ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಬಸ್‌ಪಾಸ್‌ ನೀಡುವಂತೆ ಆಗ್ರಹ

ತಾಲ್ಲೂಕು ಕಚೇರಿ ಎದುರು ಎಬಿವಿಪಿ ಕಾರ್ಯಕರ್ತರು, ವಿದ್ಯಾರ್ಥಿಗಳ ಪ್ರತಿಭಟನೆ
Last Updated 18 ಜೂನ್ 2019, 10:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಎಲ್ಲಾ ವರ್ಗದ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು, ವಿದ್ಯಾರ್ಥಿಗಳು ನಗರದ ತಾಲ್ಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ವಿದ್ಯಾರ್ಥಿನಿ ಶ್ವೇತಾ, ‘ಈ ಹಿಂದೆ ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಈಗ ಶಾಲಾ, ಕಾಲೇಜುಗಳು ಪ್ರಾರಂಭವಾಗಿ 20 ದಿನ ಕಳೆದರೂ ಈವರೆಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಣೆ ಮಾಡಿಲ್ಲ’ ಎಂದು ಹೇಳಿದರು.

‘ವಿದ್ಯಾರ್ಥಿಗಳು ದೂರದ ಹಳ್ಳಿಗಳಿಂದ ನಗರದ ಶಾಲಾ, ಕಾಲೇಜುಗಳಿಗೆ ಬಂದು ಹೋಗಬೇಕಾದರೆ ನಿತ್ಯ ಕನಿಷ್ಠ ₹50 ವರೆಗೆ ಖರ್ಚಾಗುತ್ತದೆ. ಇದರಿಂದಾಗಿ ಬಡ ಮಕ್ಕಳು ಶಾಲಾ, ಕಾಲೇಜುಗಳಿಗೆ ಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಪೋಷಕರು ನಿತ್ಯ ಮಕ್ಕಳಿಗೆ ಹಣ ಕೊಡಲಾಗದೆ ಕಷ್ಟ ಎದುರಿಸುತ್ತಿದ್ದಾರೆ. ಈ ಸಮಸ್ಯೆಯ ಗಂಭೀರತೆ ಅರಿತು ಸರ್ಕಾರ ಕೂಡಲೇ ಉಚಿತ ಪಾಸ್ ವಿತರಣೆಗೆ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಇತ್ತೀಚೆಗೆ ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದೆ ಹಾಗೂ ಶಿಕ್ಷಣ ಒಂದು ಮಾರಾಟದ ವಸ್ತುವಾಗಿದೆ. ಉನ್ನತ ಶಿಕ್ಷಣ ಕೇವಲ ಶ್ರೀಮಂತರಿಗೆ ಮಾತ್ರ ಸಿಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು.

‘ಕಳೆದ ಎರಡು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಇಲಾಖೆಗಳು ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಆದರೆ ಇದೇ ಇಲಾಖೆಗಳು ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬೇಗ ಬಿಡುಗಡೆ ಮಾಡಿಕೊಡುತ್ತಿವೆ. ನಮಗೆ ಎರಡು ವರ್ಷಗಳಿಂದ ವಿದ್ಯಾರ್ಥಿ ವೇತನ ಬಂದಿಲ್ಲ’ ಎಂದು ಆರೋಪಿಸಿದರು.

ಎಬಿವಿಪಿ ವಿಭಾಗದ ಸಂಚಾಲಕ ಮಂಜುನಾಥ್‌ ರೆಡ್ಡಿ ಮಾತನಾಡಿ, ‘ಕಳೆದ ವರ್ಷವೂ ಸರ್ಕಾರ ಹಣವಿಲ್ಲ ಎಂಬ ನೆಪ ಒಡ್ಡಿ ಉಚಿತ ಪಾಸ್‌ ವಿತರಿಸಲಿಲ್ಲ. ಈ ವರ್ಷವೂ ವಿದ್ಯಾರ್ಥಿಗಳ ಬೇಡಿಕೆಯನ್ನು ಮೂಲೆಗುಂಪು ಮಾಡಿದೆ. ಕೇವಲ ಅಧಿಕಾರ ಉಳಿಸಿಕೊಳ್ಳುವ ಯೋಜನೆಯಲ್ಲಿರುವ ಮುಖ್ಯಮಂತ್ರಿ, ಸಚಿವರು ವಿದ್ಯಾರ್ಥಿಗಳ ಕೂಗಿಗೆ ಕಿವಿಗೊಟ್ಟು ಸ್ಪಂದಿಸಬೇಕಿದೆ’ ಎಂದು ಹೇಳಿದರು.

‘ಕೂಡಲೇ ರಾಜ್ಯ ಸರ್ಕಾರ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.

ವಿದ್ಯಾರ್ಥಿ ಮುಖಂಡರಾದ ಅನಿಲ್, ಸುರೇಶ್ ಕುಮಾರ್, ನಾಗರಾಜ್, ಶಿಲ್ಪಾ, ಮೇಘನಾ, ಮುರಳಿ, ಶ್ರೀಕಾಂತ್, ಕಾರ್ತಿಕ್, ಆಶಾ, ಸುಕನ್ಯಾ, ಜನಾರ್ಧನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT