ಮಂಗಳವಾರ, ಸೆಪ್ಟೆಂಬರ್ 21, 2021
29 °C

‘ಚುನಾವಣೆ ಎದುರಿಸಲು ಸಿದ್ಧರಾಗಿ’: ಶಾಸಕ ಎನ್.ಎಚ್.ಶಿವಶಂಕರರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ಪಕ್ಷದ ಏಳಿಗೆಗಾಗಿ ದುಡಿಯುವ ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವವಿರುವ ಕಾರ್ಯಕರ್ತರಿಗೆ ಉತ್ತಮ ಸ್ಥಾನಮಾನ ನೀಡಲಾಗುತ್ತದೆ ಎಂದು‌ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

ತಾಲ್ಲೂಕಿನ ಕಾಚಮಾಚೇನಹಳ್ಳಿಯಲ್ಲಿನ ಬೊಮ್ಮಲಿಂಗೇಶ್ವರ ದೇವಾಲಯದಲ್ಲಿ ಭಾನುವಾರ ಕಾಂಗ್ರೆಸ್ ಆಯೋಜಿಸಿದ್ದ ಜಿ.ಪಂ ಮತ್ತು ತಾ.ಪಂ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ತಮ್ಮ  ಅಧಿಕಾರಾವಧಿಯಲ್ಲಿ ವೈದ್ಯಕೀಯ ಸೀಟು ಹಂಚಿಕೆ ವಿಚಾರದಲ್ಲಿ ಇಡೀ ರಾಜ್ಯವನ್ನು ಲೂಟಿ ಮಾಡಿದ್ದಾರೆ. ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಹಣ ಮಾಡುವ ದಂಧೆಗೆ ಮುಂದಾಗಿದ್ದರು. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿ ಅಧಿಕಾರ ಕಳೆದುಕೊಳ್ಳುವ ದುಸ್ಥಿತಿಗೆ ಬಂದಿದೆ ಎಂದರು.

ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಪಕ್ಷದ ಕಾರ್ಯಕರ್ತರು ಸನ್ನದ್ಧರಾಗಬೇಕು. ಕ್ಷೇತ್ರವಾರು ಅಭ್ಯರ್ಥಿಗಳ ಆಯ್ಕೆಗಾಗಿ ಪ್ರತೀ ಹೋಬಳಿ ಹಾಗೂ ಗ್ರಾ.ಪಂ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಎಲ್ಲರ ಅಭಿಪ್ರಾಯದ ಮೇರೆಗೆ ಅಂತಿಮ ಗೊಳಿಸಲಾಗುವುದು. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಈ ಹಿಂದೆ ನಡೆದಂತಹ ತಪ್ಪುಗಳು ಈ ಬಾರಿ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು. ಗ್ರಾಮ ಮತ್ತು ಮನೆಯಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ‌ಜನಪರ ಕಾರ್ಯಕ್ರಮದ ಬಗ್ಗೆ ತಿಳಿಸುವುದು ನಿಮ್ಮೆಲ್ಲರ ಜವಾಬ್ದಾರಿ ಎಂದು
ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ ಮಾತನಾಡಿ, ರಾಜ್ಯ ಹಾಗೂ ಜಿಲ್ಲೆಯಲ್ಲಿ‌ ಬಿಜೆಪಿ ಕಾರ್ಯಕರ್ತರ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ. ಕೊರೊನಾ ಸಂಕಷ್ಟದ ಸ್ಥಿತಿಯನ್ನು ನಿರ್ವಹಣೆ ಮಾಡಲು ವಿಫಲರಾಗಿದ್ದಾರೆ. ಕೇವಲ ಭ್ರಷ್ಟಾಚಾರದ ಕೂಪವಾಗಿರುವ ಬಿಜೆಪಿಗೆ ರಾಜ್ಯದಲ್ಲಿ ಉಳಿಗಾಲವಿಲ್ಲ ಎಂದರು.

ಕಾರ್ಯಕರ್ತರು ಯಾವುದೇ ವೈಮನಸ್ಸು ಇಲ್ಲದೆ ಕಾರ್ಯನಿರ್ವಹಿಸಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದಲ್ಲಿ ನಿಮ್ಮೆಲ್ಲರ ಏಳಿಗೆಗಾಗಿ ಪಕ್ಷದ ವರಿಷ್ಟರು ಶ್ರಮಿಸುತ್ತಾರೆ. ಸ್ಥಳೀಯ ಜಿ.ಪಂ ಹಾಗೂ ತಾ.ಪಂ ಚುನಾವಣೆಗಳು ಸಮೀಪಿಸುತ್ತಿದ್ದು ಪ್ರತಿಯೊಬ್ಬ ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ಭಾವಿಸಿ ಪ್ರತೀ ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಕೆ.ಎಂ.ಗಾಯತ್ರಿ ಬಸವರಾಜ್, ಮಾಜಿ ಜಿ.ಪಂ ಸದಸ್ಯೆ ಎ.ಅರುಂಧತಿ, ಕೆಪಿಸಿಸಿ ಸದಸ್ಯ ಇಬ್ನಿ ಹುಸೇನ್, ಕೆ.ಎಚ್.ಪದ್ಮರಾಜ್ ಜೈನ್, ಆರ್.ಲೋಕೇಶ್, ಬೊಮ್ಮಣ್ಣ, ಬಿ.ಪಿ.ಅಶ್ವತ್ಥನಾರಾಯಣಗೌಡ, ಅಶ್ವತ್ಥಪ್ಪ, ಸೋಮಯ್ಯ, ಎಚ್.ಎನ್.ಪ್ರಕಾಶರೆಡ್ಡಿ, ವೇಣುಗೋಪಾಲ್, ಹನುಮಂತರೆಡ್ಡಿ, ಗಿರೀಶ್, ಇ.ಮಂಜುನಾಥ್, ರಾಮ್ ದಾಸ್, ನಾಗರಾಜಪ್ಪ, ಖಾದರ್ ಸುಭಾನ್ ಖಾನ್, ಅಮರನಾರಾಯಣ ರೆಡ್ಡಿ, ವೇದಲವೇಣಿ ವೇಣು, ವೆಂಕಟರವಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು