ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣತಿದಾರರಿಗೆ ನಿಖರ ಮಾಹಿತಿ ನೀಡಿ

ಜಿಲ್ಲೆಯ ಏಳನೆಯ ಆರ್ಥಿಕ ಗಣತಿಗೆ ಚಾಲನೆ
Last Updated 18 ಡಿಸೆಂಬರ್ 2019, 15:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಆರ್ಥಿಕ ಗಣತಿಯಿಂದ ದೇಶದ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರು ನಿಖರ ಮಾಹಿತಿ ನೀಡಿ ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್.ಲತಾ ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲೆಯ 7ನೇ ಆರ್ಥಿಕ ಗಣತಿ ಪ್ರಕ್ರಿಯೆಗೆ ಮೊಬೈಲ್ ಆ್ಯಪ್‌ ಬಳಕೆಯ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದ ಪ್ರಗತಿಯ ಸೂಚ್ಯಂಕಗಳಾದ ರಾಷ್ಟ್ರೀಯ ತಲಾ ಆದಾಯ, ಜಿಡಿಪಿಗಳು ತಿಳಿಯುವುದರಿಂದ, ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ನಿಖರ ಮಾಹಿತಿ ನೀಡಿ, ಗಣತಿಯನ್ನು ಯಶಸ್ವಿಗೊಳಿಸಬೇಕು. ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಗಣತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದರಿಂದ ಅನೇಕ ತೊಡಕುಗಳನ್ನು ನಿವಾರಣೆಯಾಗಲಿವೆ. ಗಣತಿ ಪ್ರಕ್ರಿಯೆಯು ಡಿಜಿಟಲ್ ಆಗಿರುವುದರಿಂದ, ಗಣತಿ ಕಾರ್ಯ ಶೀಘ್ರವಾಗಿ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.

‘ಆರ್ಥಿಕ ಗಣತಿಯು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನಡೆಯಲಿದ್ದು, ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರಗಳ ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಆರ್ಥಿಕ ಚಟುವಟಿಕೆಯನ್ನು ಹೊಂದಿರುವ ಉದ್ಯಮಗಳನ್ನು ಪಟ್ಟಿ ಮಾಡಲಾಗುತ್ತದೆ. ಈ ಮೂಲಕ ರಾಜ್ಯ ಹಾಗೂ ದೇಶದ ಆರ್ಥಿಕ ಸ್ಥಿತಿಗತಿಯನ್ನು ಅರಿಯುವುದು ಇದರ ಮುಖ್ಯ ಉದ್ದೇಶವಾಗಿದೆ. ಅಲ್ಲದೇ, ಸರ್ಕಾರಿ ಯೋಜನೆಗಳನ್ನು ರೂಪಿಸಲು ಆರ್ಥಿಕ ಗಣತಿ ಸಹಾಯಕವಾಗಲಿದೆ’ ಎಂದು ತಿಳಿಸಿದರು.

‘ಆರ್ಥಿಕ ಗಣತಿಯನ್ನು 1977ರಿಂದ ಆರಂಭಗೊಂಡು ಪ್ರತಿ 5 ವರ್ಷಗಳಿಗೆ ನಡೆಸಲಾಗುತ್ತದೆ. ಅದರಂತೆ ಜಿಲ್ಲೆಯಲ್ಲಿ 7ನೇ ಆರ್ಥಿಕ ಗಣತಿ ಕೈಗೊಳ್ಳಲು ಜಿಲ್ಲೆಯಲ್ಲಿ 1,000 ಗಣತಿದಾರರನ್ನು ನಿಯೋಜಿಸಲಾಗಿದೆ. ಜತೆಗೆ, ಎರಡನೇ ಹಂತದ ಮೇಲ್ವಿಚಾರಣೆಯನ್ನು ಸಾಂಖ್ಯಿಕ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳಿಗೆ ವಹಿಸಲಾಗಿದೆ. ನಿಯೋಜಿತ ಗಣತಿದಾರರು ಪ್ರತಿ ಮನೆ, ವ್ಯಾವಹಾರಿಕ ಕಟ್ಟಡಗಳಿಗೆ ಭೇಟಿ ನೀಡಿ, ಅಗತ್ಯ ಮಾಹಿತಿಗಳನ್ನು ಕಲೆ ಹಾಕಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅಸಂಘಟಿತ ವಲಯಕ್ಕೆ ಸೇರಿದ ಬೀದಿ ಬದಿ ವ್ಯಾಪಾರಿಗಳು, ಹೂ, ಹಣ್ಣು ತರಕಾರಿ ಮಾರಾಟಗಾರರ ಆರ್ಥಿಕ ಚಟುವಟಿಕೆಗಳ ಮಾಹಿತಿಗಳು ನಿಖರವಾಗಿ ಲಭ್ಯವಾದರೆ ಜನರ ಜೀವನ ಮಟ್ಟ ಸುಧಾರಣೆಗೆ ಸೂಕ್ತ ಯೋಜನೆ, ನೀತಿ ನಿರೂಪಣೆಗೆ ಅನೂಕೂಲವಾಗುತ್ತವೆ’ ಎಂದು ಹೇಳಿದರು.

‘ಅರ್ಥಿಕ ಗಣತಿಗಾಗಿ ಗಣತಿದಾರರು ತಮ್ಮ ಮನೆಗಳಿಗೆ, ಉದ್ಯಮ ಘಟಕಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಿಖರವಾದ ಮಾಹಿತಿಯನ್ನು ಸಾರ್ವಜನಿಕರು ಮತ್ತು ಉದ್ದಿಮೆದಾರರು ನೀಡಿ ಸದರಿ ಗಣತಿ ಕಾರ್ಯ ಯಶಸ್ವಿಯಾಗಲು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಸಹಾಯಕ ಸಾಂಖ್ಯಿಕ ಅಧಿಕಾರಿ ಎಂ.ಮುನಿವೆಂಕಟಪ್ಪ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸಿ.ಎಲ್.ಶಿವಕುಮಾರ್, ಜಿಲ್ಲಾ ವ್ಯವಸ್ಥಾಪಕರಾದ ಮಹೇಶ್ ಮತ್ತು ಸುನೀಲ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT