ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಹಬ್ಬದ ಸಂಭ್ರಮ ತಾರದ ಗಣೇಶ ಚತುರ್ಥಿ

ಕೋವಿಡ್ ಕರಿನೆರಳಿನಲ್ಲಿ ವಿವಿಧ ವಲಯದ ಕಾರ್ಮಿಕರು l ಮೂರ್ತಿಗಳಿಗೆ ಬೇಡಿಕೆ ಕುಸಿತ
Last Updated 6 ಸೆಪ್ಟೆಂಬರ್ 2021, 8:58 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಗಣೇಶ ಹಬ್ಬ (ಸೆ. 10) ಬಂದರೆ ನಾಡಿನಾದ್ಯಂತ ಸಂಭ್ರಮ. ರಸ್ತೆ ರಸ್ತೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಹೀಗೆ ಸಾರ್ವಜನಿಕವಾಗಿ ಎಲ್ಲೆಡೆ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ. ಪ್ರಮುಖ ಹಬ್ಬ ಎನಿಸಿರುವ ಗಣೇಶ ಚತುರ್ಥಿ ನಗರದಿಂದ ಹಿಡಿದು ಹಳ್ಳಿ ಹಳ್ಳಿಗಳಲ್ಲಿಯೂ ಸಂಭ್ರಮ, ಶ್ರದ್ಧೆ ಮನೆ ಮಾಡಿರುತ್ತದೆ.

ಇಂತಹ ಹಬ್ಬ ಹಲವರ ಬದುಕಿಗೂ ದಾರಿಯಾಗಿದೆ. ಆದರೆ, ಕೋವಿಡ್ ಕರಿನೆರಳು ಗಣೇಶ ಚತುರ್ಥಿ ಮತ್ತು ಈ ಹಬ್ಬವನ್ನು ನಂಬಿ ವಹಿವಾಟು ನಡೆಸುತ್ತಿದ್ದವರ ಬದುಕಿಗೆ ಬರೆ ಎಳೆದಿದೆ. ಸತತ ಎರಡನೆಯ ವರ್ಷವೂ ಕೊರೊನಾ ಕರಿನೆರಳಿನಿಂದ ಗಣಪತಿಗಳಿಗೆ ಬೇಡಿಕೆಯೇ ಇಲ್ಲ.

ಪ್ರಮುಖವಾಗಿ ಗಣೇಶ ಚತುರ್ಥಿ ಇನ್ನೂ ಒಂದು ತಿಂಗಳು ಇದೆ ಎನ್ನುವಾಗಲೇ ಗಣೇಶ ಮೂರ್ತಿಗಳ ನಿರ್ಮಾತೃಗಳು ಲಗುಬಗೆಯಿಂದ ಸಿದ್ಧವಾಗುವರು. ಮಣ್ಣಿನಲ್ಲಿ ಮೂರ್ತಿಗಳನ್ನು ರೂಪಿಸಿ ಮಾರುಕಟ್ಟೆಗೆ ತರುವರು. ಹೀಗೆ ಗಣೇಶ ನಿರ್ಮಾಣದಿಂದಲೇ ಕೆಲವು ಕುಟುಂಬಗಳು ಆ ಸಮಯದಲ್ಲಿ ಬದುಕು ನಡೆಸುತ್ತವೆ. ಆದಾಯಗಳಿಸುತ್ತವೆ. ಆದರೆ, ಕಳೆದ ವರ್ಷ ಮತ್ತು ಈ ವರ್ಷ ಗಣೇಶ ಮೂರ್ತಿ ತಯಾರಕರಿಗೆ ಗಣೇಶ ಚತುರ್ಥಿ ಸಿಹಿಯನ್ನು ತಂದಿಲ್ಲ. ಈ ಬಾರಿಯೂ ಇದೇ ಸ್ಥಿತಿ ಮುಂದುವರಿದಿದೆ.

ಗಣೇಶ ಶ್ರದ್ಧೆ ಭಕ್ತಿಯ ಆಚರಣೆ ಮಾತ್ರವಾಗಿ ಉಳಿದಿಲ್ಲ. ಸಂಭ್ರಮವೂ ಈ ಹಬ್ಬದಲ್ಲಿ ಗರಿಗೆದರುತ್ತದೆ. ಶಾಮಿಯಾನ, ಹೂವಿನ ಅಲಂಕಾರ, ವಾದ್ಯ ವೃಂದ, ಜನಪದ ಕಲಾವಿದರು, ಸಂಗೀತ ಕಲಾವಿದರು, ವಿದ್ಯುತ್ ದೀಪಾಲಂಕಾರ, ಮೆರವಣಿಗೆಯ ಹೂವಿನ ವಾಹನಗಳು, ಪಟಾಕಿ, ಆರ್ಕೆಸ್ಟ್ರಾ ಹೀಗೆ ವಿವಿಧ ವರ್ಗಗಳ ಕಾರ್ಮಿಕರು ಈ ಹಬ್ಬದ ಸುತ್ತಮುತ್ತ ಆರ್ಥಿಕ ಅನುಕೂಲವನ್ನು ಪಡೆಯುತ್ತಿದ್ದರು. ಆದರೆ, ಕೋವಿಡ್ ಈ ಎಲ್ಲ ವರ್ಗಗಳ ಕಾರ್ಮಿಕರು ಮತ್ತು ಮಾಲೀಕರ ಮೇಲೆ ಬರೆ ಎಳೆದಿದೆ.

ಹಬ್ಬದ ಸಂದರ್ಭದಲ್ಲಿ ಸಮಾನ ಸೇವಕರು, ರಾಜಕೀಯ ನಾಯಕರು ಗಣೇಶ ಮೂರ್ತಿಗಳನ್ನು ಉಚಿತವಾಗಿ ನೀಡುತ್ತಿದ್ದರು. ಇದರಿಂದ ಕೆಲವು ಮೂರ್ತಿ ತಯಾರಕರ ಬಳಿ ದಾನಿಗಳು ಸಗಟು ದರದಲ್ಲಿ ಗಣೇಶ ಮೂರ್ತಿಗಳನ್ನು ಖರೀದಿಸುತ್ತಿದ್ದರು. ಈ ವರ್ಷ ಹಬ್ಬದ ಹೊಸ್ತಿಲಿನಲ್ಲಿ ಚುನಾವಣೆಗಳು ಇಲ್ಲ. ಮತ್ತೊಂದೆಡೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಇನ್ನೂ ಅನಿಶ್ಚಿತತೆಯಲ್ಲಿಯೇ ಇದೆ. ಈ ಕಾರಣದಿಂದ ಮೂರ್ತಿ ತಯಾಕರು, ಮಾರಾಟಗಾರರು ಸೇರಿದಂತೆ ಹಲವು ವಲಯಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಿಲ್ಲೆಯ ಬಾಗೇಪಲ್ಲಿ, ಗೌರಿಬಿದನೂರು ಮತ್ತು ಗುಡಿಬಂಡೆ ತಾಲ್ಲೂಕು ಕೇಂದ್ರಗಳಲ್ಲಿಯೂ ಈ ವೇಳೆಗಾಗಲೇ ಗಣೇಶ ಮೂರ್ತಿಗಳ ಮಾರಾಟ ಆರಂಭವಾಗುತ್ತಿತ್ತು. ಆದರೆ, ಈ ತಾಲ್ಲೂಕು ಕೇಂಂದ್ರಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಗಣೇಶ ಮೂರ್ತಿಗಳ ಮಾರಾಟದಲ್ಲಿ ತೊಡಗಿದ್ದಾರೆ. ಈ ತಾಲ್ಲೂಕುಗಳಲ್ಲಿಯೂ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಬ್ಬದ ದುಡಿಮೆಯನ್ನು ನಂಬಿಕೊಂಡವರಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಅಥವಾ ಕಾರ್ಯಕ್ರಮ ಆಯೋಜನರು ಮುಂಗಡ ನೀಡಿ ‘ಇಂತಹ ದಿನ ಕಾರ್ಯಕ್ರಮವಿದೆ. ವಿಸರ್ಜನೆ ಇದೆ’ ಎಂದು ಮುಂಚಿತವಾಗಿಯೇ ದಿನಾಂಕವನ್ನು ತಿಳಿಸುತ್ತಿದ್ದರು. ಆದರೆ ಈ ಬಾರಿ ಮುಂಗಡ ಬುಕ್ಕಿಂಗ್ ಇಲ್ಲ.

ಉಚಿತ ಗಣೇಶನಿಗೆ ನಿಯಮ ಅಡ್ಡಿ
‌ಶಿಡ್ಲಘಟ್ಟ:
ತಾಲ್ಲೂಕಿನಲ್ಲಿ ಒಂದೆಡೆ ಗಣೇಶನ ಮೂರ್ತಿಗಳನ್ನು ಉಚಿತವಾಗಿ ನೀಡಲು ದಾನಿಗಳು ಸಿದ್ಧವಾಗಿದ್ದಾರೆ. ಆದರೆ, ಮತ್ತೊಂದೆಡೆ ಕೊರೊನಾ ನಿಯಮಗಳ ಅನ್ವಯ ಎಲ್ಲೆಲ್ಲಿ ಗಣೇಶನ ಮೂರ್ತಿ ಇಡಬೇಕು ಅಥವಾ ಇಡಬಾರದು ಎಂಬುದರ ಬಗ್ಗೆ ಪೊಲೀಸರ ನಿಯಮ ಇದಕ್ಕೆ ಅಡೆತಡೆಯಾಗಿದೆ.

ಸಾರ್ವಜನಿಕವಾಗಿ ಗಣೇಶನ ಮೂರ್ತಿಗಳು ಪ್ರತಿಷ್ಠಾಪನೆಯಾದರೆ ಮಾತ್ರ ಮೂರ್ತಿಗಳ ಮಾರಾಟಗಾರರಿಗೆ ಸುಗ್ಗಿ. ಆದರೆ, ದಾನಿಗಳು ಉಚಿತವಾಗಿ ನೀಡುವುದರಿಂದ ಹಾಗೂ ಅನುಮತಿ ಸಿಗುವುದು ದುಸ್ತರ ಇರುವುದರಿಂದ ಮೂರ್ತಿಗಳನ್ನು ತಂದಿಟ್ಟುಕೊಂಡಿರುವವರು ವ್ಯಾಪಾರವಿಲ್ಲದೆ ನಲುಗಿದ್ದಾರೆ.

ಎಬಿಡಿ ಗ್ರೂಪ್ ಅಧ್ಯಕ್ಷ ರಾಜೀವ್ ಗೌಡ ಸಾರ್ವಜನಿಕವಾಗಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವವರಿಗೆ ಉಚಿತವಾಗಿ ಗಣೇಶನ ಮೂರ್ತಿ ಹಾಗೂ ಖರ್ಚಿಗೆ ಹಣ ನೀಡುವರು ಎಂಬ ವದಂತಿ ನಗರದಾದ್ಯಂತ ಹಬ್ಬಿದೆ. ಎಸ್.ಎನ್. ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ಸಹ ಸಾರ್ವಜನಿಕವಾಗಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವವರಿಗೆ ಉಚಿತವಾಗಿ ಗಣೇಶನ ಮೂರ್ತಿ ನೀಡುತ್ತಾರೆ ಎಂಬ ಮಾತುಗಳಿವೆ. ಇದರಿಂದ ಗಲ್ಲಿಗಲ್ಲಿಗಳಲ್ಲಿ ಗಣಪನನ್ನು ಪ್ರತಿಷ್ಠಾಪಿಸಲು ಯುವಕರು ಮುಂದಾಗುತ್ತಿದ್ದಾರೆ.

ಇದುವರೆಗೂ ನಗರದ ಪೊಲೀಸ್ ಠಾಣೆಗೆ ಸಾರ್ವಜನಿಕವಾಗಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅನುಮತಿ ಕೋರಿ ಇಪ್ಪತ್ತು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಸರ್ಕಾರದ ಆದೇಶ ಶಿಡ್ಲಘಟ್ಟ ನಗರ ಹಾಗೂ ತಾಲ್ಲೂಕಿನಲ್ಲಿ ಯಾವ ರೀತಿಯಾಗಿ ಪಾಲಿಸಲಾಗುತ್ತದೆ ಎಂಬ ಆಧಾರದ ಮೇಲೆ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ. ಒಟ್ಟಾರೆ ಅಡಕತ್ತರಿಯಲ್ಲಿ ಸಿಲುಕಿದ ಮೂರ್ತಿಗಳ ವ್ಯಾಪಾರಿಗಳು ಕೈಸುಟ್ಟುಕೊಳ್ಳುವುದು ನಿಚ್ಚಳವಾಗಿದೆ.

ಬೀದಿಪಾಲಾದ ಕಲಾವಿದರು
ಚಿಂತಾಮಣಿ:
ತಾಲ್ಲೂಕಿನಲ್ಲಿ ಗಣೇಶ ಚತುರ್ಥಿಗೂ ಏಳೆಂಟು ತಿಂಗಳ ಮುನ್ನವೇ ಮೂರ್ತಿಗಳ ತಯಾರಿಕೆ ಆರಂಭವಾಗುತ್ತದೆ. ತಲೆ ತಲಾಂತರಗಳಿಂದ ಗಣಪತಿ ತಯಾರಿಕೆಯನ್ನೇ ವೃತ್ತಿಯಾಗಿಸಿಕೊಂಡಿದ್ದ ಕಲಾವಿದರು ಆರ್ಥಿಕ ಸಂಕಷ್ಟದಿಂದ ತತ್ತರಿಸುವಂತಾಗಿದೆ.

ಪ್ರತಿವರ್ಷ ಪರಿಸರ ಸ್ನೇಹಿಯಾದ ಸಣ್ಣ ಗೌರಿ, ಗಣೇಶ ಮೂರ್ತಿಗಳು, ದೊಡ್ಡ, ದೊಡ್ಡ ಮೂರ್ತಿಗಳು ನಗರದ ರಸ್ತೆಬದಿಗಳಲ್ಲಿ ರಾರಾಜಿಸುತ್ತಿರುತ್ತಿದ್ದವು. ಈ ಬಾರಿ ಇನ್ನೂ ಗಣೇಶನ ಸುಳಿವೇ ಇಲ್ಲ. ಗಣಪತಿಗಳ ಮಾರಾಟಕ್ಕೆ ಅನುಮತಿ ಇದೆಯೊ, ಇಲ್ಲವೊ ಎಂಬುದು ಗೊತ್ತಿಲ್ಲದೆ ಕಲಾವಿದರು ಕಂಗಾಲಾಗಿದ್ದಾರೆ. ಸಾಲ ಮಾಡಿ ಈಗಾಗಲೇ ಬಂಡವಾಳ ಹಾಕಿರುವ ಕಲಾವಿದರು ಆತಂಕಕ್ಕೆ ಒಳಗಾಗಿದ್ದಾರೆ.

ನಗರದ ಪ್ರಭಾಕರ್ ಬಡಾವಣೆಯ ರಸ್ತೆ ಸಾರಿಗೆ ಸಂಸ್ಥೆಯ ಹಿಂಭಾಗದಲ್ಲಿ ದೊಡ್ಡ ಶೆಡ್ ಹಾಕಿಕೊಂಡು ವೆಂಕಟರವಣಪ್ಪ ಕುಟುಂಬ ಗಣಪತಿಗಳನ್ನು ತಯಾರಿಸುತ್ತಿದ್ದಾರೆ. ಗಣಪನ ತಯಾರಿಕೆಗೆ ಅಗತ್ಯವಾದ ಪೇಪರ್ ಮತ್ತಿತರ ಕಚ್ಚಾವಸ್ತುಗಳನ್ನು ತಮಿಳುನಾಡಿನಿಂದ ತರಿಸಿಕೊಳ್ಳುತ್ತಾರೆ. ಬಹುತೇಕ ಅಗತ್ಯವಿಲ್ಲದೆ ಬಿಸಾಡುವ ಕಚ್ಚಾವಸ್ತುಗಳನ್ನು ಉಪಯೋಗಿಸುತ್ತಾರೆ.

‘ತಾತನ ಕಾಲದಿಂದಲೂ ಇದೇ ವೃತ್ತಿ ನಂಬಿಕೊಂಡು ಬದುಕುತ್ತಿದ್ದೇವೆ. ನಮ್ಮ ತಂದೆಗೆ 5 ಜನ ಸಹೋದರರು. ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಎಲ್ಲರೂ ಇದೇ ಕೆಲಸ ಮಾಡುತ್ತಾರೆ’ ಎಂದು ವೆಂಕಟರವಣಪ್ಪ ಅವರ ಪುತ್ರ ಶ್ರೀನಿವಾಸ್ ತಿಳಿಸಿದರು.

ಬೇಡಿಕೆ ಕುಸಿದ ಕಾರಣ ಕೆಲಸಗಾರರನ್ನು ವಾಪಸ್ ಕಳುಹಿಸಿದ್ದಾರೆ. ತಂದೆ, ತಾಯಿ ಹಾಗೂ ಇಬ್ಬರು ಮಕ್ಕಳು ಗಣಪತಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

ಮುಂಗಡ ಬೇಡಿಕೆಯೇ ಇಲ್ಲ
ಕೊರೊನಾ ಸೋಂಕು ಕಡಿಮೆ ಆಗಿದ್ದರಿಂದ ಸಾಕಷ್ಟು ಗಣಪತಿಗಳನ್ನು ತಯಾರಿಸಿದ್ದೆವು. ಐದಾರು ಲಕ್ಷ ಸಾಲ ಮಾಡಿ ಬಂಡವಾಳ ಹಾಕಿದ್ದೇವೆ. ಪ್ರತಿ ತಿಂಗಳು ಬಡ್ಡಿ ಕಟ್ಟಬೇಕು. ಪ್ರತಿವರ್ಷ ಈ ವೇಳೆಗೆ ಬಹುತೇಕ ಮುಂಗಡ ಬುಕ್ಕಿಂಗ್ ಮಾಡುತ್ತಿದ್ದರು. ಈ ವರ್ಷ ಇದುವರೆಗೂ ಒಂದು ಬೇಡಿಕೆಯೂ ಬಂದಿಲ್ಲ. ಬಡ್ಡಿ ಹೇಗೆ ಕಟ್ಟುವುದು, ಸಾಲ ಹೇಗೆ ತೀರಿಸುವುದು? ದಿಕ್ಕು ತೋಚದಂತಾಗಿದೆ.
-ಶ್ರೀನಿವಾಸ್,ಗಣಪತಿ ಮೂರ್ತಿ ತಯಾರಕರು, ಚಿಂತಾಮಣಿ

ದುಡಿಮೆಗೂ ಪೆಟ್ಟ
ಗಣೇಶ ಹಬ್ಬದ ಸಂದರ್ಭದಲ್ಲಿ ಕೆಲಸ ಉತ್ತಮವಾಗಿ ದೊರೆಯುತ್ತಿತ್ತು. ಇಂದು ಒಂದು ಕಡೆಗೆ ಹೋದರೆ ನಾಳೆ ಮತ್ತೊಂದು ಕಡೆಗೆ ನಾದಸ್ವರ ನುಡಿಸಲು ಮೂರ್ನಾಲ್ಕು ಜನರು ಹೋಗುತ್ತಿದ್ದೆವು. ಇಂತಿಷ್ಟು ಎಂದು ಹಣ ಪಡೆಯುತ್ತಿದ್ದೆವು. ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಕಳೆದ ವರ್ಷ ನಡೆಯಲಿಲ್ಲ. ಈಗಲೂ ಕಷ್ಟದ ಸ್ಥಿತಿ ಇದೆ. ಅಂದ ಮೇಲೆ ನಮ್ಮ ದುಡಿಮೆಗೂ ಪೆಟ್ಟು.
-ಗೋಪಾಲಪ್ಪ,ನಾದಸ್ವರ ಕಲಾವಿದರು, ಚಿಕ್ಕಬಳ್ಳಾಪುರ

ವ್ಯಾಪಾರ ಇಲ್ಲ
ಬೇರೆ ಕಡೆಗಳಿಂದ ಗಣೇಶಮೂರ್ತಿಗಳನ್ನು ಖರೀದಿಸಿ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದೆ. ಆದರೆ, ಕಳೆದ ವರ್ಷ ವ್ಯಾಪಾರ ನಡೆಯಲಿಲ್ಲ. ಈ ಬಾರಿ ಸುಮ್ಮನಿದ್ದೇನೆ. ಬಂಡವಾಳ ಹೂಡಿ ಸುಮ್ಮನೆ ನಷ್ಟವನ್ನು ಏಕೆ ಮಾಡಿಕೊಳ್ಳಬೇಕು.
-ರಾಮಕುಮಾರ್,ವ್ಯಾಪಾರಿ, ಚಿಕ್ಕಬಳ್ಳಾಪುರ

___

-ಡಿ.ಎಂ. ಕುರ್ಕೆ ಪ್ರಶಾಂತ್,ಎಂ. ರಾಮಕೃಷ್ಣಪ್ಪ, ಡಿ.ಜಿ. ಮಲ್ಲಿಕಾರ್ಜುನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT