಷಕ್ಕೂ ಸೇರಿದರೂ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

‘ಕೋವಿಡ್‌ನಿಂದ ಉಂಟಾದ ಆರ್ಥಿಕ ಸಂಕಷ್ಟದಿಂದಾಗಿ ಈ ಬಾರಿ ಎತ್ತಿನಹೊಳೆ ಯೋಜನೆ ಹೆಚ್ಚು ಅನುದಾನ ದೊರೆತಿಲ್ಲ. ಮುಂದಿನ ಬಜೆಟ್‍ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿರಿಸಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳುವಂತೆ ಸಹಕಾರ ನೀಡಲಿದ್ದಾರೆ. ಮುಂಬರುವ ಜೂನ್ ವೇಳೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತದೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ರಾಷ್ಟ್ರದ ಇತಿಹಾಸ ಪರಂಪರೆಯನ್ನು ಒಗ್ಗೂಡಿಸಿ, ಎರಡು ಲಕ್ಷ ಶಿಕ್ಷಣ ತಜ್ಞರ ಸಲಹೆಯಂತೆ ಜಾರಿಗೊಳಿಸಲಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಶಿಕ್ಷಣ ವ್ಯವಸ್ಥೆ ದಿಕ್ಕನ್ನೇ ಬದಲಿಸಲಿದೆ’ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಘಟಕದ ಕಾರ್ಯದರ್ಶಿ ಕೇಶವಪ್ರಸಾದ್, ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಜಿಲ್ಲಾ ಘಟಕದ ಅಧ್ಯಕ್ಷ ರಾಮಲಿಂಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್.ಮುರಳೀಧರ್, ಮರಳಕುಂಟೆ ಕೃಷ್ಣಮೂರ್ತಿ, ಆವಲಗುರ್ಕಿ ಶ್ರೀನಿವಾಸರೆಡ್ಡಿ, ಕಾರ್ಯದರ್ಶಿ ಆರ್.ಎನ್.ಅಶೋಕ್, ಲಕ್ಷ್ಮೀಪತಿ, ವಿ.ಮಧುಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT