ಶನಿವಾರ, ಜುಲೈ 2, 2022
25 °C
ಶಾಸಕರ ಆಯ್ಕೆಪಟ್ಟಿಗೂ ಕಿಮ್ಮತ್ತು ನೀಡದ ಅಧಿಕಾರಿಗಳು; ಕೆಡಿಪಿಯಲ್ಲಿ ಪ್ರಸ್ತಾಪಿಸಲು ಸುಬ್ಬಾರೆಡ್ಡಿ ಸಜ್ಜು

ಬಾಗೇಪಲ್ಲಿಯಲ್ಲಿ ಹಳ್ಳಹಿಡಿದ ಗಂಗಾ ಕಲ್ಯಾಣ!

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಗಡಿ ತಾಲ್ಲೂಕು ಬಾಗೇಪಲ್ಲಿ ನಿರ್ಲಕ್ಷ್ಯ ಎನ್ನುವ ಹಣೆಪಟ್ಟಿಯುಳ್ಳ ತಾಲ್ಲೂಕು.  ಅಧಿಕಾರಿಗಳು ಈ ತಾಲ್ಲೂಕಿಗೆ ಬರಲು ಹಿಂದೇಟು ಹಾಕುವರು. ಬಂದ ಅಧಿಕಾರಿಗಳು ಸಹ ಕಾಂಚಾಣ ಬಿಚ್ಚದೆ ಜನರ ಕೆಲಸ ಮಾಡಿಕೊಡುವುದಿಲ್ಲ ಎನ್ನುವ ಮನಸ್ಥಿತಿಯುಳ್ಳವರು. ಈ ವಿಚಾರವಾಗಿ ಖುದ್ದು ಶಾಸಕರೇ ಸಭೆಗಳಲ್ಲಿ ದಾಖಲೆ ಸಮೇತ ಆಕ್ರೋಶ ವ್ಯಕ್ತಪಡಿಸಿದ ನಿದರ್ಶನಗಳಿವೆ. 

ಹೌದು, 2016–2017 ಮತ್ತು 2017–18ನೇ ಸಾಲಿನಲ್ಲಿ ಬಾಗೇಪಲ್ಲಿ ತಾಲ್ಲೂಕಿಗೆ ಮಂಜೂರಾಗಿರುವ ಕೊಳವೆಬಾವಿಗಳನ್ನು ಇಂದಿಗೂ ಕೊರೆದಿಲ್ಲ. ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಸಂಬಂಧಿಸಿದ ನಿಗಮಗಳಿಗೆ ನೀಡಿದ್ದಾರೆ. ಆದರೆ ಆ ಫಲಾನುಭವಿಗಳು ಮಾತ್ರ ಇಂದಿಗೂ ಕೊಳವೆಬಾವಿ ಹೊಂದಲು ಸಾಧ್ಯವಾಗಿಲ್ಲ! ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿದ್ದ ವಿವಾದ ಸಹ ಪರಿಹಾರ ಆಗಿದೆ. 

‘ಫಲಾನುಭವಿಗಳು ಹಣ ನೀಡದಿದ್ದರೆ ಅಧಿಕಾರಿಗಳು ಕೊಳವೆಬಾವಿ ಕೊರೆಯುವುದೇ ಇಲ್ಲ’ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸುವರು. ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿಯ ಆಸೆ ಹೊಂದಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ನಿಗಮದ ಕಚೇರಿಗಳಿಗೆ ಅಲೆಯುತ್ತಿದ್ದಾರೆ.

2016–2017ನೇ ಸಾಲಿನಲ್ಲಿ ಬಾಗೇಪಲ್ಲಿ ತಾಲ್ಲೂಕಿಗೆ ಡಾ.ಬಿ.ಆರ್.ಅಂಬೇಡ್ಕರ್ ನಿಗಮ, ತಾಂಡಾ ಅಭಿವೃದ್ಧಿ, ಭೋವಿ ಅಭಿವೃದ್ಧಿ ಮತ್ತು ಆದಿಜಾಂಭವ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ 38 ಕೊಳವೆಬಾವಿಗಳನ್ನು ಕೊರೆಯಲು ಗುರಿ ನಿಗದಿಯಾಗಿದೆ. ಇವುಗಳಲ್ಲಿ 27 ಕೊಳವೆಬಾವಿಗಳನ್ನು ಮಾತ್ರ ಕೊರೆಯಲಾಗಿದೆ. ಐದು ವರ್ಷಗಳಿಂದ 11 ಕೊಳವೆಬಾವಿಯನ್ನು ಕೊರೆದಿಲ್ಲ.

2017–2018ನೇ ಸಾಲಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನಿಗಮ, ತಾಂಡಾ ಅಭಿವೃದ್ಧಿ, ಭೋವಿ ಅಭಿವೃದ್ಧಿ ಮತ್ತು ಆದಿಜಾಂಭವ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ 40 ಕೊಳವೆಬಾವಿಗಳನ್ನು ಕೊರೆಯಲು ಗುರಿ ನಿಗದಿಯಾಗಿದೆ. ಇವುಗಳಲ್ಲಿ 21 ಕೊಳವೆಬಾವಿಗಳನ್ನು ಮಾತ್ರ ಕೊರೆಯಲಾಗಿದೆ. 19 ಕೊಳವೆಬಾವಿಯನ್ನು ಕೊರೆದಿಲ್ಲ. ಹೀಗೆ ನಾಲ್ಕೈದು ವರ್ಷಗಳ ಕೊಳವೆಬಾವಿಗಳೇ ಇಂದಿಗೂ ಮುಕ್ತಿ ಕಂಡಿಲ್ಲ. 

ಈ ವಿಚಾರವಾಗಿ ಶಾಸಕ ಸುಬ್ಬಾರೆಡ್ಡಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸದನದಲ್ಲಿ ಪ್ರಶ್ನೆ ಸಹ ಕೇಳಿದ್ದಾರೆ. 

‘2016–17ನೇ ಸಾಲಿನ ಪಟ್ಟಿಯಲ್ಲಿ 8 ಫಲಾನುಭವಿಗಳು ಸೌಲಭ್ಯಕ್ಕೆ ಅರ್ಹರಾಗಿಲ್ಲ. ಮೂರು ಫಲಾನುಭವಿಗಳ ಪಟ್ಟಿಯನ್ನು ಆಯ್ಕೆ ಸಮಿತಿ ನೀಡಿಲ್ಲ. 2017–18ರ ಪಟ್ಟಿಯಲ್ಲಿ 11 ಫಲಾನುಭವಿಗಳು ಅರ್ಹರಿಲ್ಲ. ಇಬ್ಬರಿಗೆ ಕಾರ್ಯಾದೇಶ ನೀಡಲಾಗಿದೆ. ಆರು ಫಲಾನುಭವಿಗಳ ಆಯ್ಕೆಪಟ್ಟಿಯನ್ನು ಸಮಿತಿ ನೀಡಿಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆ ಉತ್ತರಿಸಿದೆ. 

ಟ್ರಾನ್ಸ್‌ಫಾರ್ಮರ್ ಕೊಟ್ಟಿಲ್ಲ: ನಾಲ್ಕೈದು ವರ್ಷಗಳ ಹಿಂದೆ ಕೊರೆದ ಕೊಳವೆಬಾವಿಗೆ ಹಲವು ಕಡೆ ಇಂದಿಗೂ ಪಂಪ್, ಮೋಟರ್ ಕೊಟ್ಟಿಲ್ಲ. ಕೆಲವರಿಗೆ ಟ್ರಾನ್ಸ್‌ಫಾರ್ಮರ್ ಕೊಟ್ಟಿಲ್ಲ. ಈಗ ಆ ಕೊಳವೆಬಾವಿಯಲ್ಲಿ ನೀರು ಇರುತ್ತದೆಯೇ ಎಂದು ಶಾಸಕ ಸುಬ್ಬಾರೆಡ್ಡಿ ಪ್ರಶ್ನಿಸುವರು.

ರೈತರು ಕೊಳವೆಬಾವಿ ಕೊರೆಯಲು ಹಣ ನೀಡದಿದ್ದರೆ ಡೀಸೆಲ್ ಬೆಲೆ ಹೆಚ್ಚಿತ್ತು. ನಮಗೆ ಸರಿ ಹೋಗುವುದಿಲ್ಲ ಎಂದು ಸಲ್ಲದ ಸಬೂಬುಗಳನ್ನು ಅಧಿಕಾರಿಗಳು, ಗುತ್ತಿಗೆದಾರರು ಹೇಳುತ್ತಾರೆ ಎಂದರು. 

***

‘ಹಣ ನೀಡಿದ ರೈತರ ಕರೆತರುವೆ’

ನಾವು ಆಯ್ಕೆ ಪಟ್ಟಿ ನೀಡಿದರೂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೊಳವೆಬಾವಿ ಕೊರೆಯುತ್ತಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಿಕೊಡಲು ಅಧಿಕಾರಿಗಳಿಗೆ ಯಾರು ಹಣ ಕೊಟ್ಟಿದ್ದಾರೊ ಅಂತಹವ ರೈತರನ್ನು ಮುಂದಿನ ಕೆಡಿಪಿ ಸಭೆಗೆ ಕರೆ ತರುವೆ
ಎಂದು ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಮುಂದೆಯೇ ಯಾವ ಅಧಿಕಾರಿಗೆ, ಮಧ್ಯವರ್ತಿಗೆ ಯಾವ ರೈತರು ಎಷ್ಟು ಹಣ ಕೊಟ್ಟಿದ್ದಾರೆ ಎನ್ನುವುದನ್ನು ಹೇಳಿಸುವೆ. ಶಾಸಕನಾದ ನಾನು ಪಟ್ಟಿ ನೀಡಿದರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ರೈತರೊಬ್ಬರು ಬ್ರೋಕರ್‌ಗೆ, ಅಧಿಕಾರಿಗೆ, ಗುತ್ತಿಗೆದಾರರಿಗೆ ಎಂದು ₹ 50 ಸಾವಿರ ನೀಡಿದ್ದಾರೆ. ಹೀಗೆ ಹಣ ಕೊಟ್ಟ ರೈತರನ್ನೆಲ್ಲ ಸಭೆಗೆ ಕರೆ ತರುವೆ ಎಂದು ಹೇಳಿದರು. 

ಅಧಿಕಾರಿಗಳು ಮಧ್ಯವರ್ತಿಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. 600 ಅಡಿ ಕೊಳವೆಬಾವಿ ಕೊರೆದರೆ 900 ಅಡಿಗೆ ಬಿಲ್ ಮಾಡಿಕೊಳ್ಳುವರು ಎಂದು ದೂರಿದರು. 

ನಾಲ್ಕೈದು ವರ್ಷದ ಹಿಂದಿನದ್ದೇ ಕೊಳವೆಬಾವಿ ಕೊರೆದಿಲ್ಲ. ಅಧಿಕಾರಿಗಳು ಭ್ರಷ್ಟ ರಲ್ಲದಿದ್ದರೆ 2020–21ರಲ್ಲಿ ಅದೇ ಗುತ್ತಿಗೆದಾರರು ಟೆಂಡರ್ ಹಾಕಲು ಹೇಗೆ ಬಿಡುತ್ತೀರಿ. ಆತನನ್ನು ಕಪ‍್ಪುಪಟ್ಟಿಗೆ ಸೇರಿಸಬೇಕು ಅಲ್ಲವೇ ಎಂದು ಪ್ರಶ್ನಿಸಿದರು. 

***

ಗುತ್ತಿಗೆದಾರರಿಗೆ ನೋಟಿಸ್

ಬಾಕಿ ಇರುವ ಅರ್ಹ ಫಲಾನುಭವಿಗಳಿಗೆ ಕೊಳವೆಬಾವಿ ಕೊರೆಯುವ ವಿಚಾರವಾಗಿ ಗುತ್ತಿಗೆದಾರರಿಗೆ 2021ರ ಸೆಪ್ಟೆಂಬರ್ ಮತ್ತು 2022ರ ಜನವರಿಯಲ್ಲಿ ನೋಟಿಸ್ ಸಹ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು