ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಕಾಂಗ್ರೆಸ್ ನಾಯಕ ಶಿವಶಂಕರ ರೆಡ್ಡಿ ಬಿಜೆಪಿಗೆ?

‘ರಾಜ್ಯಸಭೆ ಚುನಾವಣೆ ಮುಗಿಯಲಿ, ಕಾದು ನೋಡೋಣ’ ಎಂದ ಮಾಜಿ ಸಚಿವ
Published 19 ಫೆಬ್ರುವರಿ 2024, 0:07 IST
Last Updated 19 ಫೆಬ್ರುವರಿ 2024, 0:07 IST
ಅಕ್ಷರ ಗಾತ್ರ

ಗೌರಿಬಿದನೂರು: ಮಾಜಿ ಸಚಿವ ಹಾಗೂ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ ಎನ್‌.ಎಚ್.ಶಿವಶಂಕರ ರೆಡ್ಡಿ ಅವರು ಬಿಜೆಪಿ ಸೇರುತ್ತಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ಜೋರಾಗಿ ನಡೆಯುತ್ತಿದೆ. 

ಬಿಜೆಪಿಯ ಮುಖಂಡರು ಸಹ ಶಿವಶಂಕರ ರೆಡ್ಡಿ ಅವರನ್ನು ಸಂಪರ್ಕಿಸಿದ್ದಾರೆ ಎನ್ನುತ್ತವೆ ಮೂಲಗಳು. ‘ಕೆಲವು ವಿಚಾರಗಳನ್ನು ಈಗ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ತಿಳಿಯಲಿದೆ’ ಎಂದು ಮಾಜಿ ಸಚಿವರ ಆಪ್ತರು ಪ್ರತಿಕ್ರಿಯಿಸಿದ್ದಾರೆ.

‘ಬಿಜೆಪಿ ಸೇರುವಿರಾ’ ಎನ್ನುವ ಪ್ರಶ್ನೆಗೆ ಶಿವಶಂಕರ ರೆಡ್ಡಿ ಅವರು, ‘ಕಾದು ನೋಡೋಣ’ ಎಂದು ಚುಟುಕಾಗಿ ಉತ್ತರಿಸಿದರು. ‘ನಾನು ಕಾಂಗ್ರೆಸ್‌ ಟಿಕೆಟ್ ಕೇಳುತ್ತಿದ್ದೇನೆ. ಎಲ್ಲ ವಿಚಾರಗಳ ಬಗ್ಗೆ ಒಂದು ಸ್ಪಷ್ಟತೆ ಬರಲಿ. ರಾಜ್ಯಸಭೆ ಚುನಾವಣೆ ಪೂರ್ಣವಾಗಲಿ. ಅಲ್ಲಿಯವರೆಗೆ ಕಾದು ನೋಡೋಣ’ ಎಂದರು.

ಶಿವಶಂಕರ ರೆಡ್ಡಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಡಿಸೆಂಬರ್‌ನಲ್ಲಿ ವೀಕ್ಷಕ ಜಮೀರ್ ಅಹಮದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ನಾಯಕರು ರೆಡ್ಡಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 

ಮಾಜಿ ಸಂಸದ ಎಂ. ವೀರಪ್ಪ ಮೊಯಿಲಿ ಮತ್ತು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಸಹ ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಇಬ್ಬರು ನಾಯಕರು ಈಗಾಗಲೇ ಸಂಘಟನೆಯಲ್ಲಿ ತೊಡಗಿದ್ದಾರೆ. ಟಿಕೆಟ್ ವಿಚಾರವಾಗಿ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳನ್ನು ಗಮನಿಸಿ ಶಿವಶಂಕರ ರೆಡ್ಡಿ ಮುಂದಿನ ಹೆಜ್ಜೆ ಇಡುವ ಸಾಧ್ಯತೆ ಇದೆ.

ಶಿವಶಂಕರ ರೆಡ್ಡಿ ಅವರ ರಾಜಕೀಯ ಎದುರಾಳಿಯೂ ಆದ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಗೌಡರ ಅಳಿಯ ಶಾಸಕ ಶರತ್ ಬಚ್ಚೇಗೌಡ ಕಿಯೋನಿಕ್ಸ್ ಅಧ್ಯಕ್ಷರಾಗಿದ್ದಾರೆ. ಪುಟ್ಟಸ್ವಾಮಿ ಗೌಡ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ. 

ಶಿವಶಂಕರ ರೆಡ್ಡಿ ಕಾಂಗ್ರೆಸ್‌ ಪಕ್ಷದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಭಾವಿ ಎನಿಸಿದ್ದವರು. ಆದರೆ ಈಗ ವರ್ಗಾವಣೆ, ನಾಮನಿರ್ದೇಶನಗಳ ವಿಚಾರದಲ್ಲಿ ಅವರ ಮಾತಿಗೆ ಹೆಚ್ಚಿನ ಮನ್ನಣೆ ಸಹ ದೊರೆಯುತ್ತಿಲ್ಲ.

ಈ ಎಲ್ಲ ಬೆಳವಣಿಗೆಗಳ ಕಾರಣದಿಂದ ಶಿವಶಂಕರ ರೆಡ್ಡಿ ಕಾಂಗ್ರೆಸ್‌ ವರಿಷ್ಠರೊಂದಿಗೆ ಮುನಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಈ ಹಿಂದಿನಿಂದಲೂ ಬಿಜೆಪಿಗೆ ಹೇಳಿಕೊಳ್ಳುವಂತಹ ನೆಲೆಗಟ್ಟು ಇಲ್ಲ. ಹಾಗಾಗಿ ಕಾಂಗ್ರೆಸ್‌ ಪ್ರಭಾವಿ ನಾಯಕರಿಗೆ ಬಿಜೆಪಿಯಲ್ಲಿ ಸಹಜವಾಗಿ ರತ್ನಗಂಬಳಿ ಸ್ವಾಗತ ದೊರೆಯಲಿದೆ. 

ಸದ್ಯ ಯಲಹಂಕ ಶಾಸಕ ವಿಶ್ವನಾಥ್ ಅವರ ಪುತ್ರ ಅಲೋಕ್ ಮತ್ತು ಮಾಜಿ ಸಚಿವ ಡಾ.ಕೆ.ಸುಧಾಕರ್ ಬಿಜೆಪಿ ಟಿಕೆಟ್‌ನ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಒಂದು ವೇಳೆ ಶಿವಶಂಕರ ರೆಡ್ಡಿ ಅವರು ಬಿಜೆಪಿಗೆ ಕಾಲಿಟ್ಟರೆ ಮತ್ತೊಂದು ರೀತಿಯ ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಲಿದೆ. 

ಐದು ಬಾರಿ ಶಾಸಕ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟಿದ ನಾಯಕರಲ್ಲಿ ಶಿವಶಂಕರ ರೆಡ್ಡಿ ಮುಂಚೂಣಿ ಸಾಲಿನಲ್ಲಿ ನಿಲ್ಲುತ್ತಾರೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 1999ರ ಚುನಾವಣೆಯಿಂದ 2018ರ ಚುನಾವಣೆಯವರೆಗೂ ಸತತ ಐದು ಬಾರಿ ಗೆಲುವು ಕಂಡಿದ್ದಾರೆ. ವಿಧಾನಸಭೆ ಉಪಾಧ್ಯಕ್ಷ ಕೃಷಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಚ್.ಪುಟ್ಟಸ್ವಾಮಿ ಗೌಡ ವಿರುದ್ಧ ಸೋಲು ಕಂಡಿದ್ದಾರೆ.

ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಆಪರೇಷನ್

ಯಾವುದೇ ಚುನಾವಣೆ ಸಮಯದಲ್ಲಿ ಸ್ಥಳೀಯ ಪ್ರಬಲ ನಾಯಕರಿಂದ ಹಿಡಿದು ಮಾಜಿ ಶಾಸಕರು ಮಾಜಿ ಜನಪ್ರತಿನಿಧಿಗಳಿಗೆ ‘ಆಪರೇಷನ್’ ನಡೆಯುವುದು ಸಹಜ. ಲೋಕಸಭೆ ಚುನಾವಣೆಯು ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಮತ್ತು ಬಿಜೆಪಿಯಿಂದ ಕಾಂಗ್ರೆಸ್‌ಗೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ನಾಯಕರು ‘ಪಲ್ಲಟ’ವಾಗುವುದು ಖಚಿತ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಆಪರೇಷನ್ ಜೋರಾಗುವ ಸಾಧ್ಯತೆ ದಟ್ಟವಾಗಿದೆ.

ಮುನಿಸಿಗೆ ಕಾರಣ ಏನು?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್ ಕೋಲಾರ– ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಜೆ.ಕಾಂತರಾಜು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ವಿ.ರಾಘವೇಂದ್ರ ಹನುಮಾನ್ ಗೌರಿಬಿದನೂರು ನಗರಸಭೆ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲ್ಲಾ ಮತ್ತು ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಚಿಕ್ಕಣ್ಣ ಅವರನ್ನು ಉಚ್ಛಾಟಿಸುವಂತೆ ಒತ್ತಾಯಿಸಿದ್ದರು.  ಆ ಪರಿಣಾಮ ವಿಧಾನಸಭೆ ಚುನಾವಣೆಯ ತರುವಾಯ ಜೂ.23ರಂದು ಕೆಪಿಸಿಸಿ ಶಿಸ್ತು ಸಮಿತಿಯು ಕಾಂಗ್ರೆಸ್ ಪಕ್ಷದಿಂದ ಈ ಮುಖಂಡರನ್ನು ಅಮಾತುಗೊಳಿಸಿತ್ತು. ಆದರೆ ಕಳೆದ ಜನವರಿ ಮೂರನೇ ವಾರ ಈ ಉಚ್ಛಾಟನೆ ಆದೇಶವನ್ನು ಪಕ್ಷವು ವಾಪಸ್ ಪಡೆದಿದೆ. ಶಿವಶಂಕರ ರೆಡ್ಡಿ ಅವರನ್ನು ವಿಶ್ವಾಸಕ್ಕೆ ಪಡೆಯದೆ ಈ ಅಮಾನತು ಆದೇಶ ವಾಪಸ್ ಪಡೆಯಲಾಗಿದೆ ಎನ್ನುತ್ತವೆ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT