ಶಿಡ್ಲಘಟ್ಟ: ತಾಲ್ಲೂಕಿನ ಕೆಲವು ಕಡೆಗಳಲ್ಲಿ ಅಂಗನವಾಡಿಗಳಿಗೆ ಗುತ್ತಿಗೆದಾರರು ಕಳಪೆ ಮತ್ತು ಕೊಳೆತ ಕೋಳಿಮೊಟ್ಟೆ ಪೂರೈಸುತ್ತಿದ್ದಾರೆ ಎನ್ನುವ ದೂರುಗಳು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕೋಳಿ ಮೊಟ್ಟೆಗಳ ಗುಣಮಟ್ಟ ಪರಿಶೀಲನೆಗೆ ತಾಲ್ಲೂಕು ಮಟ್ಟದ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.
ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು ನೇತೃತ್ವದಲ್ಲಿ ಮಂಗಳವಾರ ನಡೆದ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಕುಂದುಕೊರತೆ ಸಭೆ ನಡೆಯಿತು.
ಪ್ರತಿ ಕೋಳಿಮೊಟ್ಟೆ 50 ಗ್ರಾಂ ತೂಕಕ್ಕಿಂತ ಕಡಿಮೆ ಇರಬಾರದು. ಕೋಳಿಮೊಟ್ಟೆ ವಿತರಿಸುವ ಸಮಯಲ್ಲಿ ಕನಿಷ್ಠ 10 ದನಗಳ ಜೀವಿತಾವಧಿಯನ್ನು ಹೊಂದಿರಬೇಕು. ತಿಂಗಳಿನಲ್ಲಿ 5, 15 25ನೇ ತಾರೀಕಿನಲ್ಲಿ ತಿಂಗಳಿಗೆ ಮೂರು ಬಾರಿ ವಿತರಿಸಬೇಕು. ಕೋಳಿ ಮೊಟ್ಟೆಗಳನ್ನು ಅಂಗನವಾಡಿಗಳಿಗೆ ಸರಬರಾಜು ಮಾಡುವ ಮುನ್ನ ಮೊಟ್ಟೆಗಳ ಗುಣಮಟ್ಟ ಪರಿಶೀಲಿಸಲು ತಾಲ್ಲೂಕು ಮಟ್ಟದ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಮಿತಿ ಪರಿಶೀಲನೆಯ ನಂತರವೇ ಮೊಟ್ಟೆಗಳನ್ನು ವಿತರಿಸಬೇಕು ಎಂದು ನಿರ್ಧರಿಸಲಾಯಿತು.
ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮೂಲ ಸೌಕರ್ಯಗಳು ಮತ್ತು ಅಂಗನವಾಡಿ ಕಾಂಪೌಂಡ್ ವ್ಯವಸ್ಥೆ ಮತ್ತು ಆಹಾರ ಪದಾರ್ಥಗಳ ಸರಬರಾಜು ಮತ್ತು ಅದರ ನಿರ್ವಹಣೆಯ ಬಗ್ಗೆ ಚರ್ಚೆಗಳು ನಡೆದವು. ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಆಯ್ಕೆ ಪ್ರಕ್ರಿಯೆ ಮತ್ತಿತರ ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ. ನೌತಾಜ್, ಹಿರಿಯ ಮೇಲ್ಪಿಚಾರಕಿ ಲಕ್ಷ್ಮಿದೇವಮ್ಮ ಹಾಗೂ ಮೇಲ್ವಿಚಾರಕಿರಾದ ಆರ್.ಶಶಿಕಲಾ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿ ದೇವಮ್ಮ, ತಾಲ್ಲೂಕು ಅಧ್ಯಕ್ಷೆ ಅಶ್ವತಮ್ಮ ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಇದ್ದರು.
ಗುತ್ತಿಗೆದಾರರಿಗೆ ಎಚ್ಚರಿಕೆ
ಮಾ.19ರಂದು ಅಂಗನವಾಡಿಗಳಿಗೆ ಕೊಳೆತಮೊಟ್ಟೆ ಎಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದಾರೆ. ಮತ್ತೆ ಇಂತಹ ಪ್ರಸಂಗ ನಡೆದರು ಗುತ್ತಿಗೆ ರದ್ದುಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.