ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಸಿಸಿ ಬ್ಯಾಂಕ್ | ₹ 11 ಕೋಟಿ ವಂಚನೆ ಆರೋಪ; ಮ್ಯಾನೇಜರ್‌ ವಿರುದ್ಧ ಪ್ರಕರಣ ದಾಖಲು

ದೂರಿನಲ್ಲಿ ಬ್ಯಾಲಹಳ್ಳಿ ಗೋವಿಂದಗೌಡ ಹೆಸರು ಪ್ರಸ್ತಾಪ
Published 30 ಜೂನ್ 2024, 22:09 IST
Last Updated 30 ಜೂನ್ 2024, 22:09 IST
ಅಕ್ಷರ ಗಾತ್ರ

ಚಿಂತಾಮಣಿ: ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾಲಮನ್ನಾದ ₹11 ಕೋಟಿ ವಂಚಿಸಿದ್ದಾರೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಡಿಸಿಸಿ) ವ್ಯವಸ್ಥಾಪಕ ಜಿ.ಚಂದ್ರಶೇಖರ್ ಎಂಬುವವರ ವಿರುದ್ಧ ಚಿಂತಾಮಣಿ ಗ್ರಾಮಾಂತರ  ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ಡಿಸಿಸಿ ವ್ಯವಸ್ಥಾಪಕ ಜಿ.ಚಂದ್ರಶೇಖರ್ ವಿರುದ್ಧ ತಳಗವಾರ ಗ್ರಾಮದ ಟಿ.ಎಸ್.ಪ್ರತಾಪ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿರುವ ಬಡ ರೈತ ಕುಟುಂಬಗಳಿಗೆ ನೆರವಾಗಲು ರಾಜ್ಯ ಸರ್ಕಾರ 2016-17 ಮತ್ತು 2018-19ರಲ್ಲಿ ಸಾಲ ಮನ್ನಾ ಯೋಜನೆ ರೂಪಿಸಿತ್ತು. ಆದರೆ, ಚಂದ್ರಶೇಖರ್ ಅವರು 2018ರಲ್ಲಿ ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾಲ ಮನ್ನಾ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

2021ರ ಜ.8 ರಂದು ನಡೆದ ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯಲ್ಲಿ ₹ 11 ಕೋಟಿ ನಷ್ಟಕ್ಕೆ ಸಂಬಂಧಿಸಿದಂತೆ ವ್ಯವಸ್ಥಾಪಕ ಚಂದ್ರಶೇಖರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿಲ್ಲ. ವಂಚನೆ ಮಾಡಿದ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಬ್ಯಾಂಕಿನ ಉನ್ನತ ವ್ಯಕ್ತಿಗಳು ಈ ಅವ್ಯವಹಾರದಲ್ಲಿ ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ದೂರುದಾರರು ಶಂಕೆ ವ್ಯಕ್ತಪಡಿಸಿದ್ದಾರೆ.

ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರಿಗೆ ಯಾವುದೇ ಆದಾಯ ಮೂಲವಿಲ್ಲ. ಆದರೂ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆಪ್ತರ ಹೆಸರಿನಲ್ಲಿಯೂ ಕ್ರಮ ಆಸ್ತಿ ಸಂಪಾದಿಸಿದ್ದಾರೆ. ಈ ಹಗರಣದಲ್ಲಿ ಬ್ಯಾಲಹಳ್ಳಿ ಗೋವಿಂದ ಗೌಡ ಅವರ ಪಾತ್ರ ಪ್ರಮುಖವಾಗಿರಬಹುದು ಎಂಬ ಸಂಶಯವಿದೆ. ಆದ್ದರಿಂದ ಕಾನೂನು ರೀತಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT