ಗುರುವಾರ , ಅಕ್ಟೋಬರ್ 21, 2021
21 °C

ಗೌರಿಬಿದನೂರು ನಗರಸಭೆಯಲ್ಲಿ ಸಚಿವ ಎಂ.ಟಿ.ಬಿ.ನಾಗರಾಜ್ ಪ್ರಗತಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ಕೇವಲ ಖಾತೆ ಬದಲಾವಣೆ ಮತ್ತು ಬಡಾವಣೆ ನಿರ್ಮಾಣಗಳಲ್ಲಿ ಹಣ ಮಾಡುವುದನ್ನು ಬಿಟ್ಟು 14 ಮತ್ತು 15ನೇ ಹಣಕಾಸು ಯೋಜನೆ, ನಗರೋತ್ಥಾನ ಯೋಜನೆ ಹಾಗೂ ಎಸ್‍ಎಫ್‍ಸಿ ಯೋಜನೆಗಳಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬಿಡುಗಡೆ ಆಗಿರುವ ಅನುದಾನವನ್ನು ಸಮರ್ಪಕ ಮತ್ತು ಸಂಪೂರ್ಣವಾಗಿ ಬಳಕೆ ಮಾಡುವ ಮೂಲಕ ನಗರದ ಜನರ ಮೂಲ ಸೌಕರ್ಯಗಳನ್ನು ‌ಒದಗಿಸಬೇಕು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂ.ಟಿ.ಬಿ.ನಾಗರಾಜ್ ಸೂಚಿಸಿದರು.

ನಗರಸಭೆ ಕಚೇರಿಯಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನಗರೋತ್ಥಾನ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯಡಿ ಪ್ರತಿ ನಗರಸಭೆಗೆ ವಾರ್ಷಿಕ ₹ 25 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಗೌರಿಬಿದನೂರಿಗೆ 2019-20 ನೇ ಸಾಲಿನಲ್ಲಿ ₹ 25 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡಬೇಕು ಎಂದರು.

14 ಮತ್ತು 15 ನೇ ಹಣಕಾಸು ಮತ್ತು ಎಸ್‍ಎಫ್‍ಸಿ ಅನುದಾನವನ್ನೂ ಕೂಡ ಸಮರ್ಪಕವಾಗಿ ಬಳಕೆ ಮಾಡುವ ಮೂಲಕ ನಗರದ ವಿವಿಧ ಬಡಾವಣೆಯಲ್ಲಿನ ನಾಗರಿಕರಿಗೆ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಇನ್ನಿತರ ಮೂಲ ‌ಸೌಕರ್ಯಗಳನ್ನು ಒದಗಿಸಬೇಕು. ‌ಕೇವಲ ಅನುದಾನವನ್ನು ಅವೈಜ್ಞಾನಿಕವಾಗಿ ಬಳಕೆ ಮಾಡದೆ ವ್ಯವಸ್ಥಿತ ರೀತಿಯಲ್ಲಿ ಬಳಸಬೇಕು ಎಂದು ಹೇಳಿದರು. 

ಸಮರ್ಪಕವಾಗಿ ತೆರಿಗೆ ವಸೂಲಿ, ವಾಣಿಜ್ಯ ಮಳಿಗೆಗಳ ಬಾಡಿಗೆ ಸಂಗ್ರಹಣೆ ಸೇರಿದಂತೆ ಇನ್ನಿತರ ಮೂಲಗಳಿಂದ ಸಂಗ್ರಹವಾಗುವ ಹಣವನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದರು.

ನಗರ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ನಗರ ವ್ಯಾಪ್ತಿಯಲ್ಲಿ ಕೈಗೊಳ್ಳುವ ಯಾವುದೇ ಕಾಮಗಾರಿಗಳು ಗುಣಮಟ್ಟ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಗುತ್ತಿಗೆದಾರರು ಕ್ರಿಯಾಯೋಜನೆಯಂತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಅನವಶ್ಯಕವಾಗಿ ಜನರಿಗೆ ಸಂಕಷ್ಟ ತಂದೊಡ್ಡುವಂತಹ ಕಾಮಗಾರಿಗಳು ನಡೆಸುವುದನ್ನು ನಿಲ್ಲಿಸಬೇಕು
ಎಂದು ಸೂಚಿಸಿದರು.

ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಗೌರಿಬಿದನೂರು ನಗರವು ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿ 3 ವರ್ಷ ಕಳೆದಿದೆ. ನಗರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ನಗರದ ಸುತ್ತಮುತ್ತಲಿನ ಹಲವು ಗ್ರಾಮಗಳು ಮತ್ತು 2-3 ಗ್ರಾಮ ಪಂಚಾಯಿತಿಗಳು ನಗರಸಭೆ ವ್ಯಾಪ್ತಿಗೆ ಬಂದಿವೆ. ಈ ಭಾಗದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಇದಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

 ನಗರಸಭೆ ಅಧ್ಯಕ್ಷೆ ಕೆ.ಎಂ.ಗಾಯತ್ರಿ ಬಸವರಾಜ್, ತಹಶೀಲ್ದಾರ್ ಎಚ್.ಶ್ರೀನಿವಾಸ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ಪೌರಾಯುಕ್ತ ಸತ್ಯನಾರಾಯಣ ಮತ್ತು ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಗೂ ಮುನ್ನಾ ತಉತ್ತರ ಪಿನಾಕಿನಿ ನದಿಯ ಕಿಂಡಿ ಅಣೆಕಟ್ಟಿಗೆ ನೀರು ಸಚಿವರು ಬಾಗಿನ ಅರ್ಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು