ಮಂಗಳವಾರ, 27 ಜನವರಿ 2026
×
ADVERTISEMENT
ADVERTISEMENT

ಸಂದರ್ಶನ | ಕಾಲೇಜು ದಿನಗಳಲ್ಲಿಯೇ ರಾಜಕಾರಣದ ಅನುಭವ: ಕೆ.‍ಎಚ್.ಪುಟ್ಟಸ್ವಾಮಿಗೌಡ

Published : 20 ಮೇ 2023, 23:36 IST
Last Updated : 20 ಮೇ 2023, 23:36 IST
ಫಾಲೋ ಮಾಡಿ
Comments
ಪ್ರ

ನೀವು ಮತ್ತು ನಿಮ್ಮ ಅಳಿಯ (ಶರತ್ ಬಚ್ಚೇಗೌಡ) ವಿಧಾನಸಭೆ ಪ್ರವೇಶಿಸಿದ್ದೀರಿ. ರಾಜಕಾರಣದಲ್ಲಿ ನಿಮ್ಮ ಅಳಿಯನೇ ಸೀನಿಯರ್ ಅಲ್ಲವೇ...

ನನಗೆ ಚುನಾವಣಾ ರಾಜಕಾರಣದಲ್ಲಿ ಹೆಚ್ಚಿನ ಆಸಕ್ತಿ ಇದಿದ್ದರೆ ಈ ಹಿಂದೆಯೇ ಸ್ಪರ್ಧೆ ಮಾಡುತ್ತಿದ್ದೆ. ಅಳಿಯನನ್ನು ಗೆಲ್ಲಿಸಿಕೊಳ್ಳೋಣ ಎಂದು 2019ರ ಉಪಚುನಾವಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದೆ. ಅವರು ಗೆದ್ದರು. ಈ ಹಿಂದೆ ಅಳಿಯ ಸೋಲು ಅನುಭವಿಸಿದಾಗ, ‘ನೀವು ಇನ್ನೂ ಯುವಕರಿದ್ದೀರಿ. ರಾಜಕೀಯವಾಗಿ ಅವಕಾಶಗಳು ಇವೆ ಎಂದು ಧೈರ್ಯ ತುಂಬಿದ್ದೆ. ನಾನು ಸಕ್ರಿಯ ರಾಜಕಾರಣವನ್ನು ಇತ್ತೀಚಿನ ವರ್ಷಗಳಲ್ಲಿ ಮಾಡಿದರೂ ನನಗೆ ರಾಜಕೀಯದ ಬಗ್ಗೆ ಆಸಕ್ತಿ ಕಾಲೇಜು ದಿನಗಳಿಂದಲೇ ಇತ್ತು. ಕಾಲೇಜು ದಿನಗಳಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ನಡೆದ ಹೋರಾಟಗಳಲ್ಲಿ ಭಾಗಿಯಾಗಿದ್ದೆ. ಜಯಪ್ರಕಾಶ್ ನಾರಾಯಣ್ ಅವರ ಅಭಿಮಾನಿಯಾಗಿ ಕಾಂಗ್ರೆಸ್ ವಿರೋಧಿ ಆಂದೋಲನಗಳಲ್ಲಿ ಭಾಗಿಯಾಗಿದ್ದೆ. ರಾಮಕೃಷ್ಣ ಹೆಗಡೆ, ದೇವೇಗೌಡರ ರಾಜಕಾರಣವನ್ನು ಗಮನಿಸಿದ್ದೇನೆ. ಸಕ್ರಿಯ ರಾಜಕಾರಣ ಪ್ರವೇಶಿಸದಿದ್ದರೂ ಮತ್ತೊಬ್ಬರಿಗೆ ಈ ವಿಚಾರವಾಗಿ ಸಲಹೆಗಳನ್ನು ನೀಡುವಷ್ಟು ಅನುಭವ ಮತ್ತು ರಾಜಕೀಯದ ಅರಿವು ಮುಂಚೆಯಿಂದಲೂ ಇತ್ತು.  

ಪ್ರ

ಕಾಂಗ್ರೆಸ್ ಸರ್ಕಾರ ಇದೆ. ವಿಶೇಷ ಅನುದಾನ ತರುವ ಸವಾಲು ನಿಮ್ಮ ಮುಂದಿದೆ ?

ಜನರು ಇಷ್ಟು ದೊಡ್ಡ ಅಂತರದಿಂದ ಗೆಲ್ಲಿಸಿದ್ದಾರೆ. ಗೆಲುವು ಸಾಧಿಸಿದ ನಂತರ ಕೆಲಸ ಮಾಡಲಿಲ್ಲ ಎಂದರೆ ಕೆಟ್ಟ ಹೆಸರು ಬರುತ್ತದೆ. ಫಲಿತಾಂಶ ಘೋಷಣೆಗೂ ಮುನ್ನ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಕರೆ ಮಾಡಿ ‘ನೀವು ಗೆಲ್ಲುವುದು ಖಾತ್ರಿ ಇದೆ. ಕಾಂಗ್ರೆಸ್ ಬೆಂಬಲಿಸಿ’ ಎಂದರು. ನಂತರ ಭೇಟಿ ಮಾಡಿ ಮಾತುಕತೆ ನಡೆಸಿದೆ. ತಾಲ್ಲೂಕಿನ ಅಭಿವೃದ್ಧಿ ವಿಚಾರವಾಗಿ ಸಹಕರಿಸಿ ಎಂದು ಕೇಳಿದ್ದೇನೆ.

ಪ್ರ

ಗೌರಿಬಿದನೂರಿನಲ್ಲಿ ಕಬ್ಬಿನ ಕಾರ್ಖಾನೆ ಪುನರಾರಂಭದ ಆಲೋಚನೆ ಇದೆಯಾ? 

ಕಬ್ಬಿನ ಕಾರ್ಖಾನೆ ಆರಂಭಿಸಲಾಗುವುದು ಎಂದು ಇಲ್ಲಿನ ಮಾಜಿ ಶಾಸಕರು ಪ್ರತಿ ಚುನಾವಣೆ ಸಮಯದಲ್ಲಿ ಆಶ್ವಾಸನೆ ಕೊಡುತ್ತಿದ್ದರು. ಕಬ್ಬಿನ ಕಾರ್ಖಾನೆ ಖಾಸಗಿ ಸ್ವತ್ತು. ಅದನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಖಾಸಗಿಯವರು ಕಾರ್ಖಾನೆ ಆರಂಭಿಸುತ್ತೇವೆ ಎಂದು ಹೇಳಬೇಕು. ಮತಕ್ಕಾಗಿ ಸುಳ್ಳು ಹೇಳಲು ನನಗೆ ಬರುವುದಿಲ್ಲ.

ಪ್ರ

ಒಂದು ಕಾಲದಲ್ಲಿ ಉತ್ತರ ಪಿನಾಕಿನಿ ಗೌರಿಬಿದನೂರಿನ ಜೀವ ನದಿ ಎನಿಸಿತ್ತು. ಈಗ ಒತ್ತುವರಿಯಿಂದ ನಲುಗಿದೆ. ಉತ್ತರ ಪಿನಾಕಿನಿ ಪುನಶ್ಚೇತನಕ್ಕೆ ಕ್ರಮಕೈಗೊಳ್ಳುವಿರಾ? 

ಉತ್ತರ ಪಿನಾಕಿನಿ ನದಿಯಿಂದ ದೊಡ್ಡ ಪ್ರಮಾಣದಲ್ಲಿ ಮರಳು ತೆಗೆದಿದ್ದಾರೆ. ಬೆಂಗಳೂರಿಗೆ ಮರಳಿನ ಮೂಲ ಉತ್ತರ ಪಿನಾಕಿನಿ ಎನ್ನುವಂತೆ ಇತ್ತು. ಇಲ್ಲಿ ಯಾರು ಆಡಳಿತದಲ್ಲಿ ಇದ್ದರೊ ಅವರೇ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ. 20 ವರ್ಷಗಳ ನಂತರ ಇತ್ತೀಚೆಗೆ ಉತ್ತರ ಪಿನಾಕಿನಿ ತುಂಬಿ ಹರಿದಿದೆ. ನಗರಕ್ಕೆ ಇಲ್ಲಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಬಹುದು. ಆದರೆ ನೀರಾವರಿ ಯೋಜನೆ ಕಷ್ಟ.

ಪ್ರ

ಗೌರಿಬಿದನೂರು ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ನಿಮ್ಮ ಆದ್ಯತೆಗಳು ಏನು? 

ಜನರಿಗೆ ಮೂಲಸೌಕರ್ಯಗಳು ಇಲ್ಲ. ಸಣ್ಣ ಪುಟ್ಟ ಕಾಯಿಲೆಗಳಿಗೂ ಜನರು ಬೆಂಗಳೂರಿನ ಆಸ್ಪತ್ರೆಗಳಿಗೆ ಹೋಗುವರು. ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಎಲ್ಲ ರೀತಿಯ ಚಿಕಿತ್ಸೆಯ ಸೌಲಭ್ಯಗಳು ಇಲ್ಲ. ಆಸ್ಪತ್ರೆಗಳಲ್ಲಿ ಸೌಲಭ್ಯಗಳು ದೊರೆಯುವಂತೆ ಮಾಡಬೇಕಿದೆ. ಗೌರಿಬಿದನೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಈ ಹಿಂದೆ 15ರಿಂದ 20 ದಿನಕ್ಕೆ ಒಮ್ಮೆ ನೀರು ಕೊಡುತ್ತಿದ್ದರು. ಆಗ ವಾರಕ್ಕೆ ಒಮ್ಮೆ ನೀರು ಪೂರೈಕೆ ಆಗುತ್ತಿದೆ. ದಿನಬಿಟ್ಟು ದಿನ ನೀರು ಕೊಡುವ ವ್ಯವಸ್ಥೆ ಆಗಬೇಕಿದೆ. ಹಳ್ಳಿಗಳಲ್ಲಿ ರಸ್ತೆಗಳು ಸರಿ ಇಲ್ಲ. ರಸ್ತೆಗಳಿಗಾಗಿಯೇ ವಿಶೇಷ ಅನುದಾನ ತರಬೇಕಿದೆ. ಬಡವರಿಗೆ ಮನೆಗಳನ್ನು ಕೊಡುವ ವ್ಯವಸ್ಥೆಯೂ ಸರಿಯಾಗಿ ಆಗಿಲ್ಲ. ಒಳಚರಂಡಿ ವ್ಯವಸ್ಥೆ. ಶಾಲಾ ಕಾಲೇಜು ಅಭಿವೃದ್ಧಿ ಹೀಗೆ ಗೌರಿಬಿದನೂರು ಅಭಿವೃದ್ಧಿಯಿಂದ ತೀರಾ ಹಿಂದುಳಿದಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಆದ್ಯತೆ.

ಪ್ರ

ಗೌರಿಬಿದನೂರು ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಯೋಜನೆಗಳು ಇಂದಿಗೂ ಜಾರಿಯಾಗಿಲ್ಲ. ಈ ವಿಚಾರವಾಗಿ ನಿಮ್ಮ ನಿಲುವು ಏನು? 

ತಾತ್ಕಾಲಿಕವಾಗಿ ಹೇಳಬೇಕು ಎಂದರೆ 2024ರ ಅಂತಿಮ ವೇಳೆಗೆ ಎತ್ತಿನಹೊಳೆ ನೀರು ಗೌರಿಬಿದನೂರಿಗೆ ಬರುತ್ತದೆ. ಕ್ಷೇತ್ರದ ಎಲ್ಲ ಕೆರೆಗಳಿಗೆ ನೀರು ಹರಿಸಬೇಕು. ಇದರಿಂದ ಅಂತರ್ಜಲ ಅಭಿವೃದ್ಧಿ ಆಗುತ್ತದೆ. ಜನರಿಗೂ ಕುಡಿಯುವ ನೀರು ಸಮರ್ಪಕವಾಗಿ ದೊರೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT