ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುದಗಾನುಕುಂಟೆ: ಭಕ್ತರಿಗೆ ಸಿಗದ ಸೌಲಭ್ಯ

ಭಗೀರಥಿ ದೇಗುಲದಲ್ಲಿ ಹೊರ ಜಿಲ್ಲೆ, ರಾಜ್ಯದಿಂದಲೂ ಭಕ್ತರು
Published 18 ಜೂನ್ 2024, 7:26 IST
Last Updated 18 ಜೂನ್ 2024, 7:26 IST
ಅಕ್ಷರ ಗಾತ್ರ

ಗೌರಿಬಿದನೂರು: ಇತಿಹಾಸ ಪ್ರಸಿದ್ಧ ಮುದಗಾನುಕುಂಟೆ ಗಂಗಾ ಭಗೀರಥಿ ದೇವಸ್ಥಾನಕ್ಕೆ ಪ್ರತಿ ಸೋಮವಾರ ಜಿಲ್ಲೆಯಷ್ಟೇ ಅಲ್ಲ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಭಕ್ತರು ಭೇಟಿ ನೀಡುತ್ತಾರೆ.

ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮತ್ತು ಸಂತಾನ ಇಲ್ಲದವರು ಸಂತಾನ ಕರುಣಿಸಲು ಗಂಗಾ ಭಗೀರಥಿ ದೇವಿಯಲ್ಲಿ ಪ್ರಾರ್ಥಿಸಿಕೊಳ್ಳುವರು. ಹೀಗೆ ದೊಡ್ಡ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡುತ್ತಿರುವ ಮತ್ತು ಪ್ರಸಿದ್ಧ ದೇವಾಲಯದಲ್ಲಿ ಭಕ್ತರಿಗೆ ಕನಿಷ್ಠ ಮೂಲ ಸೌಕರ್ಯಗಳು ಸಹ ದೊರೆಯುತ್ತಿಲ್ಲ. ಮೂಲ ಸೌಕರ್ಯ ಕಲ್ಪಿಸುವಲ್ಲಿ ಮುಜರಾಯಿ ಇಲಾಖೆ ಪೂರ್ಣವಾಗಿ ವಿಫಲವಾಗಿದೆ.

ದೇವಸ್ಥಾನದ ಆವರಣದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಇಲ್ಲ. ‘ಯಾತ್ರಿಕರಿಗೆ ಹೊಸ ವಸತಿ ಕಟ್ಟಡಗಳನ್ನು ನಿರ್ಮಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ಸರ್ಕಾರ ಮಾತ್ರ ಈವರೆಗೂ ವಸತಿ, ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಯೋಜನೆ ಕೈಗೊಂಡಿಲ್ಲ ಎಂದು ಭಕ್ತರು ಆರೋಪಿಸುವರು.

ಹರಕೆ ಹೊತ್ತ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಕಲ್ಯಾಣಿಯಲ್ಲಿ ಮಿಂದು ನಂತರ ಅವರು ಬಟ್ಟೆ ಬದಲಾಯಿಸಿಕೊಳ್ಳುವರು. ಇಲ್ಲಿ ಕೊಠಡಿಗಳ ಕೊರತೆ ಇದೆ. ಸಾವಿರಾರು ಭಕ್ತರಿಗೆ ಬೆರಳೆಣಿಕೆಯಷ್ಟು ಬಾಗಿಲಿಲ್ಲದ ಕೊಠಡಿಗಳು ಇವೆ. ಮಹಿಳಾ ಭಕ್ತರು ಬಟ್ಟೆ ಬದಲಾಯಿಸಿಕೊಳ್ಳಲು ಪರದಾಡುವ ಸ್ಥಿತಿ ಇದೆ.

ಶೌಚಾಲಯದ ಕೊರತೆ: ಇಲ್ಲಿಗೆ ಬರುವ ಭಕ್ತರು ಮಹಿಳೆಯರೇ ಆಗಿದ್ದಾರೆ. ಆದರೆ ಇಲ್ಲಿ ಶೌಚಾಲಯಗಳು ಸಹ ದೊಡ್ಡ ಸಂಖ್ಯೆಯಲ್ಲಿ ಇಲ್ಲ. ಇರುವ ಒಂದೆರೆಡು ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಭಕ್ತರು ಬಯಲಲ್ಲೇ ಶೌಚಾಲಯಕ್ಕೆ ಪರದಾಡುವಂತಾಗಿದೆ.

ಕುಡಿಯುವ ನೀರಿನ ವ್ಯವಸ್ಥೆ ಹೆಸರಿಗಷ್ಟೇ ಎನ್ನುವಂತಿದೆ. ಒಂದೆರಡು ನಳಗಳಿದ್ದರೂ ಅವು ಕಂಡೂ ಕಾಣದಂತಿವೆ. ಭಕ್ತರಿಗೆ ಕುಡಿಯುವ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ.

ಇಲ್ಲಿಗೆ ಬರುವ ಭಕ್ತರಲ್ಲಿ ಕೆಲವರು ತಾವೇ ಪ್ರಸಾದವನ್ನು ತಯಾರಿಸಿ ತಂದು, ಬೇಕಾ ಬಿಟ್ಟಿಯಾಗಿ ಬಡಿಸುವುದರಿಂದ, ಎಲ್ಲೆಂದರಲ್ಲಿ ಅನ್ನವನ್ನು ಚೆಲ್ಲಾಡಿರುವ ದೃಶ್ಯ ಸಾಮಾನ್ಯವಾಗಿದೆ.

ಪ್ರಸಾದ ಸೇವಿಸುವುದಕ್ಕೆ ದೇವಸ್ಥಾನದ ಅವರಣದಲ್ಲಿ ಸಣ್ಣ ಜಾಗವಿದೆ. ಪ್ರಸಾದ ಸೇವಿಸಿದ ನಂತರ ಮಕ್ಕಳು ಅಲ್ಲಿಯೇ ಚೆಲ್ಲಾಡಿರುತ್ತಾರೆ. ನಂತರ ಬರುವವರಿಗೆ ಅನಿವಾರ್ಯವಾಗಿ ಅದರ ಮೇಲೆಯೇ ಕುಳಿತು ಪ್ರಸಾದ ಸೇವಿಸಬೇಕಾಗಿದೆ. ಇದರಿಂದ ಪ್ರಸಾದ ತುಳಿದುಕೊಂಡೆ ಓಡಾಡುವ ಅನಿವಾರ್ಯತೆ ಎದುರಾಗಿದೆ.

ದೇವಸ್ಥಾನದಲ್ಲಿ ಸೋಮವಾರ ಮಾತ್ರ ದೇವರ ಕಾರ್ಯಗಳು ನಡೆಯುವುದರಿಂದ ಅಂದು ಹೆಚ್ಚು ಭಕ್ತರು ಬರುವರು. ಇದನ್ನು ಅಧಿಕಾರಿಗಳು ಮನಗಂಡಿದ್ದರೂ ಇದಕ್ಕೆ ಬೇಕಾದ ಯಾವುದೇ ಕ್ರಮ ಕೈಗೊಂಡಿಲ್ಲ, ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸಿರುವುದರಿಂದ ಹೊರ ಹೋಗಲು ವಾಹನಗಳು ಹರಸಾಹಸ ಪಡಬೇಕಾಗಿದೆ.

ವಾಹನಗಳ ಸುಂಕವನ್ನು ದೇವಸ್ಥಾನದ ಹೆಬ್ಬಾಗಿಲ ಬಳಿ ಸಂಗ್ರಹಿಸುತ್ತಿಲ್ಲ. ಗೌರಿಬಿದನೂರಿ, ಚಿಕ್ಕಬಳ್ಳಾಪುರ ರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿಯೇ ಸುಂಕಕ್ಕಾಗಿ ವಾಹನಗಳನ್ನು ತಡೆಯಲಾಗುತ್ತಿದೆ. ಬೇರೆಡೆ ಹೋಗುವ ವಾಹನ ಸವಾರರಿಗೆ ಇದರಿಂದ ಕಿರಿಕಿರಿ ಆಗುತ್ತಿದೆ.

ಸೂಕ್ತ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಭಕ್ತರು ಮನವಿ ಮಾಡುವರು. 

ಮುದಗಾನುಕುಂಟೆಯಲ್ಲಿ ಶೌಚಾಲಯಕ್ಕೆ ಬೀಗ
ಮುದಗಾನುಕುಂಟೆಯಲ್ಲಿ ಶೌಚಾಲಯಕ್ಕೆ ಬೀಗ
ಮುದಗಾನುಕುಂಟೆಯಲ್ಲಿ ಅವ್ಯವಸ್ಥೆ
ಮುದಗಾನುಕುಂಟೆಯಲ್ಲಿ ಅವ್ಯವಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT